ಚನ್ನಪಟ್ಟಣ: ನಗರದಲ್ಲಿ ಸುಮಾರು ₹40 ಕೋಟಿ ಅಂದಾಜು ವೆಚ್ಚದ ಉದ್ದೇಶಿತ ಖಾಸಗಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಹನ್ನೊಂದು ವರ್ಷದಿಂದ ಗ್ರಹಣ ಹಿಡಿದಿದೆ.
ನಗರದ ಹೃದಯ ಭಾಗದಲ್ಲಿ ವ್ಯರ್ಥವಾಗಿ ಬಿದ್ದಿರುವ ಈ ಪಾಳು ಜಾಗ ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.
ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ವತಿಯಿಂದ ಜಂಟಿಯಾಗಿ ನಿರ್ಮಿಸಲು ಉದ್ದೇಶಿಸಿದ್ದ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ 2013ರ ಮೇ 30 ರಂದು ಅಂದಿನ ಶಾಸಕ ಸಿ.ಪಿ. ಯೋಗೇಶ್ವರ್ ಶಂಕುಸ್ಥಾಪನೆ ನೆರವೇರಿಸಿದ್ದರು.
ಕಟ್ಟಡದಲ್ಲಿ ತಳ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ನೆಲಮಹಡಿಯಲ್ಲಿ ಬಸ್ ನಿಲುಗಡೆ, ಕೊನೆಯ ಅಂತಸ್ತಿನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ, ಹೈಟೆಕ್ ಹೋಟೆಲ್ ಒಳಗೊಂಡ ಆರು ಅಂತಸ್ತಿನ ಅತ್ಯಂತ ಸುಸಜ್ಜಿತ ಬೃಹತ್ ಕಟ್ಟಡವನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ನಗರಸಭೆಯಿಂದ ಜಾಗ, ಪ್ರಾಧಿಕಾರ ಅನುದಾನ ಒದಗಿಸಿ ಕಟ್ಟಡ ನಿರ್ಮಿಸುವ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು.
ಆರಂಭದಲ್ಲಿ ಬಿರುಸಿನಿಂದ ಆರಂಭಗೊಂಡ ಕಾಮಗಾರಿ ನಂತರ ಹಲವಾರು ವಿಘ್ನಗಳು ಎದುರಾದ ಕಾರಣ ಹನ್ನೊಂದು ವರ್ಷಗಳಿಂದ ಸ್ಥಗಿತಗೊಂಡಿದೆ. ಉದ್ದೇಶಿತ ಜಾಗದ ಸುತ್ತಲೂ ಶೀಟ್ ಅಳವಡಿಸಿರುವುದರಿಂದ ಈ ಜಾಗ ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ಗ್ರಾಮೀಣ ಭಾಗಕ್ಕೆ ಹೋಗಲು ಖಾಸಗಿ ಬಸ್ ಆಶ್ರಯಿಸುವ ಪ್ರಯಾಣಿಕರು ಮರದ ನೆರಳು, ಹೆದ್ದಾರಿಯ ಬದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಮುಂದುವರೆಯುತ್ತಿದೆ.
ಜಾಗಕ್ಕೆ ತಕರಾರು: ಕಾಮಗಾರಿ ಆರಂಭಿಸಲು ಪ್ರಾಧಿಕಾರ ಮುಂದಾಗುತ್ತಿದ್ದಂತೆಯೇ ನಿಗದಿತ ಜಾಗದಲ್ಲಿ ತಮಗೆ 5.5 ಗುಂಟೆ ಜಾಗ ಸೇರಬೇಕೆಂದು ಇಬ್ಬರು ಖಾಸಗಿ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿ ಕಾಮಗಾರಿಗೆ ತಡೆಯಾಜ್ಞೆ ತಂದರು. ಈ ವಿವಾದದಿಂದ ಕಾಮಗಾರಿ ಮುಂದಕ್ಕೆ ಹೋಯಿತು. ವಿವಾದಿತ ಜಾಗದಲ್ಲಿ ಕಟ್ಟಡದ ಒಂದು ಪಿಲ್ಲರ್ ಹಾಕಬೇಕಿದ್ದರಿಂದ ಕಾಮಗಾರಿ ಸ್ಥಗಿತವಾಯಿತು.
ಇದಕ್ಕೂ ಮೊದಲು ₹1 ಕೋಟಿ ವೆಚ್ಚದಲ್ಲಿ ಮಣ್ಣೆತ್ತುವ ಕಾರ್ಯ ನಡೆದಿತ್ತು. ಈ ನಡುವೆ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆಯಿತು ಎಂಬ ಆರೋಪ ಕೇಳಿಬಂತು. ಈ ಕಾಮಗಾರಿಗೆ ಇಟ್ಟಿದ್ದ ಹಣದ ವಿಚಾರವಾಗಿಯೆ ಅವ್ಯವಹಾರ ನಡೆದ ಕಾರಣ ಹಾಗೂ ಜಾಗದ ವಿವಾದಕ್ಕೆ ಪ್ರಕರಣ ದಾಖಲಾಗಿರುವ ಕಾರಣ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿಲ್ಲ ಎಂದು ಪ್ರಾಧಿಕಾರದ ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.
ರಾಮನಗರ–ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಅಂದು ಕಾಮಗಾರಿ ಆರಂಭಿಸಿತ್ತು. ಈಗ ಈ ಪ್ರಾಧಿಕಾರವು ವಿಭಜನೆಯಾಗಿದೆ. ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಸ್ಥಾಪನೆಯಾಗಿದೆ. ಆದರೆ ಈ ಕಾಮಗಾರಿ ನಮ್ಮ ಸುಪರ್ಧಿಗೆ ಬರುವುದಿಲ್ಲ. ಇದನ್ನು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರವೇ ನೋಡಿಕೊಳ್ಳುತ್ತದೆ ಎನ್ನುತ್ತಾರೆ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್.
ರಾಜಕೀಯ ಪಕ್ಷವೊಂದರ ಇಬ್ಬರು ಮುಖಂಡರು ಈ ಜಾಗದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ತೆರವು ಮಾಡಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಜಾಗದ ಬಗ್ಗೆ ತಕರಾರು ತೆಗೆದಿರುವ ವ್ಯಕ್ತಿಗಳಿಗೆ ಪರಿಹಾರ ನೀಡಿ ತೆರವು ಮಾಡಿಸಿದರೆ ಕಾಮಗಾರಿ ಆರಂಭವಾಗುತ್ತದೆ ಎಂಬುದನ್ನು ಮನದಟ್ಟು ಮಾಡಲಾಗಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ವರೆಗೆ ಮುಂದುವರೆದಿದೆ ಎಂದು ಪಕ್ಷವೊಂದರ ಮುಖಂಡರೊಬ್ಬರು ತಿಳಿಸಿದರು.
ನಗರದಲ್ಲಿ ಸುಸಜ್ಜಿತ ಸರ್ಕಾರಿ ಬಸ್ ನಿಲ್ದಾಣವಿದೆ. ಆದರೆ ಖಾಸಗಿ ಬಸ್ ನಿಲ್ದಾಣ ಇಲ್ಲ. ಸ್ಥಗಿತಗೊಂಡಿರುವ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಆದಷ್ಟು ಬೇಗ ಆರಂಭಗೊಂಡು ಇಲ್ಲಿನ ಪ್ರಯಾಣಿಕರ ಸಮಸ್ಯೆ ಪರಿಹಾರವಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.