ರಾಮನಗರ: ‘ಕನಕಪುರವು ಬೆಂಗಳೂರು ವ್ಯಾಪ್ತಿಗೆ ಸೇರಲಿದೆ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಿಡಿ ಕಾರಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ‘ಇದು ರಾಮನಗರ ಜಿಲ್ಲೆ ಜನರಿಗೆ ಮಾಡುವ ದ್ರೋಹ ಮತ್ತು ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ. ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳೆಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಈ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆ ನಾಟಕವೇ?’ ಎಂದು ಪ್ರಶ್ನಿಸಿದ್ದಾರೆ.
‘ಕನಕಪುರ ಸುತ್ತಮುತ್ತಲಿನ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು, ಖಜಾನೆ ವೃದ್ಧಿಸಿಕೊಳ್ಳುವ ದುರುದ್ದೇಶವನ್ನು ಶಿವಕುಮಾರ್ ಹೊಂದಿದ್ದಾರೆ. ಅದೇಕಾರಣಕ್ಕೆ ಕನಕಪುರ ಜನರ ನೆಪ ಹೇಳಿಕೊಂಡು ಹೊಸ ನಾಟಕ ಶುರು ಮಾಡಿದ್ದಾರೆ. ಇದು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಈಗಾಗಲೇ ಕನಕಪುರಕ್ಕೆ ರಾಮನಗರದ ವೈದ್ಯಕೀಯ ಕಾಲೇಜು ಕದ್ದೊಯ್ದಿದ್ದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿತ್ತು ’ ಎಂದು ಟೀಕಿಸಿರುವ ಅವರು, ‘ಕನಕಪುರವು ರಾಮನಗರ ಜಿಲ್ಲೆಯಲ್ಲೇ ಉಳಿಯಬೇಕು’ ಎಂದು ಒತ್ತಾಯಿಸಿದ್ದಾರೆ.
‘ಬೆಂಗಳೂರು ಕನಕಪುರದಿಂದ 52 ಕಿ.ಮೀ. ದೂರದಲ್ಲಿದೆ. ರಾಮನಗರ 25 ಕಿ.ಮೀ. ದೂರದಲ್ಲಿದೆ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಡಿಸಿಎಂ ಅವರ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ. ನಿಮ್ಮ ಜೇಬಿಗೆ ನಾನು ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿ ಕೊಡಲು ಆಗುವುದಿಲ್ಲ ಎನ್ನುವವರ ಇಷ್ಟು ದಿನ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡು, ತಮ್ಮ ಕುಟುಂಬದವರನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ರಾಮನಗರ ಜಿಲ್ಲೆಯು ಕನಕಪುರ, ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಅದನ್ನು ನಾನು ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆಯ ಜನರ ಬೆನ್ನಿಗೆ ಚೂರಿ ಹಾಕಿ, ಕನಕಪುರ ಜನರ ಹಿತಕ್ಕೆ ಕೊಡಲಿ ಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭಾ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.
‘2006-07ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಶಿವಕುಮಾರ್ 2006ರಲ್ಲಿ ವಿರೋಧ ಮಾಡಿದ್ದರು. ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತನ್ನಾಡಿದ್ದಾರೆ. ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ. ಅದೇ ನಮ್ಮ ಪುಣ್ಯ’ ಎಂದು ವ್ಯಂಗ್ಯವಾಡಿದ್ದಾರೆ.
ಮೈತ್ರಿ ಸರ್ಕಾರ ತೆಗೆದ ಮಹಾನುಭಾವ:
‘ಕನಕಪುರದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರದ ಪಾಲಾದ ಬಳಿ, ಮೈತ್ರಿ ಸರ್ಕಾರವಿದ್ದಾಗ ಕನಕಪುರಕ್ಕೆ ಮತ್ತೊಂದು ಕಾಲೇಜು ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರು ಮೈತ್ರಿ ಸರ್ಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು. ಯೋಜನೆ ಮತ್ತು ಅದರ ₹350 ಕೋಟಿಗೂ ಹೆಚ್ಚಿನ ಅನುದಾನ ಅಲ್ಲಿಯೇ ಉಳಿಯಿತು. ಉಪ ಮುಖ್ಯಮಂತ್ರಿಯಾದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರದ ಕಾಲೇಜನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.