ADVERTISEMENT

ಮಾಗಡಿಯ ರಂಗನಾಥ ಮೆಸ್: ಮುದ್ದೆಗೆ ಸಾರು, ಪಲ್ಯ ಕಾಂಬಿನೇಷನ್

ಈ ಹೋಟೆಲ್‌ನಲ್ಲಿ ಮಹಿಳೆಯರೇ ಪಾರುಪತ್ಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 10:36 IST
Last Updated 23 ಜೂನ್ 2024, 10:36 IST
ಮಾಗಡಿ ರಂಗನಾಥ ಮೆಸ್ ಮುದ್ದೆ ಊಟ
ಮಾಗಡಿ ರಂಗನಾಥ ಮೆಸ್ ಮುದ್ದೆ ಊಟ   

ಮಾಗಡಿ: ಬಾಳೆ ಎಲೆ ಮುದ್ದೆ ಊಟ. ಸವಿಯುವಷ್ಟು ಅನ್ನ. ಪ್ರತಿದಿನವೂ ವಿವಿಧ ಬಗೆ ಸಾರು, ಪಲ್ಯ ಇಲ್ಲಿನ ವಿಶೇಷ ಊಟ...

ಮಾಗಡಿ ನ್ಯಾಯಲಯದ ಮುಂಭಾಗದಲ್ಲಿ ರಂಗನಾಥ ಮೆಸ್ ಕಳೆದ ಎಂಟು ವರ್ಷಗಳಿಂದ ಬಾಳೆ ಊಟಕ್ಕೆ ಪ್ರಸಿದ್ಧಿ ಪಡೆದಿದೆ.

ಬಾಳೆ ಎಲೆಯಲ್ಲಿ ಮುದ್ದೆ, ಅನ್ನ, ಬಗೆ ಬಗೆ ಸಾರು, ಸೌತೆಕಾಯಿ ಕೋಸಂಬರಿ, ವಿವಿಧ ಬಗೆ ಪಲ್ಯ, ಅಕ್ಕಿ ಹಪ್ಪಳ, ರಸಂ, ಮಜ್ಜಿಗೆ ನೀಡಲಾಗುತ್ತದೆ. ಊಟ ಬಿಟ್ಟರೆ ಇಲ್ಲಿ ಯಾವುದೇ ತಿಂಡಿ ವ್ಯವಸ್ಥೆ ಇರುವುದಿಲ್ಲ. ಮಧ್ಯಾಹ್ನ 12ಗಂಟೆಗೆ ಆರಂಭವಾಗಿ ಮೂರು ಗಂಟೆಗೆ ಹೋಟೆಲ್ ಮುಚ್ಚಲಾಗುತ್ತದೆ. ಸರ್ಕಾರಿ ರಜೆ ದಿನ ಹೋಟೆಲ್ ತೆರೆಯುವುದಿಲ್ಲ. ಇಲ್ಲಿಗೆ ಹೆಚ್ಚಾಗಿ ನ್ಯಾಯಲಯಕ್ಕೆ ಬರುವ ವಕೀಲರು, ಸಾರ್ವಜನಿಕರು ಊಟ ಸವಿಯಲು ಬರುತ್ತಾರೆ.

ADVERTISEMENT

ಮಾಗಡಿಗೆ ಬರುವ ಬಹುತೇಕ ಗ್ರಾಮೀಣದ ಭಾಗದ ಜನರು ಮಧ್ಯಾಹ್ನದ ವೇಳೆ ಬಾಳೆ ಎಲೆ ಊಟಕ್ಕೆ ಇಲ್ಲಿಗೆ ಬರುವುದು ಸಾಮಾನ್ಯ. ಬೇಡಿಕೆಗೆ ತಕ್ಕಂತೆ ರುಚಿ ರುಚಿಯಾದ ಊಟವನ್ನು ಕಳೆದ ಎಂಟು ವರ್ಷಗಳಿಂದಲೂ ನೀಡುತ್ತಾ ಬರಲಾಗಿದೆ.

ಮಹಿಳೆಯರ ದರ್ಬಾರ್: ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಪುರುಷರೇ ಮುಖ್ಯ ಬಾಣಿಸಿಗರಾಗಿರುತ್ತಾರೆ. ಆದರೆ, ರಂಗನಾಥ ಮೆಸ್‌ನಲ್ಲಿ ಮಹಿಳೆಯರೇ ಪಾರುಪತ್ಯ. ಸೌದೆ ಒಲೆಯಲ್ಲೇ ಎಲ್ಲ ಬಗೆ ಅಡುಗೆ ತಯಾರಿಸಲಾಗುತ್ತದೆ. ಅಡುಗೆ ಬಡಿಸುವವರು, ಸ್ವಚ್ಛತೆ ಮಾಡುವವರು ಎಲ್ಲರೂ ಕೂಡ ಮಹಿಳೆಯರೇ. ಒಂದೇ ಕುಟುಂಬಸ್ಥರು ಸೇರಿ ಹೋಟೆಲ್ ನಡೆಸುತ್ತಿದ್ದು ಯಾವುದೇ ರೀತಿ ಸೋಡಾ, ಟೆಸ್ಟಿಂಗ್ ಪೌಡರ್, ಮೆಣಸಿನಕಾಯಿ ಬಳಕೆ ಮಾಡದೆ ನಾಟಿ ಸ್ಟೈಲ್‌ನಲ್ಲಿ ಅಡುಗೆ ತಯಾರಿಸುತ್ತಾರೆ. 

ಸೋಮವಾರ ಹೋಟೆಲ್‌ನಲ್ಲಿ ಪಾಯಸ, ಮೊಳಕೆ ಕಟ್ಟಿನ ಸಾರು, ಮಂಗಳವಾರ ಬಸ್ ಸಾರು, ಬುಧವಾರ ಮೊಸಪ್ಪು, ಗುರುವಾರ ಉಪ್ಪು ಸಾರು, ಶುಕ್ರವಾರ ತರಕಾರಿ ಸಾರು, ಶನಿವಾರ ಕಾಳು ಗೊಜ್ಜು ಹೀಗೆ ಪ್ರತಿದಿನವೂ ಮುದ್ದೆ ಜತೆ ವಿವಿಧ ಬಗೆ ಸಾರು,ಪಲ್ಯ ಬಡಿಸಲಾಗುತ್ತದೆ.

ಊಟದ ಬೆಲೆ ₹ 70. ಹೋಟೆಲ್ ಮಾಲೀಕ ರವಿಕುಮಾರ್ ಅವರಿಗೆ ಕುಟುಂಬದ ಮಹಿಳೆಯರು ಸಾಥ್‌ ನೀಡಿದ್ದಾರೆ.

ಊಟ ಸವಿಯುತ್ತಿರುವ ಗ್ರಾಹಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.