ರಾಮನಗರ: ಜಿಲ್ಲೆಯ ಬೆಂಗಳೂರು- ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇ ಶೇಷಗಿರಿಹಳ್ಳಿ ಟೋಲ್ ನಲ್ಲಿ ಇತ್ತೀಚೆಗೆ ನಡೆದಿದ್ದ ಸಿಬ್ಬಂದಿ ಪವನ್ ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಡದಿ ಠಾಣೆ ಪೊಲೀಸರು ಶುಕ್ರವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆಯ ಅಭಿಷೇಕ್ (29) ಮತ್ತು ಸಂತೋಷ್ (23) ಬಂಧಿತರು. ಆಹಾರ ಪೂರೈಕೆ ಮಾಡುವ ಕಂಪನಿಯಲ್ಲಿ ಇಬ್ಬರೂ ಡೆಲಿವರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.
ಆರೋಪಿಗಳು ಜೂನ್ 5ರಂದು ಸ್ನೇಹಿತರೊಂದಿಗೆ ಕಾರಿನಲ್ಲಿ ರಾತ್ರಿ ಮೈಸೂರು ಕಡೆಯಿಂದ ಬರುವಾಗ ಟೋಲ್ ನಲ್ಲಿ ಪವನ್ ಸೇರಿದಂತೆ ಸಿಬ್ಬಂದಿ ಜೊತೆ ಜಗಳವಾಡಿ ಪರಸ್ಪರ ಹೊಡೆದಾಡಿಕೊಂಡಿದ್ದರು ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದರು.
ನಂತರ, ಯುವಕರು ಬೆಂಗಳೂರಿಗೆ ಹೋಗಿದ್ದರು. ಆದರೆ, ಸಂತೋಷ್ ಮತ್ತು ಅಭಿಷೇಕ್ ಮಾತ್ರ ಪವನ್ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ, ಮತ್ತೆ ಬೈಕ್ ನಲ್ಲಿ ಹಾಕಿ ಸ್ಟಿಕ್ ನೊಂದಿಗೆ ಟೋಲ್ ಗೆ ವಾಪಸ್ ಬಂದಿದ್ದರು. ರಾತ್ರಿ 12.30ರ ಸುಮಾರಿಗೆ ಪವನ್ ಕೆಲಸ ಮುಗಿಸಿಕೊಂಡು ಸ್ನೇಹಿತ ಮಂಜುನಾಥ್ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿಗಳಿಬ್ಬರೂ ಏಕಾಏಕಿ ಹಲ್ಲೆ ನಡೆಸಿದ್ದರು ಎಂದು ಹೇಳಿದರು.
ಘಟನೆಯಲ್ಲಿ ಪವನ್ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಪವನ್ ಮೃತಪಟ್ಟಿದ್ದರು. ಮಂಜುನಾಥ್ ಗಾಯಗೊಂಡಿದ್ದರು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.