ADVERTISEMENT

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ವಿಜ್ಞಾನಿ ಉದಿತ್ ಚೌಧರಿ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 12:17 IST
Last Updated 29 ಜನವರಿ 2020, 12:17 IST
ಬುಧವಾರ ಜಿಲ್ಲಾ ಮಟ್ಟದ ಇನ್‌ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ವಿಜ್ಞಾನಿ ಉದಿತ್ ಚೌಧರಿ ಉದ್ಘಾಟಿಸಿದರು
ಬುಧವಾರ ಜಿಲ್ಲಾ ಮಟ್ಟದ ಇನ್‌ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ವಿಜ್ಞಾನಿ ಉದಿತ್ ಚೌಧರಿ ಉದ್ಘಾಟಿಸಿದರು   

ರಾಮನಗರ: ಇಲ್ಲಿನ ಲೂರ್ದ್ಸ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು.

ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಿಂದ 412 ವಿದ್ಯಾರ್ಥಿಗಳು ಮಾದರಿಗಳನ್ನು ಸಿದ್ಧಪಡಿಸಿದ್ದರು. ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಮಾದರಿಗಳನ್ನು ಸಿದ್ಧಪಡಿಸಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆ, ನವದೆಹಲಿಯ ಡಿ.ಎಸ್.ಟಿ, ಬೆಂಗಳೂರಿನ ಡಿ.ಎಸ್.ಇ.ಆರ್.ಟಿ ಹಾಗೂ ಡಯಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಎನ್‌ಐಎಫ್ ವಿಜ್ಞಾನಿ ಉದಿತ್ ಚೌಧರಿ ಉದ್ಘಾಟಿಸಿದರು.

ADVERTISEMENT

ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ದೇಶದ ಅಭಿವೃದ್ದಿಯಲ್ಲಿ ಪಾಲುದಾರರರಾಗಬೇಕು. ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವುದರ ಜತೆಗೆ ಸೃಜನಶೀಲತೆ, ಕೌಶಲ ಹಾಗೂ ಕ್ರೀಯಾಶಿಲತೆಯನ್ನು ವ್ಯಕ್ತಪಡಿಸಲು ಒಂದು ವೇದಿಕೆ ದೊರೆಯುತ್ತದೆ ಎನ್ನುವ ಸದುದ್ದೇಶದಿಂದ ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು. ವಿಜ್ಞಾನದ ತತ್ವಗಳನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಉಪಯುಕ್ತವಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ವಿದ್ಯಾರ್ಥಿಗಳು ಮುಂದಾಗಬೇಕಾಗಿದೆ. ತಂತ್ರಜ್ಞಾನದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವಂತೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ ಮಾತನಾಡಿ ಇತ್ತಿಚಿಗೆ ವಿಜ್ಞಾನ-ತಂತ್ರಜ್ಞಾನದಲ್ಲಿ ಆಗುತ್ತಿರುವ ನೂತನ ಬೆಳವಣಿಗೆಳು ಸರ್ವರಿಗೂ ತಲುಪಿಸಬೇಕಾಗಿದೆ. ಶುದ್ಧ ಮತ್ತು ಹಸಿರು ಶಕ್ತಿಯ ಮಹತ್ವ ಆಹಾರ ಆರೋಗ್ಯ ಮತ್ತು ನೈರ್ಮಲ್ಯ, ಬಾಹ್ಯಕಾಶದ ಹುಡುಕಾಟ, ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟವುದರ ಕುರಿತು ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ ಎಂದು ತಿಳಿಸಿದರು.

ಡಯಟ್ ನ ಉಪನ್ಯಾಸಕರಾದ ಭಾರತಿ, ಮುನಿಕೆಂಪೇಗೌಡ, ರಾಮಲಿಂಗಯ್ಯ, ಭೀಮಾನಾಯಕ್, ರಂಗಸ್ವಾಮಿ, ದೇವೇಗೌಡ, ಸಿಸ್ಟರ್ ಪ್ರವೀಣ, ಶಿಕ್ಷಕ ಶಿವಸ್ವಾಮಿ, ಪಿ. ಸೋಮಲಿಂಗಯ್ಯ, ರೇಣುಕಮ್ಮ ಇದ್ದರು.

ಬಿಜಿಎಸ್ ಅಂಧರ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ, ರೈತ ಗೀತೆ ಹಾಡಿದರು. ವಿದ್ಯಾರ್ಥಿನಿ ಸ್ಪಂದನಾ ಸ್ವಾಗತಿಸಿದರು. ಭೂಮಿಕಾ ಮತ್ತು ಚಂದನ್ ನಿರೂಪಿಸಿದರು. ಮಂಜುಶ್ರೀ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮನೋಜ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.