ADVERTISEMENT

ರಾಮನಗರ | Shakti Scheme - 10 ದಿನ: 8.65 ಲಕ್ಷ ಮಹಿಳೆಯರ ಪ್ರಯಾಣ

‘ಶಕ್ತಿ ಯೋಜನೆ’ಗೆ ಜಿಲ್ಲೆಯಲ್ಲಿ ಭರ್ಜರಿ ಪ್ರತಿಕ್ರಿಯೆ; ಮೊದಲ ಸ್ಥಾನದಲ್ಲಿ ಕನಕಪುರ ಡಿಪೊ

ಓದೇಶ ಸಕಲೇಶಪುರ
Published 23 ಜೂನ್ 2023, 4:59 IST
Last Updated 23 ಜೂನ್ 2023, 4:59 IST
ರಾಮನಗರ ಬಸ್ ನಿಲ್ದಾಣಕ್ಕೆ ಬಂದ ಬಸ್‌ನಲ್ಲಿ ಸೀಟು ಕಾಯ್ದಿರಿಸಲು ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಕಸರತ್ತು
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ರಾಮನಗರ ಬಸ್ ನಿಲ್ದಾಣಕ್ಕೆ ಬಂದ ಬಸ್‌ನಲ್ಲಿ ಸೀಟು ಕಾಯ್ದಿರಿಸಲು ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಕಸರತ್ತು ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಶಕ್ತಿ ಯೋಜನೆ’ಗೆ ಜಿಲ್ಲೆಯ ಮಹಿಳೆಯರಿಂದ ದಿನದಿಂದ ದಿನಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ.

ಕೆಲಸ–ಕಾರ್ಯದ ನಿಮಿತ್ತ ನಿತ್ಯ ಪ್ರಯಾಣಕ್ಕೆ ರೈಲು, ಖಾಸಗಿ ಬಸ್, ಆಟೊ ಸೇರಿದಂತೆ ಇನ್ನಿತರ ವಾಹನಗಳನ್ನು ಅವಲಂಬಿಸಿದ್ದ ಮಹಿಳೆಯರು ಇದೀಗ ಬಸ್‌ಗಳತ್ತ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳು ಸಹ ಖಾಸಗಿ ವಾಹನಗಳ ಬದಲು ಶಾಲಾ–ಕಾಲೇಜಿಗೆ ಹೋಗಲು ಸರ್ಕಾರಿ ಬಸ್‌ಗಳನ್ನೇ ಹತ್ತುತ್ತಿದ್ದಾರೆ.

ನೆಚ್ಚಿನ ಆಯ್ಕೆ: ರಾಜಧಾನಿ ಬೆಂಗಳೂರಿಗೆ ಜಿಲ್ಲೆಯಿಂದ ನಿತ್ಯ ಸಾವಿರಾರು ಜನ ಕೆಲಸಕ್ಕೆ ಹೋಗುತ್ತಾರೆ. ಸರ್ಕಾರಿ ನೌಕರರು, ಖಾಸಗಿ ಕಂಪನಿಗಳ ಉದ್ಯೋಗಿಗಳು, ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಅಸಂಘಟಿತ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರ–ವಹಿವಾಟು ಮಾಡುವವರಿಗೆ ಸರ್ಕಾರಿ ಬಸ್‌ಗಳೇ ನೆಚ್ಚಿನ ಆಯ್ಕೆಯಾಗಿವೆ.

ADVERTISEMENT

ಜಿಲ್ಲೆಯಲ್ಲಿರುವ ಕೆಎಸ್ಆರ್‌ಟಿಸಿಯ ಆರು ಡಿಪೊಗಳಲ್ಲಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕನಕಪುರ ಡಿಪೊ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸಿದ್ದಾರೆ. ಬೆಂಗಳೂರಿಗೆ ಹೊಂದಿಕೊಂಡಂತಿರುವ ಆನೆಕಲ್‌ನಲ್ಲಿ ಅತಿ ಕಡಿಮೆ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ.

ಬದುಕು ನಿರಾಳ: ‘ಗಾರ್ಮೆಂಟ್ಸ್ ಕೆಲಸಕ್ಕಾಗಿ ನಿತ್ಯ ಬೆಂಗಳೂರಿಗೆ ಓಡಾಡುವ ನಾವು, ಊರಿಗೆ ಬರುವ ಬೆಳಗ್ಗಿನ ಬಸ್‌ನಲ್ಲಿ ರಾಮನಗರಕ್ಕೆ ಬರುತ್ತಿದ್ದೆವು. ಬಸ್ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ನಡೆದುಕೊಂಡು ಹೋಗಿ, ರೈಲು ಹತ್ತಿ ಬೆಂಗಳೂರಿಗೆ ಹೋಗುತ್ತಿದ್ದೆವು. ಬಸ್ ಮತ್ತು ರೈಲು ಟಿಕೆಟ್‌ಗೆ ತಿಂಗಳಿಗೆ ಏನಿಲ್ಲವೆಂದರೂ ಕನಿಷ್ಠ ₹2 ಸಾವಿರ ಬೇಕಾಗುತ್ತಿತ್ತು. ಶಕ್ತಿ ಯೋಜನೆಯು ಆ ಮೊತ್ತವನ್ನು ಉಳಿಸಿತು’ ಎಂದು ಗಾರ್ಮೆಂಟ್ಸ್ ಉದ್ಯೋಗಿ ಲಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಚಿತ ಪ್ರಯಾಣದಿಂದಾಗಿ ಉಳಿದ ಮೊತ್ತವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವೆ. ಉಚಿತ ಕೊಟ್ಟರೆ ಸೋಮಾರಿಗಳಾಗುತ್ತಾರೆ ಎನ್ನುವವರಿಗೆ ಬಡವರ ಬದುಕಿನ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಬೆಲೆ ಏರಿಕೆಯಿಂದ ನಲುಗಿರುವ ನಮಗೆ, ಉಚಿತ ಅಕ್ಕಿ ಮತ್ತು ಬಸ್ ಪ್ರಯಾಣವು ನಿರಾಳವಾಗಿಸಿದೆ’ ಎಂದು ‘ಶಕ್ತಿ ಯೋಜನೆ’ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾವಲಂಬನೆಗೆ ಸಹಕಾರಿ: ‘ಮಹಿಳಾ ಸ್ವಾವಲಂಬನೆ ನಿಟ್ಟಿನಲ್ಲಿ ಶಕ್ತಿ ಯೋಜನೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಎಲ್ಲೇ ಹೋಗಬೇಕಾದರೂ ಬಸ್ ಟಿಕೆಟ್‌ಗಾಗಿ ಗಂಡನ ಮುಂದೆ ಕೈ ಚಾಚುವುದನ್ನು ಯೋಜನೆ ತಪ್ಪಿಸಿದೆ. ಮಹಿಳೆಯರ ದುಡಿಯುವ ಹಂಬಲಕ್ಕೆ ಇಂಬು ಕೊಟ್ಟಿದೆ’ ಎಂದು ಚನ್ನಪಟ್ಟಣದ ಉಪನ್ಯಾಸಕಿ ಉಷಾ ಅಭಿಪ್ರಾಯಪಟ್ಟರು.

‘ಯಾವುದೇ ಯೋಜನೆ ಜಾರಿಯಾದಾಗ ಆರಂಭದಲ್ಲಿ ಒಂದಿಷ್ಟು ವಿಘ್ನಗಳು ಎದುರಾಗುವುದು ಸಹಜ. ವಿವಿಧ ರೀತಿಯ ತೊಂದರಗಳು ಸಹ ಆಗುತ್ತವೆ. ಅವೆಲ್ಲದರ ಪ್ರಮಾಣ ಕೇವಲ ಶೇ 15 ಇರಬಹುದು. ಹಾಗಂತ, ಶೇ 85ರಷ್ಟು ಅನುಕೂಲವಿರುವ ಯೋಜನೆಯನ್ನು ವಿರೋಧಿಸಿ ಮನಬಂದಂತೆ ಮಾತನಾಡಬಾರದು. ಏನು ಬದಲಾವಣೆ ಮಾಡಬೇಕು ಎಂಬುದನ್ನು ಹೇಳಬೇಕು. ಆಗ ಸರ್ಕಾರವೂ ಅದಕ್ಕೆ ಸ್ಪಂದಿಸುತ್ತದೆ’ ಎಂದರು.

ರಾಮನಗರ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತಲು ನೂಕುನುಗ್ಗಲು ಕಂಡುಬಂತು ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಜಗದೀಶ್ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ ರಾಮನಗರ
ಪ್ರಮೀಳಾ ಬೀದಿ ಬದಿ ವ್ಯಾಪಾರಿ ರಾಮನಗರ
ಆಶಾರಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯರೇಹಳ್ಳಿ ಮಾಗಡಿ
ಕೆ.ಟಿ. ಲಕ್ಷ್ಮಮ್ಮ ಚನ್ನಪಟ್ಟಣ

Highlights - ಅಂಕಿಅಂಶ... ಡಿಪೊವಾರು ಪ್ರಯಾಣದ ವಿವರ ಡಿಪೊ;ಪ್ರಯಾಣ ಕನಕಪುರ;1,99,359ಆನೇಕಲ್;72,516ಚನ್ನಪಟ್ಟಣ;1,81,034ಹಾರೋಹಳ್ಳಿ;91,794ರಾಮನಗರ;1,99,133ಮಾಗಡಿ;1,21,896ಒಟ್ಟು;8,65,732

Quote - ‘ಶಕ್ತಿ ಯೋಜನೆ’ ನಿಜಕ್ಕೂ ಮಹಿಳೆಯರಿಗೆ ಶಕ್ತಿಯನ್ನು ತುಂಬಿದೆ. ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು –ಜಗದೀಶ್ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ ರಾಮನಗರ

Quote - ತರಕಾರಿ ತರಲು ಬೆಂಗಳೂರಿಗೆ ಓಡಾಡುವ ಶಕ್ತಿ ಯೋಜನೆಯಿಂದ ಅನುಕೂಲವಾಯಿತು. ಕೈಯಲ್ಲಿ ಮೂರು ಕಾಸು ಉಳಿಯುತ್ತಿದೆ. ಸರ್ಕಾರದವ್ರು ಬಡವರಿಗೆ ಬಸ್‌ ಫ್ರೀ ಮಾಡಿ ಒಳ್ಳೆಯದು ಮಾಡವ್ರೆ – ಪ್ರಮೀಳಾ ಬೀದಿ ಬದಿ ವ್ಯಾಪಾರಿ ರಾಮನಗರ

Quote - ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರ ಸ್ವಾವಲಂಬನೆಗೆ ಪೂರಕವಾಗಿದೆ. ಆರ್ಥಿಕ ಅವಲಂಬನೆಯನ್ನು ತಗ್ಗಿಸುವಲ್ಲಿ ಈ ಯೋಜನೆ ಮುಖ್ಯ ಪಾತ್ರ ವಹಿಸುತ್ತಿದೆ – ಆಶಾರಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯರೇಹಳ್ಳಿ ಮಾಗಡಿ

Quote - ಶಕ್ತಿ ಯೋಜನೆ ಮಹಿಳೆಯರ ಪಾಲಿಗೆ ನಿಜಕ್ಕೂ ವರವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದರಿಂದ ಹೆಚ್ಚಿನ ಬಸ್‌ ವ್ಯವಸ್ಥೆ ಮಾಡಬೇಕು – ಕೆ.ಟಿ. ಲಕ್ಷಮ್ಮ ಚನ್ನಪಟ್ಟಣ

Cut-off box - ವಾರಾಂತ್ಯದಲ್ಲಿ ಸೀಟು ಸಿಗುವುದಿಲ್ಲ ಶಕ್ತಿ ಯೋಜನೆಯಿಂದಾಗಿ ವಾರಾಂತ್ಯದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳಲ್ಲಿ ದಿನವಿಡೀ ಭರ್ತಿಯಾಗಿರುತ್ತವೆ. ಗ್ರಾಮೀಣ ಭಾಗಗಳನ್ನು ಹೊರತುಪಡಿಸಿ ಬೆಂಗಳೂರು –ಮೈಸೂರು ಸೇರಿದಂತೆ ಪ್ರಮುಖ ಪ್ರವಾಸ ಸ್ಥಳಗಳ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಕಾಲಿಡುವುದಕ್ಕೂ ಜಾಗವಿರುವುದಿಲ್ಲ. ‘ಬೆಂಗಳೂರು–ಮೈಸೂರು ಮಾರ್ಗದಲ್ಲಿ ಶನಿವಾರ– ಭಾನುವಾರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗದ ಸ್ಥಿತಿ ಇರುತ್ತದೆ. ಅಷ್ಟರ ಮಟ್ಟಿಗೆ ಪ್ರಯಾಣಿಕರು ತುಂಬಿ ತುಳುಕುತ್ತಿರುತ್ತಾರೆ. ಅದರಲ್ಲೂ ಮಹಿಳೆಯರೇ ಹೆಚ್ಚಾಗಿರುತ್ತಾರೆ. ಬಸ್ ಟಿಕೆಟ್ ಶುಲ್ಕದ ಗೊಡವೆ ಇಲ್ಲದೆ ತಮ್ಮ ಊರು ನೆಂಟರ ಮನೆ ದೇವಸ್ಥಾನ ಪ್ರವಾಸ ಸ್ಥಳಗಳಿಗೆ ಕುಟುಂಬದೊಂದಿಗೆ ಹೋಗಿ–ಬರಲು ಶಕ್ತಿ ಯೋಜನೆ ಮಹಿಳೆಯರಿಗೆ ವರವಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಬಸ್ ಚಾಲಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.