ADVERTISEMENT

ಕ್ರೀಡಾ ಸಾಧಕರು: ಅಪ್ಪಟ ಗ್ರಾಮೀಣ ಪ್ರತಿಭೆ ಸಿದ್ದಲಿಂಗಮ್ಮ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 4:19 IST
Last Updated 4 ಅಕ್ಟೋಬರ್ 2024, 4:19 IST
ಸಿದ್ಧಲಿಂಗಮ್ಮ
ಸಿದ್ಧಲಿಂಗಮ್ಮ   

ಕುದೂರು: ಕಾಗಿಮಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಿದ್ದಲಿಂಗಮ್ಮ (ಶೋಭಾ) ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹೋಬಳಿ ಜನತೆಯ ಗಮನಸೆಳೆದ ಅಪ್ಪಟ ಗ್ರಾಮೀಣ ಪ್ರತಿಭೆ.

ತಂದೆ ಸಿದ್ದಗಂಗಯ್ಯ, ತಾಯಿ ಲಕ್ಷ್ಮಮ್ಮ ಇಬ್ಬರೂ ವೃತ್ತಿಯಲ್ಲಿ ರೈತರು. ಮಧ್ಯಮ ಕುಟುಂಬದಲ್ಲಿ ಜನಿಸಿದ ಸಿದ್ದಲಿಂಗಮ್ಮ, ಪ್ರೌಢಶಾಲಾ ಹಂತದಲ್ಲಿಯೇ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಎರಡು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದು, ಇದೀಗ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಶ್ರಮಿಸುತ್ತಿದ್ದಾರೆ. 

2022-23 ನೇ ಸಾಲಿನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಎತ್ತರ ಜಿಗಿತ ವಿಭಾಗದಲ್ಲಿ ಭಾಗವಹಿಸಿ ಆರನೇ ಸ್ಥಾನ, 2023-24
ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಎತ್ತರ ಜಿಗಿತ ವಿಭಾಗದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಈಗ ತಾಲ್ಲೂಕು ಹಂತದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ತಯಾರಿ ನಡೆಸುತ್ತಿದ್ದಾರೆ.

ADVERTISEMENT

ಮೊದಲಿನಿಂದಲೂ ಆಟೋಟಗಳಲ್ಲಿ ಹೆಚ್ಚು ಉತ್ಸಾಹ ತೋರುತ್ತಿದ್ದ ಸಿದ್ದಲಿಂಗಮ್ಮಗೆ ಪ್ರೌಢಶಾಲೆ ಪ್ರವೇಶಿಸುತ್ತಿದ್ದಂತೆ ಅಥ್ಲೆಟಿಕ್ಸ್‌ನಲ್ಲಿ ಒಲವು ಮೂಡಿತು. ಇದನ್ನು ಗುರುತಿಸಿ, ತರಬೇತಿ ನೀಡಿ, ಪೋಷಿಸಿದವರು ಕಾಗಿಮಡು ಸರ್ಕಾರಿ ಪ್ರೌಢಶಾಲೆಯ ಕ್ರೀಡಾ ಶಿಕ್ಷಕ ನವೀನ್ ಕುಮಾರ್ ಹಾಗೂ ಮುಖ್ಯ ಶಿಕ್ಷಕರು.

‘ಬೇರೆ ಪೋಷಕರಂತೆ ನನ್ನ ತಂದೆ–ತಾಯಿ ಆಟೋಟ ಎಂದರೆ ಉಪಯೋಗವಿಲ್ಲದ್ದು ಎಂದು ದೂರಲಿಲ್ಲ. ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ ಎಂದು ನನ್ನ ಗುರುಗಳೂ ಪ್ರೇರಣೆ ನೀಡಿದರು. ಇದಕ್ಕೆ ತಂದೆ, ತಾಯಿಯೂ ಪ್ರೋತ್ಸಾಹ ನೀಡಿದರು. ಇದರಿಂದಲೇ ನಾನು ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಲು ಸಾಧ್ಯವಾಗಿದೆ. ಮುಂದೆ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ  ಭಾಗವಹಿಸಬೇಕೆನ್ನುವ ಕನಸಿಗೆ. ಅದಕ್ಕೆ ನಮ್ಮ ಶಾಲೆಯಲ್ಲಿ ಪೂರಕ ವಾತಾವರಣ ಹಾಗೂ ಮನೆಯಲ್ಲಿಯೂ ಪ್ರೋತ್ಸಾಹ ಇರುವುದರಿಂದ ಈ ಕನಸು ನನಸಾಗುವ ಭರವಸೆ ಇದೆ’ ಎನ್ನುತ್ತಾರೆ ಸಿದ್ದಲಿಂಗಮ್ಮ.

ಸಿದ್ದಲಿಂಗಮ್ಮನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಸ್ವಾತಂತ್ರ್ಯೋತ್ಸವ ಕ್ರೀಡಾಕೂಟ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಸಿದ್ದಲಿಂಗಮ್ಮನಂತಹ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯವಿರುತ್ತದೆ. ಅವರ ಪ್ರತಿಭೆ ಹಾಗೂ ಪರಿಶ್ರಮಕ್ಕೆ ತಕ್ಕುದಾದ ಪೂರಕ ವಾತಾವರಣ ಲಭ್ಯವಾದರೆ ಇಂತಹ ಮಕ್ಕಳು ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುವಾಗಿ ಹೊರಹೊಮ್ಮುತ್ತಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಗಜಾನನ ಪಾಟೇಗಾರ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಟ್ರೋಫಿಯೊಂದಿಗೆ ಸಿದ್ಧಲಿಂಗಮ್ಮ
ಟ್ರೋಫಿಯೊಂದಿಗೆ ಸಿದ್ಧಲಿಂಗಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.