ಮಾಗಡಿ: ಪಟ್ಟಣದ ಕೋಟೆಯ ಕಂದಕಕ್ಕೆ ನೀರು ತುಂಬಿಸುತ್ತಿದ್ದ ಹಾಗೂ ಕುಡಿಯಲು ಬಳಸುತ್ತಿದ್ದ ಸಿಹಿನೀರಿನ ತಟಾಕ ಹೊಂಬಾಳಮ್ಮನ ಕೆರೆಗೆ ಕಲುಷಿತ ನೀರು ತುಂಬಿ ರೋಗ ಹರಡುವ ತಾಣವಾಗಿದೆ.
ಪಟ್ಟಣದ ಬೆಳೆದಂತೆಲ್ಲಾ ಕೆರೆ ಏರಿಮೇಲೆ ಹಾದುಹೋಗುವ ಬೆಂಗಳೂರು -ಕುಣಿಗಲ್ ರಸ್ತೆ ವಿಸ್ತರಣೆ ಮಾಡಿದರು. ಕಲ್ಯಾಬಾಗಿಲು, ಹೊಸಮಸೀದಿ ಮೊಹಲ್ಲಾ, ಗಾಣಿಗರ ಬೀದಿಗಳ ಮನೆಗಳಿಂದ ಹರಿದು ಬರುವ ಕಲುಷಿತ ಹೊಂಬಾಳಮ್ಮನಕೆರೆ ಒಡಲು ಸೇರುತ್ತಿದೆ. ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ.
ಕಲ್ಯಾಬಾಗಿಲು ಬಡಾವಣೆ, ಜ್ಯೋತಿನಗರದಿಂದ ಚರಂಡಿ ಮೂಲಕ ಹರಿದು ಬರುವ ಒಳಚರಂಡಿ ಕಲುಷಿತ ಕೆರೆ ನೀರಿಗೆ ಸೇರಿ ಮಲಿನವಾಗುತ್ತಿದೆ. ಕಂದಕಕ್ಕೆ ಪಟ್ಟಣದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಪ್ರಾಣಿ–ಪಕ್ಷಿಗಳಿಗೆ ಮತ್ತು ರೈತರಿಗೆ ತವನಿಧಿಯಂತಿದ್ದ ಹೊಂಬಾಳಮ್ಮನ ಕೆರೆ ಕಲುಷಿತ ನೀರಿನಿಂದ ಕೂಡಿ ದುರ್ಗಂಧ ಬೀರುತ್ತಿದೆ. ವಿಷಜಂತುಗಳು ತುಂಬಿವೆ.
ಬೋಗುಣಿಯಂತಿರುವ ಮಾಗಡಿ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಇರುವ ಸೋಮೇಶ್ವರಸ್ವಾಮಿ ದೇವಾಲಯದ ಬೆಟ್ಟದಿಂದ ಹರಿದು ಬರುವ ಮಳೆಯ ನೀರು ಹೊಂಬಾಳಮ್ಮನಕೆರೆಯಲ್ಲಿ ಸಂಗ್ರಹವಾಗುತ್ತಿತ್ತು. ಇದೊಂದು ಸಿಹಿನೀರಿನ ಒರತೆಯ ತಟಾಕವಾಗಿದೆ. ಕೆರೆ 112 ಎಕರೆ ವಿಸ್ತೀರ್ಣವಿತ್ತು. 100 ಎಕರೆ ಅಚ್ಚಕಟ್ಟು ಪ್ರದೇಶವಿದೆ. ವರ್ಷಪೂರ್ತಿ ಕೆರೆಯಲ್ಲಿ ನೀರು ಸಂಗ್ರಹವಾಗಿರುತ್ತಿತ್ತು. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ತೆಂಗು, ಅಡಿಕೆ, ಹೂವು, ಹಣ್ಣು, ತರಕಾರಿ, ಸೊಪ್ಪು ಬೆಳೆದು ಬದುಕು ಕಟ್ಟಿಕೊಂಡಿದ್ದರು. ಸಿಹಿನೀರಿನಿಂದ ತುಂಬಿರುತ್ತಿದ್ದ ಕೆರೆಯಲ್ಲಿ ಮೀನು, ಏಡಿಕಾಯಿ, ಪಕ್ಷಿಗಳು ಆವಾಸ ಸ್ಥಾನ ಮಾಡಿಕೊಂಡಿದ್ದವು.
ಜೀವಜಲವನ್ನು ಮೈದುಂಬಿಕೊಂಡು ರೈತರ ಭೂಮಿಯನ್ನು ಹಸಿರನ್ನಾಗಿಸಿದ್ದ ಕೆರೆಯಲ್ಲಿ ಜಂಡುಹುಲ್ಲು ಬೆಳೆದಿದೆ. ಕೆರೆ ಏರಿಯಲ್ಲಿ ಕಳೆಯ ಬಳ್ಳಿ ಬೆಳೆದಿದೆ. ಹಗಲಿನಲ್ಲಿಯೇ ಏರಿಯ ಮೇಲೆ ಹಾವುಗಳು ಓಡಾಡುತ್ತಿವೆ. ಕೆರೆ ದುರಸ್ತಿ ಪಡಿಸುವುದಾಗಿ ಮಾಗಡಿ ಯೋಜನಾ ಪ್ರಾಧಿಕಾರ ಮತ್ತು ಸಣ್ಣ ನೀರಾವರಿ ಇಲಾಖೆಗಳು ಹಣ ಖರ್ಚು ಮಾಡಿವೆ. ಆದರೆ, ಕೆರೆಯ ಅವಸಾನ ಮಾತ್ರ ನಿಂತಿಲ್ಲ.
ಮಲಿನವಾಗಿರುವ ಹೊಂಬಾಳಮ್ಮನ ಕೆರೆಯನ್ನು ಸ್ವಚ್ಛಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಿದೆ–ರಮ್ಯಾ ಹೊಂಬಾಳಮ್ಮನಪೇಟೆ
ಕೆರೆಯನ್ನು ಸ್ವಚ್ಛಗೊಳಿಸಿ ವಾಯುವಿಹಾರ ಪಥ ನಿರ್ಮಿಸುವ ಯೋಜನೆ ಇದೆ.ಶಿವರುದ್ರಯ್ಯ ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.