ರಾಮನಗರ: ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರಗಳಲ್ಲಿನ (ಜಿಟಿಟಿಸಿ) ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ ತರಬೇತಿ ನೀಡುವ ಸಂಬಂಧ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆಗೆ ಗುರುವಾರ ಸಹಿ ಹಾಕಿತು.
ಈ ಒಪ್ಪಂದದ ಅನ್ವಯ ಟೊಯೊಟಾ ಕಂಪನಿಯು ಗೋಕಾಕ, ಉಡುಪಿ, ಹುಬ್ಬಳ್ಳಿ ಹಾಗೂ ಮದ್ದೂರಿನಲ್ಲಿ ಇರುವ ಜಿಟಿಟಿಸಿಗಳಲ್ಲಿನ ವಿದ್ಯಾರ್ಥಿಗಳಿಗೆ ಆಟೊಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಪರ ತರಬೇತಿ ನೀಡಲಿದೆ. ಈ ತಿಂಗಳಿನಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ಆರಂಭ ಆಗಲಿದೆ. ಮೂರು ವರ್ಷದ ತರಬೇತಿ ಇದಾಗಿದ್ದು, ಕನಿಷ್ಠ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ಅವಕಾಶ ಸಿಗಲಿದೆ. ಆಟೊಮೊಬೈಲ್ ವೆಲ್ಡಿಂಗ್ ಮತ್ತು ಅಸೆಂಬಲ್ ವಿಷಯಗಳಲ್ಲಿ ಪ್ರತ್ಯೇಕ ತರಬೇತಿ ಇರಲಿದೆ. ಟೊಯೊಟಾದ ಟಿಟಿಟಿಐ ಮಾದರಿಯಲ್ಲಿಯೇ ಈ ತರಬೇತಿಯು ಇರಲಿದೆ. ತರಬೇತಿಯ ಅಂತ್ಯದಲ್ಲಿ ಜಿಟಿಟಿಸಿ ಹಾಗೂ ಟೊಯೊಟಾ ಜಂಟಿಯಾಗಿ ಪರೀಕ್ಷೆ ನಡೆಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಿವೆ.
ಒಡಂಬಡಿಕೆಗೆ ಸಹಿ ಮಾಡಿ ಮಾತನಾಡಿದ ರಾಜ್ಯ ಸರ್ಕಾರದ ಕೌಶಾಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ‘ಇದರಿಂದ ವಿದ್ಯಾರ್ಥಿಗಳ ಕೌಶಲ ಮಟ್ಟ ಹೆಚ್ಚಲಿದೆ. ಇನ್ನಷ್ಟು ಕೇಂದ್ರಗಳಲ್ಲಿ ಈ ತರಬೇತಿ ನೀಡಲು ಟೊಯೊಟಾಗೆ ಸಹಕಾರ ನೀಡಲಾಗುವುದು’ ಎಂದರು.
ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಟಿಕೆಎಂ ಕಂಪನಿ ಉಪಾಧ್ಯಕ್ಷ ಜಿ. ಶಂಕರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.