ADVERTISEMENT

ರಾಮನಗರ: ಅನರಕ್ಷರಸ್ಥ ಗೋವಿಂದಯ್ಯ ತಮಟೆ ವಾದನದಲ್ಲೇ ಜೀವನ ರೂಪಿಸಿಕೊಂಡರು

ಎಸ್.ರುದ್ರೇಶ್ವರ
Published 18 ಜನವರಿ 2020, 13:23 IST
Last Updated 18 ಜನವರಿ 2020, 13:23 IST
ಜಾನಪದ ಲೋಕದಲ್ಲಿ ಸುಗ್ಗಿ ಕುಣಿತದ ತರಬೇತಿ ನೀಡುತ್ತಿರುವ ಗೋವಿಂದಯ್ಯ
ಜಾನಪದ ಲೋಕದಲ್ಲಿ ಸುಗ್ಗಿ ಕುಣಿತದ ತರಬೇತಿ ನೀಡುತ್ತಿರುವ ಗೋವಿಂದಯ್ಯ   

ರಾಮನಗರ: ತಾಲ್ಲೂಕಿನ ಬೊಮ್ಮಚನಹಳ್ಳಿಯ 48 ವರ್ಷದ ಗೋವಿಂದಯ್ಯ ಅವರು ತಮಟೆ ವಾದನದಲ್ಲೇ ಜೀವನ ರೂಪಿಸಿಕೊಂಡವರು. ಹೆಗಲಿಗೆ ಕುಣಿಕೆ ಏರಿಸಿ ತಮಟೆಯನ್ನು ಎದೆಯ ಎಡಭಾಗಕ್ಕೆ ಎತ್ತರಿಸಿ ಎಡಗೈಯನ್ನು ಕಂಠದ ಮೇಲೆ ಇಟ್ಟು, ಬಲಗೈನಲ್ಲಿ ಹಿಡಿದ ಕೋಲಿನಿಂದ ಹಲಗೆಗೆ ಬಡಿಯುತ್ತಾ ಗೋವಿಂದಯ್ಯ ಅವರು ನಾದವನ್ನು ಹೊಮ್ಮಿಸುತ್ತಿದ್ದರೆ, ಅದನ್ನು ಕೇಳಿಯೇ ಸವಿಯಬೇಕು.

ಕೈಗೆ ಒಂದೂವರೆ ಅಡಿ ಬೆತ್ತ ಅಥವಾ ಬಿದಿರಿನ ಛಡಿ ಹಿಡಿದು ತಮಟೆ ಬಾರಿಸಲು ಮುಂದಾದರೆ ಬೇರೆಡೆ ಗಮನವೇ ಕೊಡುವುದಿಲ್ಲ. ತಮಟೆಯ ನಾದಕ್ಕೆ ಕಿವಿಕೊಟ್ಟವರು ಕುಣಿದು ಕುಪ್ಪಳಿಸುತ್ತಾರೆ. ತಾತ ಗಂಟಯ್ಯ, ತಂದೆ ವೆಂಕಟಯ್ಯ ಅವರಿಂದಬಳುವಳಿಯಾಗಿ ಬಂದಿರುವ ತಮಟೆ ವಾದನ ಕಲೆಯನ್ನು ಗೋವಿಂದಯ್ಯ ಬಾಲ್ಯದಿಂದಲೇ ಕರಗತ ಮಾಡಿಕೊಂಡಿದ್ದಾರೆ. ತಮಟೆ ಗೋವಿಂದು ಎಂದೇ ಖ್ಯಾತರಾಗಿದ್ದಾರೆ.

ಹತ್ತನೇ ವಯಸ್ಸಿನಲ್ಲಿ ಪಟ ಕುಣಿತವನ್ನು ಕಲಿತ ಇವರು ನಂತರ ತಮಟೆ ಬಾರಿಸುವುದನ್ನು ಕಲಿತರು. ಮೊದಲಿಗೆ ಹವ್ಯಾಸಕ್ಕೆ ಕಲಿತ ತಮಟೆ ಬಾರಿಸುವುದು ನಂತರ ವೃತ್ತಿಯಾಯಿತು.

ADVERTISEMENT

ಜಾನಪದ ಲೋಕದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮೊದಲ ಕಾರ್ಯಕ್ರಮವನ್ನು ನೀಡಿದ ಅವರು 39 ವರ್ಷಗಳ ನಿರಂತರವಾಗಿ ಅಂಡಮಾನ್, ಶ್ರೀಲಂಕಾ ಸೇರಿದಂತೆ ದೆಹಲಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಲಕ್ಷ್ಮೀ ವೆಂಕಟೇಶ್ವರ ಜಾನಪದ ಕಲಾ ಸಂಘದ ಮೂಲಕ ಉತ್ಸವಗಳು, ಜಾತ್ರೆ, ಕುಣಿತ, ಬಯಲಾಟ, ಸಾವು, ಮದುವೆ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ತಮಟೆ ಬಾರಿಸುತ್ತಿದ್ದಾರೆ.

ಅನಕ್ಷರಸ್ಥರಾದ ಗೋವಿಂದಯ್ಯ ವಿವಿಧ ಶಾಲಾ ಕಾಲೇಜುಗಳಲ್ಲಿ 25 ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದ ಇಂದಿರಾ ಬಾಲಕೃಷ್ಣ, ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ನಾನು ಕಲಾವಿದನಾಗಿ ರೂಪುಗೊಂಡೆ. ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಜನಪದ ಕಲೆಗಳನ್ನು ಕಲಿಸಿದ್ದೇನೆ, ಕಲಿಸುತ್ತಿದ್ದೇನೆ ಎಂದು ತಮಟೆ ಕಲಾವಿದ ಗೋವಿಂದಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.

ತಮಟೆ ಕಲೆಯನ್ನು ಉಳಿಸಿ, ಬೆಳೆಸಬೇಕು. ನಮ್ಮ ಜನಪದ ಕಲೆಗಳು ಹೊರದೇಶಗಳಲ್ಲೂ ಖ್ಯಾತಿಯಾಗಬೇಕು. ತಳಮಟ್ಟದ ಕಲೆಯೊಂದಿಗೆ ಆರ್ಥಿಕವಾಗಿ ದುರ್ಬಲರಾಗಿರುವ ಕಲಾವಿದರನ್ನು ಸರ್ಕಾರ ಮತ್ತು ಇಲಾಖೆ ಗುರುತಿಸುವ ಕೆಲಸ ಮಾಡಬೇಕು. ನಾಡಿನ ಸಂಸ್ಕೃತಿ ಬಿಂಬಿಸುವ ಕಲೆಯನ್ನು ಜೀವಾಳವಾಗಿಸಿಕೊಂಡ ಅತ್ಯಂತ ಬಡ ಕಲಾವಿದರನ್ನು ಆಯ್ಕೆ ಮಾಡಿ ಅವರನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಇಲ್ಲದಿದ್ದರೆ ನೈಜ ಕಲಾವಿದರು ಅವಕಾಶ ವಂಚಿತರಾಗಿ ಕಲೆ ಮರೆಯಾಗುತ್ತದೆ ಎಂದರು.

ಕಲೆಗಳ ಪ್ರದರ್ಶನದ ಜತೆಗೆ 75ಕ್ಕೂ ಹೆಚ್ಚು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ರುಕ್ಮಿಣಿ, ರಾಧೆ, ಅರ್ಜುನ, ಗುಹ, ಬಲರಾಮ, ಬ್ರಹ್ಮ, ನಾರದ, ದೇವೆಂದ್ರ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಜನಪದ ಕಲೆಗಳ ಪ್ರದರ್ಶನಕ್ಕೆ ಈಗಲೂ ಬೇಡಿಕೆ ಇದೆ. ಪ್ರದರ್ಶನದಲ್ಲಿ ಶಿಸ್ತು, ಸಂಯಮ, ಶ್ರದ್ಧೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.