ರಾಮನಗರ: ಇಲ್ಲಿನ ಸಿಂಗ್ರಾಬೋವಿದೊಡ್ಡಿ ಗ್ರಾಮದಲ್ಲಿ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡಲಿಲ್ಲ ಎಂಬ ಕಾರಣಕ್ಕೆ ತಂದೆ ತಿಮ್ಮಯ್ಯ ಎಂಬುವರನ್ನು ಮನೆಯಿಂದ ಹೊರಹಾಕಿದ್ದ ಪುತ್ರ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಚಾಲಕರಾಗಿರುವ ಕುಮಾರ್ ತಂದೆಯನ್ನು ಮನೆಯಿಂದ ಹೊರ ಹಾಕುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ಗಮನಿಸಿದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಗುರುವಾರ ಸಂಜೆ ಆರೋಪಿಯನ್ನು ಬಂಧಿಸಿದರು.
ಮತ್ತೊಂದೆಡೆ, ತಿಮ್ಮಯ್ಯ ಅವರಿಗೆ ರಾಮನಗರದ ಕೆ.ಪಿ. ದೊಡ್ಡಿಯ ವೃದ್ಧಾಶ್ರಮದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಕುಮಾರ್‌ನನ್ನು ಬಂಧಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಪ್ರತಿ ದಿನ ಕುಡಿಯಲು 500 ರೂಪಾಯಿ ದುಡ್ಡು ಕೇಳ್ತಾರೆ. ಬಟ್ಟೆ, ಊಟ ಕೊಡಬಹುದು. ಆದರೆ ಕುಡಿಯುವುದಕ್ಕೆ ದುಡ್ಡು ಎಲ್ಲಿಂದ ತರಬೇಕು? ಎಂದು ಪುತ್ರ ಕುಮಾರ್ ಸುಳ್ಳು ದೂರು ಹೇಳುವ ಪ್ರಯತ್ನ ಮಾಡಿದ್ದ. 'ಒಂದೇ ಒಂದು ರೂಪಾಯಿ ಕೊಟ್ಟಿದ್ದೇನೆ ಎಂದು ತನ್ನ ಮಕ್ಕಳನ್ನು ಮುಟ್ಟಿ ಹೇಳು' ಎಂದು ತಂದೆ ತಿಮ್ಮಯ್ಯ ಹೇಳಿದಾಗ ದುಡ್ಡು ಕೊಟ್ಟಿಲ್ಲವೆಂದು ಪುತ್ರ ಕುಮಾರ್ ಒಪ್ಪಿಕೊಂಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.