ಕನಕಪುರ: ನಾಡಿನ ಹೆಮ್ಮೆಯ ದಸರಾ ಹಬ್ಬದಲ್ಲಿ ಶಾಲಾ-ಕಾಲೇಜುಗಳಿಗೆ ಕೊಡುವ ದಸರಾ ರಜೆಯನ್ನು ಮೊಟಕುಗೊಳಿಸಿ ಧಾರ್ಮಿಕ ಭಾವನೆ ಮತ್ತು ಸಂಸ್ಕೃತಿಗೆ ರಾಜ್ಯ ಸರ್ಕಾರ ಧಕ್ಕೆ ತಂದಿದೆ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ ಗೌಡ ಆರೋಪಿಸಿದರು.
ಮೈಸೂರು ದಸರಾ ಪ್ರಯುಕ್ತ ನೀಡಲಾಗುವ ರಜೆಗಳನ್ನು ಶಿಕ್ಷಣ ಇಲಾಖೆ ಮೊಟಕುಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ತಾಲ್ಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರವು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ದಸರಾ ರಜೆಯನ್ನು ಕಡಿತಗೊಳಿಸಿದೆ. ದಸರಾ ಹಬ್ಬ ಹಾಗೂ ಉತ್ಸವದಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ನಾಡಿನ ಸಂಸ್ಕೃತಿ, ಕಲಾ ಶ್ರೀಮಂತಿಕೆ, ಪರಂಪರೆ ಯುವ ಜನತೆಗೆ ತಿಳಿಯಲಿ ಎಂದು ದಸರಾ ರಜೆ ನೀಡಲಾಗುತ್ತದೆ. ಕಾಂಗ್ರೆಸ್‌ನ ಹಿಂದೂ ವಿರೋಧಿ ಬುದ್ಧಿ ಇಲ್ಲಿಯೂ ತೋರಿಸಿದ್ದು, ಹಬ್ಬದ ರಜೆಗಳನ್ನು ಕಡಿತಗೊಳಿಸಲಾಗಿದೆ. ದಸರಾದಲ್ಲಿ ನೀಡಬೇಕಿದ್ದ ಶಾಲಾ-ಕಾಲೇಜು ರಜೆಗಳನ್ನು ಮೊಟಕುಗೊಳಿಸಿ ಕ್ರಿಸ್ಮಸ್ ಹಬ್ಬದಲ್ಲಿ ನೀಡಲಾಗುತ್ತಿದೆ ಎಂದು ಹರಿಹಾಯ್ದರು.
ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ನಾಳೆಯಿಂದಲೇ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ತಾಲ್ಲೂಕು ಅಧ್ಯಕ್ಷ ಮಹೇಶ್ ಗೌಡ, ಪದಾಧಿಕಾರಿಗಳಾದ ಅರುಣ್, ದುರ್ಗೇಶ್, ರಾಮಕೃಷ್ಣ ನಾಯಕ್, ಅಂದಾನಿಗೌಡ, ಪವನ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.