ADVERTISEMENT

ಬಜೆಟ್‌: ಜಿಲ್ಲೆಗಿಲ್ಲ ಹೊಸ ಯೋಜನೆ!

ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆಗೆ ಹಸಿರು ನಿಶಾನೆ; ಪ್ರಸ್ತಾವದಲ್ಲೇ ಉಳಿದ ‘ಮೇಕೆದಾಟು’

ಆರ್.ಜಿತೇಂದ್ರ
Published 8 ಮಾರ್ಚ್ 2021, 15:01 IST
Last Updated 8 ಮಾರ್ಚ್ 2021, 15:01 IST
ಮೇಕೆದಾಟು ಪ್ರದೇಶ
ಮೇಕೆದಾಟು ಪ್ರದೇಶ   

ರಾಮನಗರ: ಈ ಬಾರಿಯ ರಾಜ್ಯ ಬಜೆಟ್‌ ಜಿಲ್ಲೆಯ ಪಾಲಿಗೆ ನಿರಾಸದಾಯಕವಾಗಿದ್ದು, ಯಾವುದೇ ಹೊಸ ಯೋಜನೆಗಳು ಸಿಕ್ಕಿಲ್ಲ. ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ಹಳೆಯ ಯೋಜನೆಗಳ ಪುನರಾವರ್ತನೆ ಆಗಿದೆ.

ರಾಮನಗರದಲ್ಲಿ ₨75 ಕೋಟಿ ವೆಚ್ಚದಲ್ಲಿ ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಇದಕ್ಕಾಗಿ ನಬಾರ್ಡ್‌ನಿಂದ ಅನುದಾನವನ್ನೂ ಬಳಸಿಕೊಳ್ಳುವುದಾಗಿ ಅವರು ಹೇಳಿದರು.

ಈ ಯೋಜನೆಯ ಪ್ರಕ್ರಿಯೆಯು ಈಗಾಗಲೇ ಜಿಲ್ಲೆಯಲ್ಲಿ ಚಾಲನೆಯಲ್ಲಿ ಇದೆ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ರಾಮನಗರಕ್ಕೆ ₨10 ಕೋಟಿ ವೆಚ್ಚದಲ್ಲಿ ಹೈಟೆಕ್‌ ಮಾರುಕಟ್ಟೆ ಘೋಷಣೆ ಮಾಡಿದ್ದರು. ಇದಾದ ಬಳಿಕ ಬಿಜೆಪಿ ಸರ್ಕಾರ ಈ ಯೋಜನೆ ಮುಂದುವರಿಸಿದ್ದು, ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ರೇಷ್ಮೆ ಫಾರಂನಲ್ಲಿ ಜಾಗ ಗುರುತಿಸಿತ್ತು. ₨75 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಸಹ ಈ ಹಿಂದೆ ಹಲವು ಬಾರಿ ಪ್ರಸ್ತಾಪಿಸಿದ್ದರು. ಚನ್ನಪಟ್ಟಣಕ್ಕೆ ಮಾರುಕಟ್ಟೆ ಸ್ಥಳಾಂತರ ಖಂಡಿಸಿ ಇಲ್ಲಿನ ರೀಲರ್‌ಗಳು ರಾಮನಗರ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಈಗ ಮಾರುಕಟ್ಟೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಜೆಟ್‌ನಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ.

ADVERTISEMENT

ಮೇಕೆದಾಟು ಪ್ರಸ್ತಾವ: ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣವನ್ನು ಪ್ರಸ್ತಾಪಿಸಿದ್ದು, ‘ಸದ್ಯ ಈ ಯೋಜನೆಯ ಪರಿಷ್ಕೃತ ಡಿಪಿಆರ್‌ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ ಆಗಿದೆ. ₨9 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಇದರಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಜೊತೆಗೆ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಲಿದೆ. ಕೇಂದ್ರದ ಒಪ್ಪಿಗೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದಿದ್ದಾರೆ. ಆದರೆ ಕಳೆದ ಕೆಲವು ವರ್ಷದಿಂದಲೂ ಇದೇ ಹಗ್ಗಜಗ್ಗಾಟ ಮುಂದುವರಿದಿದ್ದು, ಈ ಬಜೆಟ್‌ನಲ್ಲೂ ಅದೇ ಮಾತುಗಳ ಪುನರಾವರ್ತನೆ ಆಗಿದೆ.‌

ಗೊಂಬೆ ಮಾರುಕಟ್ಟೆ ಉತ್ತೇಜನ: ಚನ್ನಪಟ್ಟಣ ಗೊಂಬೆಗಳೂ ಸೇರಿದಂತೆ ಕರಕುಶಲ ಉತ್ಪನ್ನಗಳಿಗೆ ವ್ಯಾಪಕ ಪ್ರಚಾರ ನೀಡಿ ಸೂಕ್ತ ಆನ್‌ಲೈನ್ ಮಾರುಕಟ್ಟೆ ಒದಗಿಸುವ ಭರವಸೆವನ್ನು ಮುಖ್ಯಮಂತ್ರಿ ತಮ್ಮ ಬಜೆಟ್‌ನಲ್ಲಿ ನೀಡಿದ್ದಾರೆ. ಜೊತೆಗೆ ಬೆಂಗಳೂರು, ಕಲಬುರ್ಗಿ, ಮೈಸೂರು, ಬೆಳಗಾವಿ ನಗರಗಳಲ್ಲಿ ವರ್ಷಕ್ಕೆ ಒಂದು ವಾರ ಕಲಾ ಪ್ರದರ್ಶನ ಆಯೋಜಿಸುವ ಭರವಸೆಯನ್ನೂ ನೀಡಿದ್ದಾರೆ. ಇದರಿಂದ ಚನ್ನಪಟ್ಟಣದ ಸಾಂಪ್ರದಾಯಿಕ ಗೊಂಬೆಗಳಿಗೆ ಭವಿಷ್ಯದಲ್ಲಿ ಉತ್ತಮ ಮಾರುಕಟ್ಟೆ ಸಿಗಬಹುದು ಎನ್ನುವ ಆಶಾಭಾವ ವ್ಯಕ್ತವಾಗಿದೆ.

ರಾಮನಗರ ಜಿಲ್ಲೆಯಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿ ಅನುದಾನ ಮೀಸಲಿಡಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆ ಆಗಿತ್ತು. ಅದಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದು, ನಿಗಮ ಸ್ಥಾಪನೆಯ ಜೊತೆಗೆ 500 ಕೋಟಿ ಅನುದಾನವನ್ನೂ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ವಾರಾಂತ್ಯ ಪ್ರವಾಸ ಯೋಜನೆ
ರಾಜಧಾನಿ ಬೆಂಗಳೂರು ಸುತ್ತಲಿನ ಪ್ರವಾಸಿ ತಾಣಗಳನ್ನು ಗುರುತಿಸಿ, ಅಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದಿಂದ ವಾರಾಂತ್ಯ ಪ್ರವಾಸ ವೃತ್ತವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಿದೆ.

ಜಿಲ್ಲೆಯವರೇ ಆದ ಸಿ.ಪಿ. ಯೋಗೇಶ್ವರ್‌ ಪ್ರವಾಸೋದ್ಯಮ ಸಚಿವರಾಗಿದ್ದಾರೆ. ಹೀಗಾಗಿ ಇಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನೆರವು ದೊರೆಯಲಿದೆ ಎನ್ನುವ ನಿರೀಕ್ಷೆ ಸ್ಥಳೀಯರದ್ದಾಗಿತ್ತು. ಸಂಗಮ–ಮೇಕೆದಾಟು, ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಸಾವನದುರ್ಗ ಬೆಟ್ಟ, ಚುಂಚಿ ಜಲಪಾತದಂತಹ ನಿಸರ್ಗದತ್ತ ತಾಣಗಳು ಇಲ್ಲಿವೆ. ಜೊತೆಗೆ ಕಬ್ಬಾಳು, ಕೆಂಗಲ್‌, ಮಾಗಡಿ ರಂಗನಾಥಸ್ವಾಮಿ ದೇಗುಲದಂತಹ ಧಾರ್ಮಿಕ ತಾಣಗಳು, ಜಾನಪದ ಲೋಕದಂತಹ ಪ್ರವಾಸಿ ಕೇಂದ್ರಿತ ತಾಣಗಳು ಇವೆ. ಈ ಕ್ಷೇತ್ರಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.