ಚನ್ನಪಟ್ಟಣ: ತಾಲ್ಲೂಕಿನಲ್ಲಿರುವ ಸಮಸ್ಯೆಗಳ ಪರಿಹಾರ ಹಾಗೂ ಇಲ್ಲಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹100 ಕೋಟಿ ವಿಶೇಷ ಅನುದಾನ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಬೈರಾಪಟ್ಟಣ ಸರ್ಕಾರಿ ಶಾಲೆ ಹಾಗೂ ಸುಣ್ಣಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈಲ್ವೆ ಮೇಲ್ಸೇತುವೆ ಕಾಮಗಾರಿ, ಆನೆ ದಾಳಿ ತಡೆಯಲು ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ, ರಸ್ತೆ, ಚರಂಡಿ ದುರಸ್ತಿಗೆ ₹70 ಕೋಟಿ ಅನುದಾನ ಸಿಗಲಿದೆ. ಕಣ್ವ ಬ್ರಿಜ್ ಹಾಗೂ ಬ್ಯಾರೇಜ್‌ಗೆ ನೀರಾವರಿ ಇಲಾಖೆಯಿಂದ ಸುಮಾರು ₹162 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಚನ್ನಪಟ್ಟಣ ತಾಲ್ಲೂಕಿನಲ್ಲಿ ಇದೂವರೆಗೆ ಸತತವಾಗಿ ಆರು ಜನಸ್ಪಂದನ ಸಭೆ ಮಾಡಲಾಗಿದೆ. ಈವರೆಗೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುಮಾರು ಆರು ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕೃತಗೊಂಡಿದೆ. ಪಿಂಚಣಿ, ಮನೆ, ನಿವೇಶನ, ರಸ್ತೆ, ಚರಂಡಿ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳ ಕುರಿತು ಅರ್ಜಿ ಸ್ವೀಕೃತವಾಗಿದೆ. 4,000 ಜನರು ಮನೆ ಹಾಗೂ ನಿವೇಶನಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಿಗೆ ನಿವೇಶನ ಹಾಗೂ ವಸತಿ ನೀಡಲಾಗುವುದು. ಈಗಾಗಲೇ ನಿವೇಶನಕ್ಕಾಗಿ ಜಮೀನು ಪರಿಶೀಲಿಸಲಾಗುತ್ತಿದೆ ಎಂದರು.
ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಲು ಚನ್ನಪಟ್ಟಣ ತಾಲ್ಲೂಕು ಕಚೇರಿಯಲ್ಲಿ ಅಹವಾಲು ಸ್ವೀಕಾರ ಕೇಂದ್ರವೊಂದನ್ನು ತೆರೆಯಲಾಗುವುದು. ಜನಸ್ಪಂದನ ಕಾರ್ಯಕ್ರಮಗಳಲ್ಲಿ ತಮ್ಮ ಸಮಸ್ಯೆಗಳ ಅಹವಾಲು ಸಲ್ಲಿಸಲು ಸಾಧ್ಯವಾಗದ ಸಾರ್ವಜನಿಕರು ಅಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಎಸ್.ರವಿ, ರಘುನಂದನ್ ರಾಮಣ್ಣ, ಮಾಜಿ ಶಾಸಕ ಎಂ.ಸಿ.ಆಶ್ವಥ್, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಮಳೂರು ಹಾಗೂ ಮತ್ತೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಲಂಚ ಕೇಳಿದ ಅಧಿಕಾರಿ ಅಮಾನತಿಗೆ ಸೂಚನೆ
ತಾಲ್ಲೂಕಿನ ಮಳೂರು ನಾಡಕಚೇರಿಯಲ್ಲಿ ಮಾಸಾಶನ ಮಾಡಿಕೊಡಲು ಅಧಿಕಾರಿಯೊಬ್ಬರು ₹50 ಸಾವಿರ ಲಂಚ ಕೇಳುತ್ತಿದ್ದಾರೆ ಎಂದು 70 ವರ್ಷದ ವೃದ್ಧೆಯೊಬ್ಬರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎದುರು ಆರೋಪ ಮಾಡಿದರು. ಇದರಿಂದ ಸಿಟ್ಟಾದ ಡಿ.ಕೆ. ಶಿವಕುಮಾರ್ ಜಿಲ್ಲಾಧಿಕಾರಿಯನ್ನು ಕರೆದು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪು ಸಾಬೀತಾದರೆ ಅಧಿಕಾರಿಯನ್ನು ಅಮಾನತು ಮಾಡಿ ಕೂಡಲೇ ನನಗೆ ವರದಿ ನೀಡಿ ಎಂದು ಸೂಚನೆ ನೀಡಿದರು. ನ್ಯಾಯಬೆಲೆ ಅಂಗಡಿಯಲ್ಲಿ ಕೇವಲ ಒಂದು ದಿನ ಮಾತ್ರ ಪಡಿತರ ವಿತರಣೆ ಮಾಡಲಾಗುತ್ತಿದೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ದೂರದೂರುಗಳಿಂದ ನಡೆದುಕೊಂಡು ಹೋಗಬೇಕು ಎಂದು ಮಹಿಳೆಯೊಬ್ಬರು ದೂರು ಹೇಳಿದರು. ಇದಕ್ಕೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಜನರಿಗೆ ತೊಂದರೆ ಕೊಡುತ್ತಿರುವ ವಿತರಕರ ಅನುಮತಿ ರದ್ದುಮಾಡಿ ಎಂದು ಆಹಾರ ಸರಬರಾಜು ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.