ರಾಮನಗರ: ಕುಂಬಳಗೋಡು ಸಮೀಪದ ಬೆಂಗಳೂರು- ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಕಾರು ತಡೆದು ವಾಗ್ವಾದ ನಡೆಸಿರುವ ಘಟನೆ ನಡೆದಿದೆ.
ನರೇಂದ್ರಸ್ವಾಮಿ ಭಾನುವಾರ (ಜೂನ್ 4) ಬೆಂಗಳೂರಿನಿಂದ ಮಳವಳ್ಳಿ ಕಡೆಗೆ ಹೊರಟಿದ್ದರು. ಟೋಲ್‌ನಲ್ಲಿ ಕಾರು ತಡೆದ ಸಿಬ್ಬಂದಿ, ಪಾಸ್ ಇದ್ದರೂ ಮುಂದಕ್ಕೆ ಬಿಡಲಿಲ್ಲ. ಈ ಕುರಿತು ಪ್ರಶ್ನೆ ಮಾಡಿದ ಕಾರು ಚಾಲಕ, ಗನ್‌ಮ್ಯಾನ್ ಹಾಗೂ ಶಾಸಕರಿಗೆ ಸಿಬ್ಬಂದಿ ಏರು ದನಿಯಲ್ಲಿ ಜೋರು ಮಾಡಿದರು.
ಟೋಲ್ ಸಿಬ್ಬಂದಿ ಮತ್ತು ಶಾಸಕರ ನಡುವಿನ ವಾಗ್ವಾದದ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.
‘ನಿಮ್ಮನ್ನು ಇಲ್ಲಿ ಬಿಟ್ಟಿಯಾಗಿ ಬಿಡುತ್ತಿದ್ದೇವೆ. ನಾವು ಕೇಳಿದ್ದನ್ನು ತೋರಿಸಿ ಹೋಗುತ್ತಿರಬೇಕು. ನಮ್ಮೊಂದಿಗೆ ಹೆಚ್ಚು ಮಾತನಾಡಬೇಡಿ’ ಎಂದ ಸಿಬ್ಬಂದಿಯೊಬ್ಬ ತಾಕೀತು ಮಾಡಿದ್ದಾನೆ. ಅದಕ್ಕೆ, ಶಾಸಕರು, ‘ಸ್ಥಳಕ್ಕೆ ಪೊಲೀಸ್ ಕರೆಯಿರಿ’ ಎಂದಿದ್ದಕ್ಕೆ, ‘ಕರಿ, ನಾನು ನೋಡದೇ ಇರೊ ಪೊಲೀಸಾ’ ಎಂದು ಹೇಳಿದ್ದಾನೆ.
ಅನಗತ್ಯ ವಾಗ್ವಾದ: ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ‘ಕಾರು ತಡೆದ ಟೋಲ್ ಸಿಬ್ಬಂದಿ ಅನಗತ್ಯವಾಗಿ ವಾಗ್ವಾದ ನಡೆಸಿದರು. ಕಾರು ಬಿಡದೆ ದುರಹಂಕಾರದಿಂದ ವರ್ತಿಸಿದರು. ಗೌರವದಿಂದ ಮಾತನಾಡಿ ಎಂದಿದ್ದಕ್ಕೆ, ‘ನೀ ಯಾರಾದರೇನು, ನಾನಿಲ್ಲಿ ಮ್ಯಾನೇಜರ್. ನಿನ್ನ ಪಾಸ್ ತೋರಿಸು’ ಎಂದು ಏಕವಚನದಲ್ಲಿ ಜೋರು ಮಾಡಿದರು’ ಎಂದು ಘಟನೆಯನ್ನು ಹಂಚಿಕೊಂಡರು.
ಟೋಲ್ ಬಳಿ ನಡೆದ ಘಟನೆಯನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿರುವೆ. ಈ ಬಗ್ಗೆ ಸ್ಪೀಕರ್‌ಗೆ ಪತ್ರ ಬರೆಯಲಾಗುವುದು –ಪಿ.ಎಂ. ನರೇಂದ್ರಸ್ವಾಮಿ ಮಳವಳ್ಳಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.