ADVERTISEMENT

ಮಾಗಡಿ | ಬಿಸಿಲು ಮಾರಮ್ಮದೇವಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 5:53 IST
Last Updated 17 ಫೆಬ್ರುವರಿ 2024, 5:53 IST
ಮಾಗಡಿಯ ಹೊಸಪೇಟೆಯಲ್ಲಿ ನೂತನ ಬಿಸಿಲು ಮಾರಮ್ಮ ದೇವಾಲಯವನ್ನು ಹೊಸದುರ್ಗದ ಕಾಗಿನೆಲೆ ಗುರುಪೀಠಾಧ್ಯಕ್ಷ ಈಶ್ವರಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು. ಬಸವಕೇತೇಶ್ವರಸ್ವಾಮಿಜಿ, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಎಂ.ರೇವಣ್ಣ ಇದ್ದರು
ಮಾಗಡಿಯ ಹೊಸಪೇಟೆಯಲ್ಲಿ ನೂತನ ಬಿಸಿಲು ಮಾರಮ್ಮ ದೇವಾಲಯವನ್ನು ಹೊಸದುರ್ಗದ ಕಾಗಿನೆಲೆ ಗುರುಪೀಠಾಧ್ಯಕ್ಷ ಈಶ್ವರಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು. ಬಸವಕೇತೇಶ್ವರಸ್ವಾಮಿಜಿ, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಎಂ.ರೇವಣ್ಣ ಇದ್ದರು   

ಮಾಗಡಿ: ಪಟ್ಟಣದ ಹೊಸಪೇಟೆ ಬಿಸಿಲು ಮಾರಮ್ಮ ದೇವಾಲಯ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾಪನೆಯನ್ನು ಶುಕ್ರವಾರ ಹೊಸದುರ್ಗದ ಕಾಗಿನೆಲೆ ಕನಕಗುರು ಪೀಠಾಧ್ಯಕ್ಷ ಈಶ್ವರಾನಂದ ಪುರಿ ಸ್ವಾಮೀಜಿ ನೆರವೇರಿಸಿದರು.

ನೂತನ ಶಿಲಾಮೂರ್ತಿಗೆ ಸಿಹಿನೀರು ಬಾವಿ ಬಳಿ ಮಜ್ಜನ ಮಾಡಿಸಿ,ಅಲಂಕರಿಸಲಾಯಿತು. ನೂರಾರು ಮಹಿಳೆಯರು ಗಂಗಾಪೂಜೆ ಸಲ್ಲಿಸಿದರು. ಪೂರ್ಣಕುಂಭಗಳೊಂದಿಗೆ ದೇವಾಲಯದ ವರೆಗೆ ಮಂಗಳವಾದ್ಯ ಸಹಿತ ಅಲಂಕೃತ ಬೆಳ್ಳಿರಥದಲ್ಲಿ ಶಿಲಾಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ  ಈಶ್ವರಾನಂದ ಪುರಿ ಸ್ವಾಮೀಜಿ, ಹೊಸಪೇಟೆಯವರೆಲ್ಲರೂ ಸೇರಿ ನೂತನ ದೇವಾಲಯ ಕಟ್ಟಿಸಿರುವುದು ಸಂತಸ ತಂದಿದೆ. ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ.ರೇವಣ್ಣ ಎಲ್ಲಾ ಸಮಾಜದವರ ಏಳಿಗೆಗೆ ದುಡಿದವರು. ದೇವಾಲಯ ಕಟ್ಟಿಸಿದವರು ತಳವರ್ಗದವರಾದರೂ ಕೆಲವು ದೇವಾಲಯಗಳಲ್ಲಿ ಮೇಲು ವರ್ಗದವರು ಪೂಜೆ ಸಲ್ಲಿಸಿ ವೈದಿಕ ಸಂಸ್ಕೃತಿ ಹೇರುವುದು ಸರಿಯಲ್ಲ.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿಸಿ, ಅಹಿಂದ ಸಮುದಾಯಗಳು ಸಂಘಟಿತರಾಗಿ ಸರ್ಕಾರಿ ಸವಲತ್ತು ಪಡೆಯಲು ಮುಂದಾಗಬೇಕು ಎಂದರು.

ADVERTISEMENT

ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, 13 ಕೋಮಿನವರು ಸೇರಿ ದೇವಾಲಯದ ಕಟ್ಟಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಸಲ ಮುಖ್ಯಮಂತ್ರಿ ಆಗಿದ್ದಾಗ ಒಕ್ಕಲಿಗರು, ವೀರಶೈವರು, ತಿಗಳರು ಸೇರಿದಂತೆ 35 ವಿವಿಧ ಜಾತಿಗಳಿಗೆ ಸಮುದಾಯ ಭವನ ಕಟ್ಟಿಸಿಕೊಳ್ಳಲು ಅನುದಾನ ನೀಡಿದ್ದರು. ಕೆಲವು ಸಮುದಾಯಗಳು ಉತ್ತಮ ಸಮುದಾಯ ಭವನಗಳನ್ನು ಕಟ್ಟಿಸಿದ್ದಾರೆ. ನಮ್ಮೂರು ಭಾವೈಕ್ಯದ ಸಂಕೇತ. ಇಂದಿಗೂ ನಮ್ಮ ಊರಿನವರು ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ ಎಂದರು.

ಚಿತ್ರದುರ್ಗದ ಬಸವಮೇದಾರ ಕೇತೇಶ್ವರಸ್ವಾಮಿ ಮಾತನಾಡಿ, ತಳಸಮುದಾಯದವರು ದುಡಿಯುವ ಜೊತೆಗೆ ಜನಪದ ಮೂಲಪರಂಪರೆ, ದೈವ ಭಕ್ತಿ ಉಳಿಸಿಕೊಳ್ಳಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಚ್.ಆರ್.ಮಂಜುನಾಥ್, ಸದಸ್ಯರಾದ ಅಶ್ವತ್ಥ್, ಎಚ್.ಜೆ.ಪುರುಷೋತ್ತಮ್, ಭಾಗ್ಯಮ್ಮನಾರಾಯಣಪ್ಪ, ಆಶಾದೇವಿ ರಘು ಹಾಗೂ ಗ್ರಾಮಸ್ಥೆರೆಲ್ಲರೂ ಭಾಗವಹಿಸಿದ್ದರು. ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.