ADVERTISEMENT

ಟೇಕ್ವಾಂಡೊ ಚಿನ್ನದ ಬಾಲೆ ಶಾನ್ವಿ

ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಗೆದ್ದ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 5:53 IST
Last Updated 1 ಮೇ 2024, 5:53 IST
ಟ್ರೋಫಿ ಮತ್ತು ಪದಕಗಳೊಂದಿಗೆ ಶಾನ್ವಿ ಸತೀಶ್
ಟ್ರೋಫಿ ಮತ್ತು ಪದಕಗಳೊಂದಿಗೆ ಶಾನ್ವಿ ಸತೀಶ್   

ರಾಮನಗರ: ನಗರದ ಟೇಕ್ವಾಂಡೊ ಕ್ರೀಡಾಪಟು ಶಾನ್ವಿ ಸತೀಶ್ ಅಂತರರಾಷ್ಟ್ರೀಯ ಮಟ್ಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ. ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...’ ಎಂಬ ಮಾತಿನಂತೆ, ತನ್ನ ಸಾಧನೆ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಅಂತರರಾಷ್ಟ್ರೀಯ ಟೇಕ್ವಾಂಡೊ ಫೆಡರೇಷನ್ ದುಬೈನ ಪೊಲೀಸ್ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 6ರಿಂದ 8 ವರ್ಷದೊಳಗಿನವರ ಅಂತರರಾಷ್ಟ್ರೀಯ ಮಟ್ಟದ ಟೇಕ್ವಾಂಡೊ ಸ್ಪ್ಯಾರಿಂಗ್‌ (ಫೈಟಿಂಗ್) ಮತ್ತು ಪ್ಯಾಟರ್ನ್ಸ್ (ಕೌಶಲ ಪ್ರದರ್ಶನ) ಸ್ಪರ್ಧೆಯಲ್ಲಿ, 7 ವರ್ಷದ ಶಾನ್ವಿ ಸ್ಪ್ಯಾರಿಂಗ್‌ ವಿಭಾಗದಲ್ಲಿ 1 ಚಿನ್ನ ಮತ್ತು ಪ್ಯಾಟರ್ನ್ಸ್ ವಿಭಾಗದಲ್ಲಿ 2 ಬೆಳ್ಳಿ ಪದಕ ಗಳಿಸಿದ್ದಾಳೆ.

ಭಾರತ, ಯುಎಇ, ಕಜಾಕಿಸ್ತಾನ, ಬಾಂಗ್ಲಾದೇಶ, ರಷ್ಯ, ಇಥಿಯೋಪಿಯ ಹಾಗೂ ಉಜ್ಬೇಕಿಸ್ತಾನ್ ಸೇರಿದಂತೆ ಏಳು ದೇಶಗಳ 250 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 28 ಕ್ರೀಡಾಪಟುಗಳಲ್ಲಿ ಶಾನ್ವಿ ಕೂಡ ಒಬ್ಬಳು.

ADVERTISEMENT

ಸ್ಪ್ಯಾರಿಂಗ್‌ ವಿಭಾಗದಲ್ಲಿ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ ಶಾನ್ವಿ, ಅಂತಿಮ ಪಂದ್ಯದಲ್ಲಿ ಯುಎಇ ಸ್ಪರ್ಧಿಯನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾಳೆ. ಪ್ಯಾಟರ್ನ್ಸ್‌ ವಿಭಾಗದ ಸ್ಪರ್ಧೆಯಲ್ಲಿ ವೈಯಕ್ತಿಕ ಮತ್ತು ಗುಂಪು ಪ್ರದರ್ಶನದಲ್ಲಿ ಸಹ ಉತ್ತಮ ಸಾಧನೆ ತೋರಿದ ಶಾನ್ವಿ ಎರಡರಲ್ಲೂ ಬೆಳ್ಳಿ ಪದಕ ಸಾಧನೆ ಮಾಡಿದ್ದಾಳೆ.

ನಗರದ ಸಂಜೀವಿನಿ ಗಾರ್ಡನ್‌ನ ಕೆ. ಸತೀಶ್ ಮತ್ತು ಚೈತ್ರಾ ಎ.ಆರ್ ದಂಪತಿ ಪುತ್ರಿಯಾದ ಶಾನ್ವಿ, ಐದೂವರೆ ವರ್ಷವಿದ್ದಾಗಿನಿಂದಲೇ ಟೇಕ್ವಾಂಡೊ ತರಬೇತಿಗೆ ಸೇರಿದಳು. ರಾಮನಗರದ ಗೋವಿಂದ ಎಂ. ಅವರ ಬಳಿ ತರಬೇತಿ ಪಡೆಯುತ್ತಿರುವ ಶಾನ್ವಿ ನಂತರ, ವಾರಾಂತ್ಯದಲ್ಲಿ ಬೆಂಗಳೂರಿನ ಬಾಲರಾಜನ್ ಮತ್ತು ಪ್ರದೀಪ್ ಅವರ ತರಬೇತಿಗೆ ಹೋಗುತ್ತಿದ್ದಾಳೆ.

ರಾಜ್ಯ–ರಾಷ್ಟ್ರ ಮಟ್ಟದಲ್ಲೂ ಬೆಳ್ಳಿ ಸಾಧನೆ: ‘ಕಳೆದ ಒಂದೂವರೆ ವರ್ಷದಲ್ಲಿ ಟೇಕ್ವಾಂಡೊದಲ್ಲಿ ಪುತ್ರಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳ ಸಾಧನೆ ಮಾಡಿದ್ದಾಳೆ. ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯ ಮತ್ತು ರಾಷ್ಟ್ರಮಟ್ಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಗಮನ ಸೆಳೆದಿದ್ದಳು. ಈ ಎಲ್ಲಾ ಸಾಧನೆಗಳು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲು ಕಾರಣವಾದವು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಅಧ್ಯಕ್ಷರು ಆಗಿರುವ ಶಾನ್ವಿ ತಂದೆ ಕೆ. ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಮನಗರ ನೇಟಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಪುತ್ರಿ, ಇದೀಗ ಒಂದನೇ ತರಗತಿ ಪೂರ್ಣಗೊಳಿಸಿ ಎರಡನೇ ತರಗತಿಗೆ ಕಾಲಿಟ್ಟಿದ್ದಾಳೆ. ಟೇಕ್ವಾಂಡೊದಲ್ಲಿ ಅವಳು ಮಾಡಿರುವ ಸಾಧನೆಯ ಹಿಂದೆ ರಾಮನಗರ ಜಿಲ್ಲಾ ಟೇಕ್ವಾಂಡೊ ಸಂಸ್ಥೆ, ಕರ್ನಾಟಕ ಟೇಕ್ವಾಂಡೊ ಸಂಸ್ಥೆ ಹಾಗೂ ತರಬೇತುದಾರರ ಶ್ರಮ ಹಾಗೂ ಪ್ರೋತ್ಸಾಹವನ್ನು ಮರೆಯುವಂತಿಲ್ಲ’ ಎಂದು ಕೃತಜ್ಞತೆ ಸಲ್ಲಿಸಿದರು.

ಶಾನ್ವಿ ಸಾಧನೆಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪವಿಭಾಗಾಧಿಕಾರಿ ಬಿನೋಯ್, ಕರ್ನಾಟಕ ರಾಜ್ಯ ಸರ್ಕಾರಿ ರಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಶಿವಸ್ವಾಮಿ, ಪದಾಧಿಕಾರಿಗಳು ಹಾಗೂ ನೇಟಸ್ ಶಾಲೆಯ ಪ್ರಾಂಶುಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಟೇಕ್ವಾಂಡೊ ಫೆಡರೇಷನ್  ದುಬೈನಲ್ಲಿ ಆಯೋಜಿಸಿದ್ದ 6ರಿಂದ 8 ವರ್ಷದೊಳಗಿನವರ ಅಂತರರಾಷ್ಟ್ರೀಯ ಮಟ್ಟದ ಟೇಕ್ವಾಂಡೊ ಸ್ಪ್ಯಾರಿಂಗ್‌ ಮತ್ತು ಪ್ಯಾಟರ್ನ್ಸ್ ಸ್ಪರ್ಧೆಯ ಸ್ಪ್ಯಾರಿಂಗ್ ವಿಭಾಗದಲ್ಲಿ ಶಾನ್ವಿ ಸತೀಶ್ ಚಿನ್ನದ ಪದಕ ಸ್ವೀಕರಿಸಿದ ಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.