ADVERTISEMENT

ಧರ್ಮ, ಜಾತಿ ಆಧಾರದಲ್ಲಿ ಟಿಪ್ಪು ಸುಲ್ತಾನ್ ಆಡಳಿತ ನಡೆಸಿಲ್ಲ: ಡಾ. ಕೆ. ಪ್ರಕಾಶ್

ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 13:14 IST
Last Updated 1 ಜನವರಿ 2020, 13:14 IST
ಎಯುಕೆ ಸಭಾಂಗಣದಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಮುಖಂಡರು
ಎಯುಕೆ ಸಭಾಂಗಣದಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಮುಖಂಡರು   

ರಾಮನಗರ: ಟಿಪ್ಪು ಸುಲ್ತಾನ್ ಎಂದಿಗೂ ಧರ್ಮ ಮತ್ತು ಜಾತಿ ಆಧಾರದ ಮೇಲೆ ಆಡಳಿತವನ್ನು ನಡೆಸಿಲ್ಲ ಎಂಬುದನ್ನು ಇತಿಹಾಸದ ಪುಟಗಳು ಸಾಕ್ಷಿಕರಿಸಿವೆ ಎಂದು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಕೆ. ಪ್ರಕಾಶ್ ಹೇಳಿದರು.

ಇಲ್ಲಿನ ಟಿಪ್ಪುನಗರದ ಎಯುಕೆ ಸಭಾಂಗಣದಲ್ಲಿ ಮೈಸೂರು ಹುಲಿ ಹಜ್ರತ್ ಟಿಪ್ಪು ಸುಲ್ತಾನ್ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಸಹಯೋಗದಲ್ಲಿ ಮಂಗಳವಾರ ಟಿಪ್ಪು ಸುಲ್ತಾನ್ ಅವರ 269ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಟಿಪ್ಪು ಸುಲ್ತಾನ್ ಹಿಂದೂ ದೇವಾಲಯಗಳಿಗೆ ನೀಡಿರುವ ಕೊಡುಗೆಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ. ತನ್ನ ಆಡಳಿತದ ಅವಧಿಯಲ್ಲಿ ಮೂಢ ನಂಬಿಕೆಗಳಿಗೆ ಕಡಿವಾಣ ಹಾಕಿ, ದೇವಾಲಯಗಳ ಮಠಾಧಿಪತಿಗಳನ್ನು ಗೌರವಿಸಿ ಕಲೆ- ಸಾಹಿತ್ಯ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿರುವುದನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧರ್ಮ ಮತ್ತು ಜಾತ್ಯಾತೀತವಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಏಕತೆಗೆ ಕೊಡಲಿ ಪೆಟ್ಟು ನೀಡುತ್ತಿದೆ. ಸೆನ್ಸಸ್(ಜನ ಗಣತಿ) ಜತೆಯಲ್ಲಿ ಎನ್‌ಸಿಆರ್ (ಜನರ ಜಾತಿ, ಧರ್ಮವಾರು ವಿವರ) ನೋಂದಣಿ ಮಾಡಿ ಐವತ್ತು ಆರವತ್ತು ವರ್ಷಗಳಿಂದಲೂ ಜೀವಿಸುತ್ತಿರುವ ಮುಸ್ಲಿಂ ಧರ್ಮದವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ ಎಂದರು.

ADVERTISEMENT

ಜೆಡಿಎಸ್ ನಗರ ಬ್ಲಾಕ್ ಅಧ್ಯಕ್ಷ ಸುಹೇಲ್ ಅಹ್ಮದ್ ಮಾತನಾಡಿ, ಹಿಂದೂಗಳು ಟಿಪ್ಪುವಿನ ವಿರುದ್ಧ ದ್ವೇಷವನ್ನು ಸಾಧಿಸುತ್ತಿದ್ದರೆ ಟಿಪ್ಪು ತನ್ನ ಅಧಿಕಾರವಧಿಯಲ್ಲಿ ಸಾಧನೆಗೈದು ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಭಾರತದಲ್ಲಿನ ಯಾವುದೇ ರಾಜಕೀಯ ಪಕ್ಷಗಳು ಏನು ಮಾಡಿದರೂ ಟಿಪ್ಪುವಿನ ಜೀವನ ಚರಿತ್ರೆಯನ್ನು ತಿರುಚಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮುಖಂಡರಾದ ರೆಹಮತ್ ಉಲ್ಲಾ ಬೆಗ್, ಎಂ.ಜಿ. ಫೈರೋಜ್, ಮೈಸೂರು ಹುಲಿ ಹಜ್ರತ್ ಟಿಪ್ಪು ಸುಲ್ತಾನ್ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಖಾಜಾ, ಉಪಾಧ್ಯಕ್ಷ ಸಜ್ಜದ್, ಪ್ರಧಾನ ಕಾರ್ಯದರ್ಶಿ ಇಮ್ರಾನ್, ರೇಷ್ಮಾ, ಫಾರೂಕ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ. ಶ್ರೀನಿವಾಸ್, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕಿ ವನಜಾ, ಸಹ ಸಂಚಾಲಕಿ ಸುಜಾತಾ, ವೆಂಕಟಾಚಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.