ADVERTISEMENT

ಶ್ಯಾನುಭೋಗನಹಳ್ಳಿ: ಪಿಂಚಣಿ ಸಮಸ್ಯೆಗೆ ಅದಾಲತ್‌ನಲ್ಲಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 5:38 IST
Last Updated 8 ಡಿಸೆಂಬರ್ 2023, 5:38 IST
ರಾಮನಗರ ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಬುಧವಾರ ಪಿಂಚಣಿ ಅದಾಲತ್ ನಡೆಯಿತು
ರಾಮನಗರ ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಬುಧವಾರ ಪಿಂಚಣಿ ಅದಾಲತ್ ನಡೆಯಿತು   

ರಾಮನಗರ: ‘ಹಿರಿಯ ನಾಗರಿಕರು ಪಿಂಚಣಿಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ಸ್ಥಳದಲ್ಲೇ ಅದಕ್ಕೆ ಪರಿಹಾರ ಪಡೆದುಕೊಳ್ಳಲು ಪಿಂಚಣಿ ಅದಾಲತ್ ಕಾರ್ಯಕ್ರಮ ಅತ್ಯಂತ ಪ್ರಯೋಜನಕಾರಿಯಾಗಿದೆ’ ಎಂದು ಶ್ಯಾನುಭೋಗನಹಳ್ಳಿ ಗ್ರಾಪಂ ಅಧ್ಯಕ್ಷ ಡಿ.ಪಿ. ನರಸಿಂಹಮೂರ್ತಿ ಹೇಳಿದರು.

ತಾಲ್ಲೂಕಿನ ಕೂಟಗಲ್ ಹೋಬಳಿ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಸಹಯೋಗದೊಂದಿಗೆ ಪಂಚಾಯಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಪಿಂಚಣಿ ಸೌಲಭ್ಯಗಳು ಗ್ರಾಮೀಣ ಜನರಿಗೆ ಸರಿಯಾಗಿ ತಲುಪಬೇಕು. ಜನರು ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡದೆ, ಅವರಿರುವ ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಆಶಯ ಶಾಸಕ ಎಚ್.ಸಿ. ಬಾಲಕೃಷ್ಣ ಅವದ್ದಾಗಿದೆ. ಅವರ ಸೂಚನೆಯಂತೆ, ಪಿಂಚಣಿ ಅದಾಲತ್ ಆಯೋಜಿಸಲಾಗಿದೆ’ ಎಂದರು.

ADVERTISEMENT

‘ಅದಾಲತ್‌ನಿಂದಾಗಿ ಶ್ಯಾನುಭೋಗನಹಳ್ಳಿ, ಡಣಾಯಕನಪುರ, ವಡ್ಡರದೊಡ್ಡಿ, ಚೌಡೇಶ್ವರಿಹಳ್ಳಿ, ಕೃಷ್ಣರಾಜಪುರ, ಆನಮಾನಹಳ್ಳಿ, ಕ್ಯಾಸಾಪುರ, ಕಣ್ವ ಗ್ರಾಮಗಳ ಹಿರಿಯ ನಾಗರಿಕರಿಗೆ ಪ್ರಯೋಜನವಾಗಿದೆ’ ಎಂದು ತಿಳಿಸಿದರು.

ಉಪ ತಹಸೀಲ್ದಾರ್ ಕೃಷ್ಣ ಮಾತನಾಡಿ, ‘ಅದಾಲತ್‍ನಲ್ಲಿ 10 ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅರ್ಹ ಫಲಾನುಭವಿಗೆ ಸ್ಥಳದಲ್ಲಿಯೇ ಆದೇಶ ಪತ್ರ ವಿತರಿಸಲಾಯಿತು. ₹800ರಿಂದ ₹1200ಕ್ಕೆ ವೃದ್ಧಾಪ್ಯ ವೇತನ ಏರಿಕೆಗೆ ಸಂಬಂಧಿಸಿದಂತೆ, 172 ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲವನ್ನು ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡಲಾಗುವುದು’ ಎಂದರು.

‘ಅದಾಲತ್ ಅನ್ನು ಡಿ. 13ರಂದು ಲಕ್ಷ್ಮೀಪುರ ಪಂಚಾಯಿತಿ ಆವರಣ, 20ರಂದು ಕೂಟಗಲ್ ಪಂಚಾಯಿತಿ ಆವರಣ ಹಾಗೂ 27ರಂದು ಜಾಲಮಂಗಲ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದೆ. ಫಲಾನುಭವಿಗಳು ಇದರ ಅನುಕೂಲ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಶ್ಯಾನುಭೋಗನಹಳ್ಳಿ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಸಾವಿತ್ರಮ್ಮ ಸಿದ್ಧಾಚಾರಿ, ಅಭಿಲಾಷರವಿ, ಲಕ್ಷ್ಮಿಮುನಿರಾಜ್, ಕೃಷ್ಣ, ನಂದನ್, ಗೋವಿಂದರಾಜು, ನಾಗರತ್ನ, ಸತ್ಯನಾರಾಯಣ, ನಾಗೇಶ್, ಪ್ರೇಂಕುಮಾರ್, ಗೌರಮ್ಮ, ಮಂಜುನಾಥ್, ಶೋಭಾ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರಾದ ಪ್ರಸನ್ನಕುಮಾರ್, ವಿ.ಎ. ಪ್ರಸನ್ನ, ಶಾಸಕ ಬಾಲಕೃಷ್ಣ ಆಪ್ತ ಸಹಾಯಕ ರವಿ, ಮುಖಂಡ ಎಸ್.ಪಿ. ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.