ADVERTISEMENT

HDK ಶಸ್ತ್ರಚಿಕಿತ್ಸೆ ಕುರಿತು ಅನುಮಾನ: ಶಾಸಕನ ಹೇಳಿಕೆಗೆ ಡಾ. ಮಂಜುನಾಥ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 7:40 IST
Last Updated 31 ಮಾರ್ಚ್ 2024, 7:40 IST
ಡಾ. ಸಿ.ಎನ್. ಮಂಜುನಾಥ್
ಡಾ. ಸಿ.ಎನ್. ಮಂಜುನಾಥ್   

ರಾಮನಗರ: ‘ಜೆಡಿಎಸ್ ನಾಯಕ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಮಾಡುವಾಗ ನಾನೂ ಇದ್ದೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಲಿನ ರಕ್ತನಾಳದ ಮೂಲಕ ಹೃದಯದ ಕವಾಟ ಬದಲಾವಣೆ ಮಾಡಲಾಗಿದೆ. ‘ಸರಿಯಾದ ಮಾಹಿತಿ ಇಲ್ಲದೆ ಯಾವುದರ ಬಗ್ಗೆಯೂ ಮಾತನಾಡಬಾರದು’ ಎಂದು ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ತಿರುಗೇಟು ನೀಡಿದರು.

‘ಚುನಾವಣೆ ಬಂದ್ರೆ ಸಾಕು ಕುಮಾರಸ್ವಾಮಿ ಆಸ್ಪತ್ರೆ ಸೇರ್ತಾರೆ’ ಎನ್ನುವ ಮೂಲಕ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಎಚ್‌ಡಿಕೆ ಹೃದಯ ಶಸ್ತ್ರಚಿಕಿತ್ಸೆ ಕುರಿತು ಅನುಮಾನ ವ್ಯಕ್ತಪಡಿಸಿದರು. ಅವರ ಹೇಳಿಕೆ ಕುರಿತು ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಂಜುನಾಥ್ ಅವರು ಪ್ರತಿಕ್ರಿಯಿಸಿದರು.

‘ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಬೇಕಾದರೆ ಎಂ.ಬಿ.ಬಿ.ಎಸ್ 6 ವರ್ಷ, ಎಂ.ಡಿ 3 ವರ್ಷ, ಸೂಪರ್ ಸ್ಪೇಷಾಲಿಟಿಗೆ ಡಿ.ಎಂ ಕಾರ್ಡಿಯಾಲಜಿ ಕೋರ್ಸ್ ಸೇರಿದಂತೆ ಒಟ್ಟು 13 ವರ್ಷ ಓದಬೇಕು. ಇದು ಆಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆ. ಸಾಮಾನ್ಯ ವೈದ್ಯರಿಗೂ ಇದರ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಇನ್ನು ಸಾಮಾನ್ಯ ಜನರಿಗೆ ಹೇಗೆ ಗೊತ್ತಾಗಬೇಕು. ಜ್ಞಾನಿಗಳು ಜ್ಞಾನಿಗಳಾಗಿಯೇ ಇರಬೇಕು. ಮತ್ತೊಂದು ಆಗಬಾರದು’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಕುಮಾರಸ್ವಾಮಿ ಅವರಿಗೆ 2007ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕವಾಟ ಜೋಡಿಸಲಾಗಿದೆ. 2017ರಲ್ಲಿ ಎರಡನೇ ಸಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಮೂರನೇ ಸಲ ಆಧುನಿಕ ತಂತ್ರಜ್ಞಾನದ ಬಳಸಿ ಕಾಲಿನ ರಕ್ತನಾಳದ ಮೂಲಕ ಕವಾಟ ಬದಲಾಯಿಸಲಾಗಿದೆ. ಆಂಜಿಯೋಗ್ರಾಂ ತಂತ್ರಜ್ಞಾನ ಬಳಸಿ ಮಾಡುವ ಈ ಶಸ್ತ್ರಚಿಕಿತ್ಸೆಯನ್ನು ಟಾವಿ ಎನ್ನಲಾಗುತ್ತದೆ. ನಾನು ಸಹ ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇನೆ’ ಎಂದರು.

‘ಬೆಂಗಳೂರಿನಲ್ಲೇ ಎಚ್‌ಡಿಕೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬಹುದಾಗಿತ್ತು. ಆದರೆ, ಚುನಾವಣೆ ಸಂದರ್ಭವಾಗಿರುವುದರಿಂದ ಇಲ್ಲಿ ಅವರಿಗೆ ಒತ್ತಡ ಹೆಚ್ಚಾಗುತ್ತದೆಂಬ ಕಾರಣಕ್ಕೆ ಚೆನ್ನೈನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.