ಕನಕಪುರ: ಕಡುಬಡವರು, ಕಾಡಂಚಿನ ಗಡಿಭಾಗದ ಕುಗ್ರಾಮದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಉಚಿತವಾಗಿ ಸಿಗಬೇಕು. ಯಾರು ಆರೋಗ್ಯ ಸಮಸ್ಯೆಯಿಂದ ಬಳಲಬಾರದು ಎಂದು ನಿರ್ಮಿಸಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದೆ ರೋಗಿಗಳು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ.
ತಮಿಳುನಾಡು ರಾಜ್ಯದ ಗಡಿಪ್ರದೇಶ ಹಂಚಿಕೊಂಡಿರುವ ತಾಲ್ಲೂಕಿನ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂತಹ ಪರಿಸ್ಥಿತಿ ಇದೆ.
ಕೋಡಿಹಳ್ಳಿ ಹೋಬಳಿಯು 6 ಗ್ರಾಮ ಪಂಚಾಯಿತಿ, 3 ತಾಲ್ಲೂಕು ಪಂಚಾಯಿತಿ, 1 ಜಿಲ್ಲಾ ಪಂಚಾಯಿತಿ ಕ್ಷೇತ್ರ ಒಳಗೊಂಡಿದೆ. ಹೋಬಳಿಯು 50,000 ಜನಸಂಖ್ಯೆ ಹೊಂದಿದೆ. ಎಲ್ಲ ಇಲಾಖೆಗಳ ಕಚೇರಿ, ಬ್ಯಾಂಕ್ ಮತ್ತಿತರ ಸೌಕರ್ಯ ಹೊಂದಿದೆ.
ಇಲ್ಲಿ ಕಾಯಂ ವೈದ್ಯರ ಸ್ಥಾನ ಕಳೆದ ಒಂದು ವರ್ಷದಿಂದ ಖಾಲಿ ಇದೆ. 5 ಪ್ರೈಮರಿ ಹೆಲ್ತ್ ಕೇರ್ ಆಫೀಸರ್ ಸ್ಥಾನ ಖಾಲಿ ಇದೆ. 1 ಹೆಲ್ತ್ ಇನ್‌ಸ್ಪೆಕ್ಟರ್ ಸ್ಥಾನ 3 ವರ್ಷದಿಂದ ಖಾಲಿ ಇದೆ. ವೈದ್ಯಾಧಿಕಾರಿ ಸ್ಥಾನ ಖಾಲಿ ಇರುವುದರಿಂದ ತಾತ್ಕಾಲಿಕವಾಗಿ ಕೋಟೆಕೊಪ್ಪ ಮತ್ತು ಹೊಸದುರ್ಗ ವೈದ್ಯರನ್ನು ಇಲ್ಲಿ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
ಬೇರೆ ಕಡೆ ಕೆಲಸ ನಿರ್ವಹಿಸಬೇಕಿರುವುದರಿಂದ ಇಲ್ಲಿನ ಪ್ರಭಾರ ವೈದ್ಯರು ಸರಿಯಾಗಿ ಬರುತ್ತಿಲ್ಲ. ಸಿಬ್ಬಂದಿ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಆರೋಗ್ಯ ಸಮಸ್ಯೆಯಿಂದ ಬಳಲುವ ರೋಗಿಗಳು ಅನಿವಾರ್ಯವಾಗಿ ಕನಕಪುರ ಸರ್ಕಾರಿ ಆಸ್ಪತ್ರೆಗೆ ಹೋಗಬೇಕಿದೆ.
ಕನಕಪುರದಿಂದ ಸುಮಾರು 60 ರಿಂದ 70ಕಿಲೋಮೀಟರ್‌ನಲ್ಲಿ ಈ ಹೋಬಳಿಯ ಗ್ರಾಮಗಳಿವೆ. ಹೆರಿಗೆ, ಶಸ್ತ್ರಚಿಕಿತ್ಸೆಯಂತಹ ಆರೋಗ್ಯ ಸೇವೆ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಕನಕಪುರಕ್ಕೆ ಬರಬೇಕಿದೆ.
ಪಿಎಚ್‌ಸಿ ಮಲ್ದೇರ್ಜೆಗೆ ಏರಿಸಿ ಕಮ್ಯುನಿಟಿ ಹೆಲ್ತ್ ಸೆಂಟರ್ (ಸಿಎಚ್‌ಸಿ) ಮಾಡುವ ಮೂಲಕ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಎಲ್ಲ ಸಮಯದಲ್ಲೂ ಸಿಗಬೇಕೆಂಬುದು ಇಲ್ಲಿನ ಜನರ ಒತ್ತಾಯವಾಗಿದೆ.
ಆಸ್ಪತ್ರೆಗೆ ಈಗಾಗಲೇ ವಿಶಾಲವಾದ ಸುಸಜ್ಜಿತವಾದ ಒಳ್ಳೆಯ ಕಟ್ಟಡವಿದೆ. ಸಿಬ್ಬಂದಿಗೆ ಕ್ವಾಟ್ರಸ್ ಇದೆ. ಸುಮಾರು 4 ಎಕರೆ ಎಷ್ಟು, ಜಮೀನು ಇದ್ದು ಎಲ್ಲ ಮೂಲ ಸೌಕರ್ಯ ಹೊಂದಿರುವ ಪಿಎಚ್‌ಸಿಯನ್ನು ಸಿಎಚ್‌ಸಿ ಮಾಡುವ ಮೂಲಕ ಎಲ್ಲ ಆರೋಗ್ಯ ಸೇವೆ ಇಲ್ಲೇ ಸಿಗುವಂತೆ ಮಾಡಬೇಕಿದೆ.
ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಚಿಂತನೆ ನಡೆಸಬೇಕು. ಸಂಬಂಧಪಟ್ಟವರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಗಮನಹರಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ 24 ತಾಸು ಸಿಗುವಂತೆ ಮಾಡಬೇಕಿದೆ.
ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ವರ್ಷದಿಂದ ವೈದ್ಯಾಧಿಕಾರಿ ಇಲ್ಲದ ಕಾರಣ ಹೊಸದುರ್ಗ ಮತ್ತು ಕೋಟೆಕೊಪ್ಪದ ವೈದ್ಯರನ್ನೇ ಪ್ರಭಾರಿಯಾಗಿ ನಿಯೋಜನೆ ಮಾಡಲಾಗಿದೆ. ಇಲ್ಲಿ ಜನರಿಗೆ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಒಂದು ತಾಲ್ಲೂಕಿಗೆ 2 ಸಿಎಚ್‌ಸಿ ಮಾಡಲು ಅವಕಾಶ ಇರುವುದರಿಂದ ಕೋಡಿಹಳ್ಳಿಯಲ್ಲಿ 30 ಹಾಸಿಗೆಯ ಸಿಎಚ್‌ಸಿ ಮಾಡಿದರೆ ಜನರಿಗೆ ಅನುಕೂಲ ಆಗಲಿದೆ. ಇದಕ್ಕಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದೆ. ಸರ್ಕಾರ ಮಂಜೂರಾತಿ ನೀಡಿದರೆ ಸೀನಿಯರ್ ಮೆಡಿಕಲ್ ಆಫೀಸರ್ ಸೇರಿದಂತೆ 7 ವೈದ್ಯರು ಇಲ್ಲಿಗೆ ಬರಲಿದ್ದಾರೆ. ದಿನದ 24 ಗಂಟೆಯೂ ಇಲ್ಲಿ ಆರೋಗ್ಯ ಸೇವೆ ಸಿಗಲಿದೆ.ಡಾ.ರಾಜು, ತಾಲ್ಲೂಕು ಆರೋಗ್ಯ ಅಧಿಕಾರಿ, ಕನಕಪುರ
ಇಲ್ಲಿ ವಾಸಿಸುವವರು ಆರ್ಥಿಕವಾಗಿ ಹಿಂದುಳಿದ ಕಡುಬಡವರು. ಈ ಭಾಗದ ಜನರು ಆರೋಗ್ಯ ಸೇವೆಗಾಗಿ ಕನಕಪುರಕ್ಕೆ ಹೋಗುವುದು ತುಂಬ ಕಷ್ಟದ ಕೆಲಸ. ರಾತ್ರಿ 8ರ ಮೇಲೆ ಯಾವುದೇ ವಾಹನಗಳ ಅನುಕೂಲ ಇರುವುದಿಲ್ಲ. ಇದಕ್ಕಾಗಿ 24ಗಂಟೆ ಸೇವೆ ನೀಡುವ ಸಿಎಚ್‌ಸಿ ಮಾಡಿದರೆ ತುಂಬಾ ಅನುಕೂಲ ಆಗಲಿದೆ.
ನಂಜೇಗೌಡ, ವಕೀಲರು, ಕೋಡಿಹಳ್ಳಿ.
ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಯಂತಹ ಆರೋಗ್ಯ ಸೇವೆಗಾಗಿ ಹುಣಸನಹಳ್ಳಿ, ಕೊಳಗೊಂಡನಹಳ್ಳಿ, ಶಿವನೇಗೌಡದೊಡ್ಡಿಯಂತಹ ಕಾಡಂಚಿನ ಗ್ರಾಮಗಳ ಜನರು ಕನಕಪುರಕ್ಕೆ ಹೋಗಬೇಕಿದೆ. ಸಿಎಚ್‌ಸಿ ಮಾಡಲು ಇಲ್ಲಿ ಜಾಗ ಮತ್ತು ಆಸ್ಪತ್ರೆ ಕಟ್ಟಡವಿದೆ. ಅಗತ್ಯ ಇರುವಷ್ಟು ವೈದ್ಯರು, ಸಿಬ್ಬಂದಿ ನೇಮಿಸಿದರೆ ಅನುಕೂಲ ಆಗಲಿದೆ.
-ಚಂದ್ರಪ್ಪ, ಅರಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ, ಕೋಡಿಹಳ್ಳಿ
ಪ್ರಾಥಮಿಕ ಕೇಂದ್ರಕ್ಕೆ ವೈದ್ಯರ ಕೊರತೆ ಇದೆ. ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನ ಇಲ್ಲ. 50ಸಾವಿರ ಜನಸಂಖ್ಯೆ ಹೊಂದಿರುವ ಕೋಡಿಹಳ್ಳಿ ಹೋಬಳಿ ಕೇಂದ್ರದಲ್ಲಿ ಸಿಎಚ್‌ಸಿ ನಿರ್ಮಿಸಿದರೆ ಕನಕಪುರಕ್ಕೆ ಹೋಗುವುದು ತಪ್ಪಲಿದೆ. ಆರೋಗ್ಯ ಇಲಾಖೆಯು ಈಗಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು.
-ನಲ್ಲಳ್ಳಿ ಶ್ರೀನಿವಾಸ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಲ್ಲಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.