ಮಾಗಡಿ: ಜೆಡಿಎಸ್ ಕಚೇರಿಯಲ್ಲಿ ಭಾನುವಾರ ತಾಲ್ಲೂಕು ವೀರಶೈವ, ಲಿಂಗಾಯತ ಮುಖಂಡರ ಸಭೆ ನಡೆಯಿತು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ’70 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಅವಧಿಯಲ್ಲಿ ಪಕ್ಷ ನೋಡದೆ ಅಭಿವೃದ್ಧಿ ಮಾಡಲಾಗಿದೆ. ₹886 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಕಾವೇರಿ ನದಿ ನೀರು ಒದಗಿಸುವ ಕಾಮಗಾರಿ ಕೊನೆ ಹಂತಕ್ಕೆ ಬಂದಿದೆ’ ಎಂದರು.
ಮಂಚನಬೆಲೆ ಮತ್ತು ಎತ್ತಿನಮನಗೆ ಗುಲಗಂಜೀ ಗುಡ್ಡದ ಜಲಾಶಯಗಳಿಗೆ ಕಾವೇರಿ ನದಿ ನೀರು ತುಂಬಿಸುವ ಕಾಮಗಾರಿ ಮತ್ತು ಶ್ರೀರಂಗ ಏತನೀರಾವರಿ ಯೋಜನೆ ಹಾಗೂ ಮರೂರು ಬಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಅಂದಿನ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅಡ್ಡಿಪಡಿಸಿದರು ಎಂದು ಆರೋಪಿಸಿದರು.
ಬರಗಾಲದಲ್ಲೂ ಕಾಂಗ್ರೆಸ್ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಉಸಿರು ಕಟ್ಟಿಸುವ ವಾತಾವರಣವಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಂಗಳೂರು ಹೊರವಲಯ ದಾಬಸಪೇಟೆಯಿಂದ ಆನೇಕಲ್, ಕನಕಪುರ, ರಾಮನಗರ, ಮಾಗಡಿ, ಶಿವಗಂಗೆ ಮೂಲಕ ₹25 ಸಾವಿರ ಕೋಟಿ ವೆಚ್ಚದಲ್ಲಿ ಎಸ್ ಟಿ ಆರ್‌ಆರ್ ಸ್ಯಾಟಲೈಟ್ ವರ್ತುಲ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದೆ ಎಂದರು.
‘ವೀರಶೈವ–ಲಿಂಗಾಯತ ಮುಖಂಡರಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರ ಕೊಡಲಿಲ್ಲ. ನಾನು ಶಾಸಕನಾದ ಕೂಡಲೇ ಪಟ್ಟಣದಲ್ಲಿ ₹6 ಕೋಟಿ ವೆಚ್ಚದಲ್ಲಿ ಶಿವಕುಮಾರ ಸ್ವಾಮೀಜಿ ಆಡಿಟೋರಿಯಂ ಕಟ್ಟಿಸಿದ್ದೇನೆ. ಶ್ರೀಗಳ ಜನ್ಮಸ್ಥಳ ವೀರಾಪುರದಲ್ಲಿ 108 ಅಡಿ ಎತ್ತರದ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಎರಡು ಭಾರಿ ಸಂಸದರಾಗಿ ಅಧಿಕಾರ ನಡೆಸಿರುವ ಡಿ.ಕೆ.ಸುರೇಶ್, ಲಿಂಗಾಯತ ಯುವಕರಿಗೆ ಕನಿಷ್ಠ ಒಂದು ಚಹ ಕೂಡ ಕೊಡಿಸಲಿಲ್ಲ‘ ಎಂದರು.
ಬಿಜೆಪಿ ಮುಖಂಡ ಪ್ರಸಾದ್ ಗೌಡ, ಬಸವರಾಜು, ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ, ತಾಲ್ಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಶಿವರುದ್ರಪ್ಪ ಮಾತನಾಡಿದರು.
ಹಲಸಬೆಲೆ ಗಂಗರಾಜು ಪ್ರಾಸ್ತಾವಿಕ ಭಾಷಣ ಮಾಡಿದರು. ಬಿಜೆಪಿ ಮುಖಂಡ ಚಿಕ್ಕಕಲ್ಯಾದ ಶ್ರೀಧರ್, ಎಸ್‍ಸಿಬಿಎಸ್ ಮಂಜುನಾಥ್, ತಟವಾಳ್ ಮಹೇಶ್, ಗಟ್ಟಿಪುರದ ಶಿವರುದ್ರಯ್ಯ, ತಾವರೆಕೆರೆ ಜಗದೀಶ್, ಕಾಗಿಮಡು ಚಂದ್ರಣ್ಣ, ಕೆರೆಬೀದಿ ಈಶ, ಪುರಸಭೆ ಸದಸ್ಯರಾದ ರೇಖಾನವಿನ್, ಅರುಣ್‍ಕುಮಾರ್, ಭಾಗ್ಯಮ್ಮ, ವೀರಶೈವ ಮಹಿಳಾ ಮುಖಂಡರಾದ ದೀಪಾ ಪ್ರಸಾದ್, ಗಂಗಾಂಬಿಕೆ, ಗುಡ್ಡಹಳ್ಳಿ ಶ್ವೇತ, ಅನಿಲ್‍ಕುಮಾರ್ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ವೇದಿಕೆಯಲ್ಲಿದ್ದರು.
ಮುಖಂಡ ಅಂಜನ್‍ಕುಮಾರ್ ಇತರರು ಎನ್‌ಡಿಎಗೆ ಸೇರ್ಪಡೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.