ರಾಮನಗರ: ಅಪ್ರಾಪ್ತ ವಯಸ್ಕರಿಗೆ ಬೈಕ್–ಸ್ಕೂಟರ್ ನೀಡುವ ಪೋಷಕರೇ ಎಚ್ಚರ. ಹೀಗೆ ಮಕ್ಕಳ ಕೈಗೆ ದ್ವಿಚಕ್ರವಾಹನ ಕೊಟ್ಟು ಸಿಕ್ಕಿಬಿದ್ದಲ್ಲಿ ಜೈಲು ಕಂಬಿ ಎಣಿಸಬೇಕಾಗುತ್ತದೆ.
ಮೋಟಾರ್ ವಾಹನ ಕಾಯ್ದೆಗೆ ಕೇಂದ್ರ ಸರ್ಕಾರ ಈಚೆಗಷ್ಟೇ ತಿದ್ದುಪಡಿ ತಂದಿದೆ. ಅದರ ಸೆಕ್ಷನ್ 199 ಅನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕಾಗಿ ಮಕ್ಕಳ ಪೋಷಕರು ಅಥವಾ ವಾಹನದ ಮಾಲೀಕರನ್ನು ಹೊಣೆಗಾರನ್ನಾಗಿ ಮಾಡಲಾಗುತ್ತದೆ. ವಾಹನ ನೋಂದಣಿ ರದ್ದಾಗುವ ಜೊತೆಗೆ ಪೋಷಕರಿಗೆ ₨25 ಸಾವಿರ ದಂಡ ಮತ್ತು ಮೂರು ವರ್ಷ ಕಾಲ ಸೆರೆವಾಸವೂ ಅನುಭವಿಸಬೇಕಾಗುತ್ತದೆ.
ಚಾಲನಾ ಪರವಾನಗಿ ಇಲ್ಲದೇ ವಾಹನ ಓಡಿಸುವ ವಿದ್ಯಾರ್ಥಿಗಳಿಗೂ ದಂಡ ತಪ್ಪಿದ್ದಲ್ಲ. ಬಾಲಾಪರಾಧಿ ಕಾಯ್ದೆಯ ಅಡಿ ಅವರೂ ಬಂಧನಕ್ಕೆ ಒಳಗಾಗಬೇಕಾಗುತ್ತದೆ. ದಂಡದ ಜೊತೆಗೆ ರಿಮ್ಯಾಂಡ್ ಹೋಮ್‌ನಲ್ಲಿ ದಿನ ಕಳೆಯಬೇಕಾಗುತ್ತದೆ.
‘ರಾಮನಗರದಲ್ಲಿಯೂ ಸಾಕಷ್ಟು ಮಕ್ಕಳು ಸ್ಕೂಟರ್–ಬೈಕ್ ಓಡಿಸುವುದು ಕಣ್ಣಿಗೆ ಬೀಳುತ್ತಲೇ ಇದೆ. ಐಜೂರು ವೃತ್ತದಲ್ಲೇ ಒಮ್ಮೊಮ್ಮೆ ಅಪ್ರಾಪ್ತರು ಸ್ಕೂಟರ್ ಸವಾರಿ ನಡೆಸುತ್ತಿರುತ್ತಾರೆ. ಸಂಚಾರ ಪೊಲೀಸರು ಕಂಡು ಕಾಣದಂತೆ ಇರುತ್ತಾರೆ’ ಎನ್ನುತ್ತಾರೆ ಐಜೂರು ನಿವಾಸಿ ರಮೇಶ್.
ಮುಖ್ಯವಾಗಿ ಟ್ಯೂಷನ್ ಕೇಂದ್ರಗಳಿಗೆ ಬರುವ ಹುಡುಗ–ಹುಡುಗಿಯರು ದ್ವಿಚಕ್ರವಾಹನಗಳನ್ನು ಬಳಸುತ್ತಿದ್ದಾರೆ. ಟ್ಯೂಷನ್ ಕೇಂದ್ರಗಳ ಮುಂದೆ ಸಾಲಾಗಿ ನಿಲ್ಲುವ ಬೈಕ್–ಸ್ಕೂಟರ್‌ಗಳೇ ಅದಕ್ಕೆ ಸಾಕ್ಷಿ. ಪೋಷಕರು ತಾವು ಕರೆದೊಯ್ಯಲಾಗದು ಎನ್ನುವ ಸಂಕಟಕ್ಕೆ ಮಕ್ಕಳಿಗೆ ವಾಹನ ಒಪ್ಪಿಸಿ ಸುಮ್ಮನಾಗುತ್ತಾರೆ. ಅದರಿಂದ ಅಪಾಯದ ಸಾಧ್ಯತೆಯೇ ಹೆಚ್ಚು. ಅಪಘಾತಗಳೂ ಸಂಭವಿಸಿದ ಉದಾಹರಣೆಗಳೂ ಇವೆ ಎನ್ನುತ್ತಾರೆ ಅವರು.
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವಾಹನಾ ಚಾಲನಾ ಪರವಾನಗಿ ಹೊಂದಬೇಕಾದರೆ ಕಡ್ಡಾಯವಾಗಿ 18 ವರ್ಷ ತುಂಬಿರಬೇಕು. ಡಿಎಲ್ ಇಲ್ಲದೇ ವಾಹನ ಓಡಿಸುವುದು ಅಪರಾಧ. ಮೊದಲು ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಬೇಕು. ಮೊದಲು ಡಿ.ಎಲ್. ಮಾಡಿಸಿಕೊಟ್ಟು ನಂತರವಷ್ಟೇ ಅವರಿಗೆ ಬೈಕ್ ಇಲ್ಲವೇ ಕಾರ್ ನೀಡಬೇಕು ಎನ್ನುತ್ತಾರೆ ಶಿಕ್ಷಕರಾದ ಶಿವರಾಮೇಗೌಡ.
ಪೊಲೀಸ್ ಇಲಾಖೆಯು ಮೊದಲು ಈ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಶಾಲೆ–ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. ಪಿ.ಯು. ಕಾಲೇಜುಗಳಿಗೆ ಬೈಕ್–ಸ್ಕೂಟರ್ ತರುವ ವಿದ್ಯಾರ್ಥಿಗಳ ವಿರುದ್ಧ ಆಯಾ ಶಿಕ್ಷಣ ಸಂಸ್ಥೆಗಳೂ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಅವರು.
ಕ್ರಮಕ್ಕೆ ಸಿದ್ಧತೆ: ವಾಹನ ಚಾಲನೆ ಮಾಡುವ ಅಪ್ರಾಪ್ತರು ಹಾಗೂ ಅವರಿಗೆ ವಾಹನ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ ಎನ್ನುತ್ತಾರೆ ಸಂಚಾರ ಪೊಲೀಸರು.
ಸದ್ಯ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು, ನಿರಂತರವಾಗಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೇ ಸಂದರ್ಭ ಅಪ್ರಾಪ್ತರ ವಾಹನ ಚಾಲನೆ ಮೇಲೂ ಕಣ್ಣಿಡಲಾಗುತ್ತದೆ. ಅಂತಹವರು ಸಿಕ್ಕಿಬಿದ್ದಲ್ಲಿ ವಾಹನವನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.
ಬೈಕ್ ವೀಲಿಂಗ್ ದುಸ್ಸಾಹಸ
ನಗರದಲ್ಲಿ ಬೈಕ್ ಏರಿ ವೀಲಿಂಗ್ ದುಸ್ಸಾಹಸ ಮಾಡುವ ಯುವಕರ ಸಂಖ್ಯೆಯೂ ಹೆಚ್ಚುತ್ತಿದೆ.
ರೈಲು ನಿಲ್ದಾಣದ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಬುರ್ರೆಂದು ಸದ್ದುಮಾಡುತ್ತಾ ಸಾಗುವ ಯುವಕರು ಜನನಿಬಿಡ ರಸ್ತೆಯಲ್ಲೇ ವೀಲಿಂಗ್ ಮಾಡುತ್ತಾ ಸುತ್ತಲಿನ ಜನರ ಆತಂಕಕ್ಕೆ ಕಾರಣವಾಗುತ್ತಿದ್ದಾರೆ. ಆಗಾಗ್ಗೆ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ. ವೀಲಿಂಗ್ ಸಲುವಾಗಿಯೇ ಬೈಕ್ ವಿನ್ಯಾಸ ಮಾಡುವ ಕೆಲವು ಗ್ಯಾರೇಜುಗಳೂ ಇವೆ. ಅಂತಹ ಕಡೆ ಪೊಲೀಸರು ದಾಳಿ ನಡೆಸಬೇಕು. ಜೋರು ಸದ್ದು ಮಾಡುವ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
**
ರಾಮನಗರದ ವ್ಯಾಪ್ತಿಯಲ್ಲಿ ಬಾಲಕರು ಬೈಕ್ ಓಡಿಸುವ ಪ್ರಕರಣಗಳು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ
- ಅನೂಪ್ ಶೆಟ್ಟಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.