ಮಾಗಡಿ: ಊರೂರು ಸುತ್ತಿ ಬಳೆ ಮತ್ತು ಬಟ್ಟೆ ಮಾರಾಟ ಮಾಡಿ ಬದುಕುವ ಸೋಲಿಗ ಸಮುದಾಯದ ಮುನಿಯಪ್ಪ–ಗಂಗಲಕ್ಷ್ಮೀ ದಂಪತಿ ಪುತ್ರಿ ಲಾವಣ್ಯ ದ್ವಿತೀಯ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ್ದಾರೆ.
ತಾಲ್ಲೂಕಿನ ದುಡುಪನಹಳ್ಳಿ ಸೋಲಿಗರ ಹಾಡಿ ನಿವಾಸಿ ಲಾವಣ್ಯ ಕುಟುಂಬದ ಕಡು ಬಡತನದ ನಡುವೆಯೂ 532 ಅಂಕ ಗಳಿಸಿದ್ದಾರೆ.
ಊರೂರು ಸುತ್ತಿ, ಸ್ಕೂಟರ್‌ನಲ್ಲಿ ಬಳೆ ಮತ್ತು ಬಟ್ಟೆ ಮಾರಾಟ ಮಾಡಿ, ತಮ್ಮ ಮಗಳನ್ನು ಬಾಚೆನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುನಿಯಪ್ಪ–ಗಂಗಲಕ್ಷ್ಮೀ ದಂಪತಿ ಓದಿಸುತ್ತಿದ್ದರು.
‘ತಾಲ್ಲೂಕಿನಲ್ಲಿ ಸೋಲಿಗ, ಇರುಗಳಿಗ ಸಮುದಾಯಗಳಿಗೆ ಸರ್ಕಾರಿ ಸವಲತ್ತು ದೊರೆಯುತ್ತಿಲ್ಲ. ನಮ್ಮ ಅಪ್ಪ, ಅಮ್ಮ ಹಗಲು ರಾತ್ರಿ ಹೊಟ್ಟೆಗೆ ಗಂಜಿ ಒದಗಿಸಲು ಊರೂರು ಸುತ್ತುವುದನ್ನು ಕಣ್ಣಾರೆ ಕಂಡು ಸಂಕಟ ಅನುಭವಿಸಿದ್ದೇನೆ. ಪೋಷಕರು ಮತ್ತು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಸಹಕಾರದಿಂದ ಪಟ್ಟ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆತಿದೆ ಎಂದು ಲಾವಣ್ಯ ಸಂತೋಷ ವ್ಯಕ್ತಪಡಿಸಿದರು.
‘ಬಿ.ಕಾಂ ಪದವಿ ಮುಗಿಸಿ, ಸಿ.ಎ. ಮಾಡಬೇಕು ಎಂಬ ಹಂಬಲವಿದೆ. ಕಡುಬಡವರಾದ ನಮಗೆ ಯಾರಾದರೂ ಆರ್ಥಿಕವಾಗಿ ಸಹಾಯ ಮಾಡಿದರೆ ವಿದ್ಯಾಭ್ಯಾಸ ಮುಂದುವರೆಸುತ್ತೇನೆ’ ಎಂದು ಲಾವಣ್ಯ ತಿಳಿಸಿದರು.
‘ನಮ್ಮ ಮಗಳು ಬಿ.ಕಾಂ ಪದವಿ ಓದಬೇಕು ಎಂದು ಆಸೆ ಇಟ್ಟುಕೊಂಡಿದ್ದಾಳೆ. ಸಂಘ ಸಂಸ್ಥೆಗಳು ಮತ್ತು ಉಳ್ಳವರು ಆಸರೆಯಾದರೆ ಮಗಳ ಓದು ಮುಂದುವರೆಸುತ್ತೇವೆ’ ಎಂದು ಲಾವಣ್ಯ ತಾಯಿ ಗಂಗಲಕ್ಷ್ಮೀ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.