ಚನ್ನಪಟ್ಟಣ: ತಾಲ್ಲೂಕಿನಲ್ಲಿ ನೀರಾವರಿ ಯೋಜನೆಗಳು ಸಮರ್ಪಕವಾಗಿ ಸಾಕಾರಗೊಳ್ಳುವಲ್ಲಿ ಗಣನೀಯ ಪಾತ್ರ ವಹಿಸಿದ್ದ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ತಾಲ್ಲೂಕಿನ ಎ.ವಿ.ಹಳ್ಳಿ ಗ್ರಾಮದ ವೆಂಕಟೇಗೌಡರ ನಿಧನದಿಂದ ತಾಲ್ಲೂಕಿನ ನೀರಾವರಿ ಯೋಜನೆಯ ಕೊಂಡಿಯೊಂದು ಕಳಚಿದಂತಾಗಿದೆ.
ಕಾವೇರಿ ನೀರಾವರಿ ನಿಗಮದಲ್ಲಿ ಮುಖ್ಯ ಎಂಜಿನಿಯರ್ ಆಗಿ, ಮಂಚನಬೆಲೆ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ವೆಂಕಟೇಗೌಡರು ತಾಲ್ಲೂಕಿನಲ್ಲಿ ಗರಕಹಳ್ಳಿ ಏತ ನೀರಾವರಿ ಹಾಗೂ ಕಣ್ವ ಏತ ನೀರಾವರಿ ಯೋಜನೆಗಳ ಸಾಕಾರದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ್ದವರು.
ತಾಲ್ಲೂಕಿನ ಎರಡೂ ಯೋಜನೆಗಳ ನೀಲನಕ್ಷೆ ತಯಾರಿಸಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳ ಆಡಳಿತದಲ್ಲಿ ತಮ್ಮ ಹುದ್ದೆಯ ಪ್ರಭಾವ ಬಳಸಿಕೊಂಡು ನೀರಾವರಿ ಯೋಜನೆಗಳ ಸಾಕಾರದಲ್ಲಿ ಪ್ರಮುಖ ಪಾತ್ರ ವಹಿಸಿ ಇಡೀ ರಾಜ್ಯವೇ ಚನ್ನಪಟ್ಟಣ ತಾಲ್ಲೂಕಿನ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದವರು.
ರಾಜ್ಯದಲ್ಲಿ ಆಡಳಿತ ನಡೆಸಿದ ವಿವಿಧ ಪಕ್ಷಗಳ ಸರ್ಕಾರಗಳ ಮಂತ್ರಿಗಳು, ಸ್ಥಳೀಯ ಶಾಸಕರು ಸೇರಿದಂತೆ ಹಲವು ಪ್ರಮುಖರ ನೇತೃತ್ವದಲ್ಲಿ ಎರಡೂ ಯೋಜನೆಗಳನ್ನು ಸಾಕಾರಗೊಳಿಸಿದ್ದವರು. ಬರಗಾಲದಲ್ಲೂ ತಾಲ್ಲೂಕಿನ ಕೆರೆ–ಕಟ್ಟೆಗಳಿಗೆ ನೀರು ಹರಿದು ತಾಲ್ಲೂಕು ಹಸಿರಿನಿಂದ ಕಂಗೊಳಿಸುವಂತೆ ಮಾಡಿ ಚನ್ನಪಟ್ಟಣವನ್ನು ನೀರಾವರಿ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿದ್ದವರು.
ತಾಲ್ಲೂಕಿನ ಗರಕಹಳ್ಳಿ ಏತನೀರಾವರಿ ಯೋಜನೆಯು ಪೂರ್ಣವಾದ ನಂತರ ಮತ್ತೊಬ್ಬ ಎಂಜಿನಿಯರ್ ವಿಜಯಕುಮಾರ್ ಜೊತೆಗೂಡಿ ಕಣ್ವ ಶಿಂಷಾ ಕುಡಿಯುವ ನೀರು ಯೋಜನೆಗೆ ಹೆಗಲು ಕೊಟ್ಟವರು. ಪೈಪ್‌ಲೈನ್ ಕಾಮಗಾರಿಯಿಂದ ಮೋಟಾರ್ ಅಳವಡಿಕೆವರೆಗೆ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ತನ್ನ ತಾಲ್ಲೂಕಿನ ಯೋಜನೆ ತಮ್ಮ ಕನಸು ಎಂಬಂತೆ ನಿಷ್ಠೆಯಿಂದ ಹಗಲಿರುಳು ಶ್ರಮಿಸಿದರು. ನಂತರ ಸತ್ತೇಗಾಲ ಯೋಜನೆಯನ್ನು ರೂಪಿಸಿ ಸರ್ಕಾರದ ಅನುಮತಿ ಪಡೆದು ಕಾಮಗಾರಿ ಆರಂಭಿಸುವಲ್ಲಿಯೂ ಅವರ ಪಾತ್ರ ಪ್ರಮುಖವಾಗಿದೆ.
ಇವರ ಅವಿರತ ಪ್ರಯತ್ನದಿಂದ ತಾಲ್ಲೂಕಿನಲ್ಲಿ ಸಾಕಾರಗೊಂಡ ನೀರಾವರಿ ಯೋಜನೆಗಳಿಂದ ಎಂಟನೂರು ಅಡಿಗೂ ಹೆಚ್ಚು ಆಳಕ್ಕೆ ಇಳಿದುಹೋಗಿದ್ದ ಅಂತರ್ಜಲ ಇಂದು ಇನ್ನೂರು ಅಡಿಗೆ ಏರಿದೆ. ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಇಂದು ನೀರು ಸಮೃದ್ಧಿಯಾಗಿ ದೊರೆಯಲಾರಂಭಿಸಿದೆ.
ಚನ್ನಪಟ್ಟಣ ತಾಲ್ಲೂಕು ಇಂದು ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢವಾಗಿದೆ ಎಂದರೆ ಅದರಲ್ಲಿ ವೆಂಕಟೇಗೌಡರ ಪಾತ್ರ ಗಣನೀಯವಾಗಿದೆ. ಅವರ ಅಕಾಲಿಕ ಮರಣದಿಂದ ತಾಲ್ಲೂಕು ಒಬ್ಬ ನೀರಾವರಿ ತಜ್ಞ ಎಂಜಿನಿಯರ್‌ನನ್ನು ಕಳೆದುಕೊಂಡಿದೆ ಎಂದು ಅರ್ಥೈಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.