ADVERTISEMENT

ಡೆಂಗಿ ಹೆಚ್ಚಳವಾಗದಂತೆ ನಿಗಾ ವಹಿಸಿ: ಶಾಸಕ ಎಚ್.ಸಿ.ಬಾಲಕೃಷ್ಣ

ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ವಿಶೇಷ ಸಭೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 5:49 IST
Last Updated 13 ಜುಲೈ 2024, 5:49 IST
ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಡೆಂಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ನಡೆಸಲಾಯಿತು
ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಡೆಂಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ನಡೆಸಲಾಯಿತು    

ಮಾಗಡಿ: ಡೆಂಗಿ ಪ್ರಕರಣಗಳು ಹೆಚ್ಚಾಗದಂತೆ ವೈದ್ಯಾಧಿಕಾರಿಗಳು ಎಲ್ಲ ರೀತಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಜತೆಗೆ ಸಾರ್ವಜನಿಕರು ಕೂಡ ಡೆಂಗಿ ಹರಡದಂತೆ ಸ್ವಚ್ಛತೆಗೆ ಒತ್ತು ನೀಡಬೇಕೆಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಖಾಸಗಿ ಲ್ಯಾಬ್‌ಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯುವಂತಿಲ್ಲ. ಸರ್ಕಾರ ಎರಡು ರೀತಿ ಡೆಂಗಿ ಪರೀಕ್ಷೆಗೆ ₹300ರಂತೆ 600 ಮಾತ್ರ ಪಡೆಯಬೇಕು. ಹೆಚ್ಚಿಗೆ ಪಡೆದರೆ ಅಂತಹ ಲ್ಯಾಬ್‌ಗಳ ವಿರುದ್ಧ ಸರ್ಕಾರಿ ಆಸ್ಪತ್ರೆಯಲ್ಲಿ ದೂರು ನೀಡಿದರೆ ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ಪ್ರಕರಣದಲ್ಲಿ ದಾಖಲಾಗಿರುವ ಮಾಹಿತಿ‌ ಕೂಡ ತಾಲ್ಲೂಕು ವೈದ್ಯಾಧಿಕಾರಿಗಳು ಪಡೆಯಬೇಕೆಂದು ತಿಳಿಸಿದರು.

ಕೂಲಂಕಷ ತನಿಖೆ ಆಗಲಿ: ಅವಧಿ ಮೀರಿದ ಗ್ಲುಕೋಸ್ ಪ್ರಕರಣ ತನಿಖೆ ಹಂತದಲ್ಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಶಾಸಕ ಬಾಲಕೃಷ್ಣ ಜಿಲ್ಲಾ ವೈದ್ಯಾಧಿಕಾರಿ ಡಾ.ನಿರಂಜನ್ ಅವರಿಗೆ ಸೂಚಿಸಿದರು.

ADVERTISEMENT

ತಾಲ್ಲೂಕು ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್, ಅವಧಿ ಮುಗಿದ ಗ್ಲುಕೋಸ್ ಆಸ್ಪತ್ರೆಯದ್ದು ಅಲ್ಲ. ಹಿಂದಿನ ದಾಖಲೆಗಳನ್ನು ಪರೀಕ್ಷಿಸಲಾಗಿದೆ ಎಂದು ಸಭೆಯಲ್ಲಿ ಹೇಳುತ್ತಿದ್ದಂತೆ ಯಾವ ರೀತಿ ಅವಧಿ ಮುಗಿದ ಗ್ಲುಕೋಸ್ ಬರಲು ಸಾಧ್ಯ ಎಂದು ಶಾಸಕರು ಪ್ರಶ್ನಿಸಿದರು. 

ಶುಶ್ರೂಷಕಿಯರ ಕೊರತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ದಲಿತ ಮುಖಂಡ ಕಲ್ಲುದೇವನಹಳ್ಳಿ ಮಹದೇವ್ ಮಾತನಾಡಿ, ಆಸ್ಪತ್ರೆಯಲ್ಲಿ ಚರ್ಮ ವೈದ್ಯರ ನೇಮಕಕ್ಕೆ ಮನವಿ ಮಾಡಿದರು.
ಡೆಂಗಿ ರೋಗಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು 9449843266 ಸಂಪರ್ಕಿಸಬಹುದು ಎಂದು ಡಿಹೆಚ್ಒ ಡಾ.ನಿರಂಜನ್ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಶರತ್ ಕುಮಾರ್, ತಾ.ಪಂ ಇಒ ಚಂದ್ರು, ಟಿಎಚ್ಒ ಚಂದ್ರುಶೇಖರ್, ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.