ರಾಮನಗರ: ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಆರನೇ ತರಗತಿ ವಿದ್ಯಾರ್ಥಿನಿಯ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಲತಂದೆಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ತಂದೆಯ ಕೃತ್ಯದಿಂದಾಗಿ ಶಾಲೆಯಿಂದ ಮನೆಗೆ ಹೋಗದೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿಕೊಂಡಿದ್ದ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ. ತಂದೆಯ ಕೃತ್ಯದ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಪೊಲೀಸರು 40 ವರ್ಷ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಆರೋಪಿ ತಮಿಳುನಾಡಿನವನಾಗಿದ್ದು, ಬಾಲಕಿ ತಾಯಿ ಆಂಧ್ರಪ್ರದೇಶದವರಾಗಿದ್ದಾರೆ. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಕೋಣನಕುಂಟೆ, ಬಿಡದಿಯಲ್ಲಿ ಇಬ್ಬರು ಮಕ್ಕಳೊಂದಿಗೆ ಕೆಲ ತಿಂಗಳು ನೆಲೆಸಿದ್ದ ಇಬ್ಬರೂ, ಇತ್ತೀಚೆಗೆ ತಾಲ್ಲೂಕಿಗೆ ಬಂದು ಬಾಡಿಗೆ ಮನೆಯಲ್ಲಿದ್ದರು.
ತಾಯಿಗೆ ಮೂರನೇ ಗಂಡನಾಗಿದ್ದ ಆರೋಪಿ, ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇಲ್ಲಿಯೂ ಕೃತ್ಯ ಮುಂದುವರಿಸಿದ್ದ. ಇದರಿಂದಾಗಿ ಬಾಲಕಿ ಜುಲೈ 27ರಂದು ಶಾಲೆ ಮುಗಿಸಿಕೊಂಡು ಮನೆಗೆ ಹೋಗದೆ, ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಕೋಣನಕುಂಟೆಯಲ್ಲಿ ತಾನು ಓದುತ್ತಿದ್ದ ಶಾಲೆಗೆ ಹೋಗಿದ್ದಳು.
ಕತ್ತಲಾದರೂ ಪುತ್ರಿ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ತಂದೆ–ತಾಯಿ ಠಾಣೆಗೆ ಬಂದು ದೂರು ಕೊಟ್ಟಿದ್ದರು. ಪ್ರಕರಣದ ದಾಖಲಿಸಿಕೊಂಡು ರಾತ್ರಿಯಿಡೀ ಹುಡುಕಾಡಿದ್ದೆವು. ಬೆಳಿಗ್ಗೆ ಬಾಲಕಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ವಿಚಾರಣೆ ನಡೆಸಿ ಆಕೆಯ ಕುರಿತು ಮಾಹಿತಿ ಕಲೆ ಹಾಕಿದ್ದೆವು ಎಂದು ಗ್ರಾಮಾಂತ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದರು.
ಶಿಕ್ಷಕಿ ಬಳಿ ಕೃತ್ಯ ಬಿಚ್ಚಿಟ್ಟಿದ್ದ ಬಾಲಕಿ: ಕೋಣನಕುಂಟೆಯ ಶಾಲೆಯಲ್ಲಿ ತನ್ನ ನೆಚ್ಚಿನ ಶಿಕ್ಷಕಿಯನ್ನು ಭೇಟಿ ಮಾಡಿದ್ದ ಬಾಲಕಿ, ತಂದೆಯ ಕೃತ್ಯವನ್ನು ಬಿಚ್ಚಿಟ್ಟಿದ್ದಳು. ಅವರು ಕೂಡಲೇ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಕರೆದೊಯ್ದು, ಅಲ್ಲಿನ ಸಿಬ್ಬಂದಿಗೆ ವಿಷಯವನ್ನು ತಿಳಿಸಿದ್ದರು. ಮಾರನೇಯ ದಿನ ಸಿಬ್ಬಂದಿ ಕೋಣನಕುಂಟೆ ಠಾಣೆಗೆ ದೂರು ಕೊಟ್ಟಿದ್ದರು.
ಮಲತಂದೆ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ತಾಲ್ಲೂಕಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ನಾವು ಸಹ ತಂದೆಯ ನೆರವಿನಿಂದ ಬಾಲಕಿ ಪತ್ತೆ ಕಾರ್ಯದಲ್ಲಿ ತೊಡಗಿದ್ದೆವು. ಈ ವೇಳೆ, ಸಿಕ್ಕ ಅವರನ್ನು ವಿಚಾರಿಸಿದಾಗ ತಾವು ಬಂದಿರುವ ಉದ್ದೇಶವನ್ನು ಹೇಳಿದರು. ಬಾಲಕಿ ತಮ್ಮ ವಶದಲ್ಲಿರುವ ಕುರಿತು ತಿಳಿಸಿದರು.
ಬಳಿಕ ನಮ್ಮ ವಶದಲ್ಲಿದ್ದ ತಂದೆಯನ್ನು ಅವರಿಗೆ ಒಪ್ಪಿಸಿದೆವು. ಬಾಲಕಿಯ ತಂದೆ–ತಾಯಿ ಇಬ್ಬರು ಮದ್ಯಪಾನ ಮಾಡುತ್ತಿದ್ದರು. ಅಲ್ಲದೆ, ಬಾಲಕಿಗೆ ಹೊಡೆಯುತ್ತಿದ್ದರು. ಅಷ್ಟಾಗಿ ಕಾಳಜಿ ಮಾಡುತ್ತಿರಲಿಲ್ಲ. ಇದರಿಂದಾಗಿ ಬಾಲಕಿ ತಂದೆಯ ಕೃತ್ಯವನ್ನು ತಾಯಿ ಬಳಿ ಹೇಳಿಕೊಳ್ಳಲು ಮನಸ್ಸು ಮಾಡದೆ, ತನ್ನ ನೆಚ್ಚಿನ ಶಿಕ್ಷಕಿಯನ್ನು ಭೇಟಿ ಮಾಡಿ ಹೇಳಿಕೊಂಡಿದ್ದಳು ಎಂದು ಇನ್‌ಸ್ಪೆಕ್ಟರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.