ರಾಮನಗರ: ತರಗತಿಯೊಳಗೆ ವಿದ್ಯಾರ್ಥಿಗಳು ಓದುವ ಪಠ್ಯವನ್ನು ರಂಗದ ಮೇಲೆ ಪ್ರಯೋಗ ಮಾಡಿ ತೋರಿಸಿದರೆ ಹೇಗೆ? ಎಂಬ ಪ್ರಶ್ನೆಗೆ, ‘ಅದು ಹೇಗೆ ಸಾಧ್ಯ? ಎತ್ತಣ ರಂಗಭೂಮಿ, ಎತ್ತಣ ತರಗತಿ? ಅದೆಲ್ಲಾ ಅಸಾಧ್ಯವಾದ ಮಾತು’ ಎಂದು ಹುಬ್ಬೇರಿಸುವವರುಂಟು. ಆದರೆ, ಅದನ್ನು ಸಾಧ್ಯ ಮಾಡುವ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ ಕೊಪ್ಪಳದ ರಂಗಧಾರ ರೆಪರ್ಟರಿ ಹಾಗೂ ಕಲ್ಲೂರಿನ ಕಲ್ಪುರ ಸಾಂಸ್ಕೃತಿಕ ಕಲಾ ಸಂಘದ ಕಾಲೇಜು ರಂಗ ಸಂಚಾರ.
ಪ್ರಸಕ್ತ ಸಾಲಿನಲ್ಲಿ ಪಿಯುಗೆ ಇರುವ ಕವಿ ಚಂದ್ರಶೇಖರ ಕಂಬಾರ ಅವರ ‘ಬೆಪ್ಪು ತಕ್ಕಡಿ ಬೋಳೇಶಂಕರ’ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’ ಪಠ್ಯವನ್ನು ರಂಗ ಪ್ರಯೋಗಕ್ಕಿಳಿಸಿರುವ ತಂಡ, ರಾಜ್ಯದಾದ್ಯಂತ ಸಂಚರಿಸುತ್ತಾ ವಿದ್ಯಾರ್ಥಿಗಳಿಗೆ ನಾಟಕ ಪ್ರದರ್ಶಿಸುತ್ತಿದೆ.
15 ಮಂದಿಯ ತಂಡ: ‘ನಟ–ನಟಿಯರು, ತಾಂತ್ರಿಕ ತಂಡ ಹಾಗೂ ಆಯೋಜಕರನ್ನು ಒಳಗೊಂಡ 15 ಮಂದಿಯ ನಮ್ಮ ತಂಡ, ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಎರಡು ತಿಂಗಳಿಂದ ಪ್ರಯೋಗ ಮಾಡುತ್ತಾ ಬರುತ್ತಿದೆ. ಬೀದರ್, ಕಲಬುರ್ಗಿ, ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ರಾಮನಗರ ಒಳಗೊಂಡಂತೆ ಇದುವರೆಗೆ 85ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದೇವೆ’ ಎಂದು ರಂಗಧಾರ ರೆಪರ್ಟರಿಯ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ ಪೀರಗಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೀದರ್‌ನಿಂದ ಶುರುವಾದ ನಮ್ಮ ತಿರುಗಾಟ ಇದೀಗ ರಾಮನಗರ ತಲುಪಿದೆ. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯರ ನೆರವಿನಿಂದ, ಪಿಯುಸಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಿತ್ಯ ನಾಲ್ಕೈದು ಪ್ರದರ್ಶನ ಮಾಡುತ್ತಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಹೇಳಿದರು.
ಕಾಲೇಜು ಸಂಚಾರ: ‘ಮೊದಲ ಬಾರಿಗೆ ಇಂತಹದ್ದೊಂದು ಕಾಲೇಜು ಸಂಚಾರ ಮಾಡುತ್ತಿದ್ದೇವೆ. ನಾಟಕಕ್ಕೆ ಬೇಕಾದ ಪ್ರಾಪರ್ಟಿ, ಸಂಗೀತ ಪರಿಕರ, ಆಹಾರ ಸಾಮಗ್ರಿ ಸೇರಿದಂತೆ ಎಲ್ಲವನ್ನೂ ವಾಹನದಲ್ಲಿ ತುಂಬಿಕೊಂಡು ತಿರುಗಾಡುತ್ತಿದ್ದೇವೆ. ಪ್ರದರ್ಶನ ಇರುವ ಕಡೆ ಸ್ಥಳೀಯರ ನೆರವಿನಿಂದ ಉಳಿಯುವ ವ್ಯವಸ್ಥೆ ಮಾಡಿಕೊಂಡು, ಅಲ್ಲೇ ಆಹಾರ ತಯಾರಿಸಿಕೊಂಡು ತಿನ್ನುತ್ತೇವೆ’ ಎಂದು ಕಲ್ಪುರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾಗಿರುವ ಶರಣು ಶೆಟ್ಟರ್ ತಮ್ಮ ಯಾನದ ಕುರಿತು ಹಂಚಿಕೊಂಡರು.
‘ಮೊದಲ ಸಲ ಮೈಸೂರು ಭಾಗಕ್ಕೆ ಬಂದಿದ್ದೇವೆ. ಹೋದಲ್ಲೆಲ್ಲಾ ಪಿಯು ಕಾಲೇಜುಗಳು ಆಡಳಿತ ಮಂಡಳಿಗಳು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ನಮ್ಮ ಬೆನ್ನು ತಟ್ಟಿ, ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟು, ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾರೆ. ಕಾಲೇಜು ರಂಗಮಂದಿರ, ಸಾರ್ವಜನಿಕ ರಂಗಮಂದಿರ, ಸ್ಥಳೀಯ ಭವನಗಳಲ್ಲೇ ನಾಟಕ ಪ್ರದರ್ಶನ ಮಾಡುತ್ತಿದ್ದೇವೆ. ತಿಳಿಹಾಸ್ಯದ ತಿರುಳಿನ ಸುಮಾರು ಒಂದೂವರೆ ತಾಸಿನ ನಾಟಕಗಳನ್ನು ವಿದ್ಯಾರ್ಥಿಗಳು ಖುಷಿಯಾಗಿ ವೀಕ್ಷಿಸುತ್ತಿದ್ದಾರೆ. ಇದು ನಮ್ಮ ಪ್ರಯೋಗಕ್ಕೆ ಬಲ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ನಾಟಕ ತಂಡಗಳ ಕಾಲೇಜು ಸಂಚಾರದ ಜೊತೆಗೆ ಶಾಲಾ ಸಂಚಾರವು ಶುರುವಾಗಬೇಕು. ಇದರಿಂದ ತರಗತಿಗಳಲ್ಲಿ ಬೋಧನೆಯೂ ಪರಿಣಾಮಕಾರಿಯಾಗಲಿದೆ. ರಂಗಭೂಮಿಯೂ ಉಳಿಯಲಿದೆಡಾ. ಎಂ. ಬೈರೇಗೌಡ ನಾಟಕಕಾರ
ತರಗತಿಯ ಪಠ್ಯವನ್ನೇ ರಂಗದ ಮೇಲೆ ನೋಡಿದ ವಿದ್ಯಾರ್ಥಿಗಳು ಪುಳಕಿತರಾಗಿದ್ದಾರೆ. ರಂಗಭೂಮಿಯ ಮಹತ್ವ ಏನೆಂಬುದು ಇದರಲ್ಲೇ ಗೊತ್ತಾಗುತ್ತದೆ. ಇಂತಹ ಪ್ರಯೋಗಗಳು ಹೆಚ್ಚಾಗಬೇಕುಶಿವಣ್ಣ ಕೊತ್ತಿಪುರ ಜಿಲ್ಲಾಧ್ಯಕ್ಷ ಪಿಯು ಪ್ರಾಂಶುಪಾಲರ ಸಂಘ
‘ಮೂರು ವರ್ಷದಿಂದ ಪ್ರಯೋಗ’
‘ನಾಟಕ ಮತ್ತು ಲಲಿತಕಲೆಗಳ ಮೂಲಕವೂ ಪರಿಣಾಮಕಾರಿಯಾಗಿ ಶಿಕ್ಷಣ ಕೊಡಬಹುದು ಎಂಬುದರ ಬಗ್ಗೆ ಪ್ರಯೋಗಗಳನ್ನು ಮಾಡುತ್ತಿದ್ದ ನನಗೆ ಪಿಯು ಪಠ್ಯವನ್ನು ರಂಗ ಪ್ರಯೋಗಕ್ಕಿಳಿಸಿ ಪ್ರದರ್ಶನ ಮಾಡಿದರೆ ಹೇಗೆಂಬ ಆಲೋಚನೆ ಬಂತು. ಅದರಂತೆ 2022ರಿಂದ ಪ್ರಯೋಗಕ್ಕೆ ಕೈ ಹಾಕಿದೆ. ಆರಂಭದಲ್ಲಿ ಕೊಪ್ಪಳ ಸುತ್ತಮುತ್ತ ನಡೆದ ನಮ್ಮ ಕಾಲೇಜು ಸಂಚಾರ ಈ ವರ್ಷ ರಾಜ್ಯಮಟ್ಟಕ್ಕೆ ವಿಸ್ತರಿಸಿದೆ. ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ ಚಿದಂಬರರಾವ್ ಜಂಬೆಯಂತಹ ಹಿರಿಯರು ನಮ್ಮ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ನೀನಾಸಂ ಪದವೀಧರರೂ ಆಗಿರುವ ಲಕ್ಷ್ಮಣ ಪೀರಗಾರ ಸಂತಸ ಹಂಚಿಕೊಂಡರು. ‘ಶಿಕ್ಷಣ–ರಂಗಭೂಮಿ ಪರಸ್ಪರ ಪೂರಕ’ ‘ವಿದ್ಯಾರ್ಥಿಗಳಿಗೆ ನಾಟಕದ ಮೂಲಕವೂ ಪಾಠ ತಲುಪಿಸುವ ಜೊತೆಗೆ ಯುವ ಮನಸ್ಸುಗಳಿಗೆ ರಂಗಭೂಮಿ ಪರಿಚಯಿಸುವ ದೃಷ್ಟಿಯಿಂದ ಇಂತಹದ್ದೊಂದು ಪ್ರಯೋಗಕ್ಕೆ ಕೈ ಹಾಕಿದ್ದೇವೆ. ಪರಿಣಾಮಕಾರಿ ಬೋಧನೆಗೆ ಶಿಕ್ಷಣ ಮತ್ತು ರಂಗಭೂಮಿ ಹೇಗೆ ಒಂದಕ್ಕೊಂದು ಪೂರಕ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಪ್ರತಿ ಬೋಧಕನೊಳಗೆ ಒಬ್ಬ ನಟ ಇರಬೇಕು. ಆಗ ಬೋಧನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಪ್ರಯೋಗವು ರಂಗ ಕಲಾವಿದರ ಬದುಕಿಗೂ ಆಸರೆಯಾಗಿದ್ದು ವರ್ಷದ ಏಳೆಂಟು ತಿಂಗಳು ಕೆಲಸ ಸಿಗುತ್ತಿದೆ’ ಎನ್ನುತ್ತಾರೆ ಸಾಣೆಹಳ್ಳಿ ಣಾಟಕ ಶಾಲೆಯ ಪದವೀಧರರಾಗಿರುವ ಶರಣು ಶೆಟ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.