ರಾಮನಗರ: ಈಕೆ ಕನ್ನಡ ಪರೀಕ್ಷೆಯಲ್ಲಿ ಗಳಿಸಿದ್ದು 89 ಅಂಕ. ಆದರೆ ಮಂಡಳಿಯವರು ನಮೂದಿಸಿದ್ದು ಮಾತ್ರ 14 ಅಂಕ. ಪರಿಣಾಮ ಪರೀಕ್ಷೆಯಲ್ಲಿ ಅನುತ್ತೀರ್ಣ.
ತಾಲ್ಲೂಕಿನ ಬಿಳಗುಂಬ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ, ಅರೇಹಳ್ಳಿ ಗ್ರಾಮದ ಲಕ್ಷ್ಮಿದೇವಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 339 ಅಂಕ ಪಡೆದಿದ್ದರೂ ಕನ್ನಡದಲ್ಲಿ ಕೇವಲ 14 ಅಂಕ ಬಂದ ಕಾರಣ ಆಕೆ ಅನುತ್ತೀರ್ಣಳಾಗಿದ್ದಳು. ಆಕೆಯ ಪೋಷಕರು ಅನಕ್ಷರಸ್ಥರಾದ ಕಾರಣ ಅವರಿಗೂ ಮಗಳ ಓದಿನ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ.
ಆದರೆ ಲಕ್ಷ್ಮಿಗೆ ಪಾಸಾಗುವ ವಿಶ್ವಾಸ ಇತ್ತು. ಹೀಗಾಗಿ ಆಕೆ ನೆರೆಯವರ ಸಹಕಾರ ಪಡೆದು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಗೆ ಶುಲ್ಕ ತುಂಬಿ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆದಾಗ ಅಲ್ಲಿ ಪರೀಕ್ಷೆಯಲ್ಲಿ 89 ಅಂಕ ಪಡೆದಿರುವುದು ಗಮನಕ್ಕೆ ಬಂದಿತು.
ಕನ್ನಡ ವಿಷಯದಲ್ಲಿ ಮೌಲ್ಯಮಾಪಕರು 89 ಅಂಕ ನೀಡಿದ್ದರು. ಅದಕ್ಕಾಗಿ ಲಕ್ಷ್ಮಿ ಒಟ್ಟು 14 ಪುಟಗಳಲ್ಲಿ ಉತ್ತರ ಬರೆದಿದ್ದರು. ಆದರೆ ಅಂಕವನ್ನು ನಮೂದಿಸುವ ಸಂದರ್ಭ 89ಕ್ಕೆ ಬದಲಾಗಿ 14 ಪುಟಗಳ ಸಂಖ್ಯೆಯನ್ನೇ ಅಂಕ ತಂದು ಭಾವಿಸಿ ತಪ್ಪಾಗಿ ನಮೂದಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.