ADVERTISEMENT

ಕೋವಿಡ್ ಭೀತಿ: ‘ಸಪ್ತಪದಿ’ಗೆ ಮತ್ತೆ ವಿಘ್ನ

ಕೋವಿಡ್ ಭೀತಿ: ಸರಳ ಸಾಮಾಹಿಕ ವಿವಾಹ ಕಾರ್ಯಕ್ರಮ ಅನುಮಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 6:49 IST
Last Updated 22 ಏಪ್ರಿಲ್ 2021, 6:49 IST

ರಾಮನಗರ: ಕೋವಿಡ್‌ ಕಾರಣಕ್ಕೆ ಕಳೆದ ವರ್ಷ ಮುಂದೂಡಲ್ಪಟ್ಟಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಈ ವರ್ಷವೂ ನಡೆಯುವುದು ಅನುಮಾನವಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ನಿರಾಸೆ ತಂದಿದೆ.

ಸರಳ ಹಾಗೂ ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ‘ಸಪ್ತಪದಿ’ ಹೆಸರಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಂದಾಗಿತ್ತು.

ನಾಡಿನ ಪ್ರಮುಖ ದೇಗುಲಗಳಲ್ಲಿ 2020ರ ಏಪ್ರಿಲ್‌ 26 ಹಾಗೂ ಮೇ 24ರಂದು ಸಾಮೂಹಿಕ ವಿವಾಹಕ್ಕೆ ದಿನ ನಿಗದಿಯಾಗಿತ್ತು. ಆದರೆ, ಕೋವಿಡ್ ಕಾರಣಕ್ಕೆ ಈ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ವರ್ಷ ಏಪ್ರಿಲ್‌ನಿಂದ ಜುಲೈವರೆಗೂ ಹಂತ ಹಂತವಾಗಿ ಸಾಮೂಹಿಕ ವಿವಾಹ ನಡೆಸಲು ಸರ್ಕಾರ ಉದ್ದೇಶಿಸಿತ್ತಾದರೂ ಸದ್ಯದ ಪರಿಸ್ಥಿತಿಯಲ್ಲಿ ಅದು ನಡೆಯುವುದು ಅನುಮಾನವಾಗಿದೆ.

ADVERTISEMENT

ಕಳೆದ ವರ್ಷ ಸಾಮೂಹಿಕ ವಿವಾಹಕ್ಕಾಗಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಅಂತಹವರಲ್ಲಿ ಶೇ 90ರಷ್ಟು ವಿವಾಹಗಳು ಈಗಾಗಲೇ ನಡೆದುಹೋಗಿವೆ. ಈಗ ಮದುವೆಯಾಗ ಬಯಸುವವರು ಹೊಸತಾಗಿ ಅರ್ಜಿ ಸಲ್ಲಿಸಿದ್ದು, ಸದ್ಯ ಕೋವಿಡ್ ಅಲೆ ಯಾವಾಗ ಕೊನೆಗೊಳ್ಳುವುದೋ ಎಂದು ಕಾದು ಕುಳಿತಿದ್ದಾರೆ.

ವಧು–ವರರಿಗೆ ಉಡುಗೊರೆ: ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವವರಿಗೆ ಸರ್ಕಾರವೇ ಒಟ್ಟು ₹ 55 ಸಾವಿರ ಮೌಲ್ಯದ ಉಡುಗೊರೆ ನೀಡಲಿದೆ. ವಧುವಿಗೆ ₹ 40 ಸಾವಿರ ಮೌಲ್ಯದ 8 ಗ್ರಾಂ ಚಿನ್ನದ ತಾಳಿ ಜತೆಗೆ ಧಾರೆ ಸೀರೆ, ಹೂವಿನ ಹಾರ, ರವಿಕೆ ಕಣ ಖರೀದಿಗೆ ₹10 ಸಾವಿರ ಸಿಗಲಿದೆ. ವರನಿಗೆ ಹೂ ಹಾರ, ಪಂಚೆ, ಶರ್ಟ್, ಶಲ್ಯ ಖರೀದಿಗೆ ₹ 5 ಸಾವಿರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಸಾಮೂಹಿಕ ವಿವಾಹದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆಯಾ ಸಮುದಾಯದ ಸಂಸ್ಕೃತಿಗೆ ಅನುಗುಣವಾಗಿ ಪೇಟ, ಬಾಸಿಂಗ ಟೋಪಿ, ಕಾಲುಂಗುರವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ ಮೊತ್ತದಿಂದ ಖರೀದಿಸಬೇಕು. ಊಟ, ವಾದ್ಯ, ಹೊರಾಂಗಣ ಅಲಂಕಾರ ಮೊದಲಾದ ಖರ್ಚನ್ನು ದೇವಾಲಯದ ನಿಧಿಯಿಂದ ಭರಿಸಲು ಸರ್ಕಾರ ಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.