ADVERTISEMENT

ಚನ್ನಪಟ್ಟಣ | ಬಾಲಕಿ ಮೇಲೆ ಬೀದಿನಾಯಿಗಳ ದಾಳಿ: ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 15:34 IST
Last Updated 1 ಅಕ್ಟೋಬರ್ 2024, 15:34 IST
<div class="paragraphs"><p>ಬೀದಿನಾಯಿ</p></div>

ಬೀದಿನಾಯಿ

   

(ಸಾಂದರ್ಭಿಕ ಚಿತ್ರ)

ಚನ್ನಪಟ್ಟಣ: ನಗರದ ಇಸ್ಲಾಂಪುರ ಮೊಹಲ್ಲಾದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ 5 ವರ್ಷದ ಬಾಲಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ADVERTISEMENT

ಇಸ್ಲಾಂಪುರ ಮೊಹಲ್ಲಾದ ವಾಸಿ ಸಲೀಂ ಅವರ ಮಗಳು ಅಸ್ಲಿಮಾ ಆಲಿಯಾಸ್ ಅಲ್ಪು ಗಾಯಗೊಂಡ ಬಾಲಕಿ. ಅಂಗಡಿಗೆ ತಿಂಡಿ ತರಲು ಹೋಗಿ ಮನೆಗೆ ವಾಪಸ್ ಬರುವಾಗ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಬಾಲಕಿಯ ಮುಖ, ಬಾಯಿ, ಮೈ, ಕೈ ಕಾಲುಗಳನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.

ಸ್ಥಳದಲ್ಲಿದ್ದ ಕೆಲವರು ಬೀದಿನಾಯಿಗಳನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿ, ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೌರಾಯುಕ್ತ ಮಹೇಂದ್ರಕುಮಾರ್, ನಗರಸಭಾ ಸದಸ್ಯರಾದ ವಾಸಿಲ್ ಆಲಿ ಖಾನ್, ಮತೀನ್, ಸಾಹೀರಾ ಬಾನು, ಮುಖಂಡರಾದ ಸನಾಹುಲ್ಲಾ ಖಾನ್, ಇಬ್ರಾಹಿಂ ಖಾನ್ ಮತ್ತಿತರರು ರಾಮನಗರ ಜಿಲ್ಲಾ ಆಸ್ಪತ್ರೆಗೆ ತೆರಳಿ, ಬಾಲಕಿಯ ಪೋಷಕರಿಗೆ ಧೈರ್ಯ ಹೇಳಿದ್ದಾರೆ. ಸದ್ಯ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಮಕ್ಕಳು ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಸದಸ್ಯ ವಾಸಿಲ್ ಆಲಿಖಾನ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.