ADVERTISEMENT

ಟೊಯೊಟಾ ಕಾರ್ಮಿಕರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಕಾರ್ಮಿಕರ ಪ್ರತಿಭಟನೆ ಮುಂದುವರಿಕೆ: ಕುಟುಂಬಸ್ಥರು, ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 13:42 IST
Last Updated 21 ಜನವರಿ 2021, 13:42 IST
ಗುರುವಾರ ಟೊಯೊಟಾ ಕಾರ್ಖಾನೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ನೌಕರರ ಕುಟುಂಬದವರು ಪಾಲ್ಗೊಂಡರು
ಗುರುವಾರ ಟೊಯೊಟಾ ಕಾರ್ಖಾನೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ನೌಕರರ ಕುಟುಂಬದವರು ಪಾಲ್ಗೊಂಡರು   

ಬಿಡದಿ: ಟೊಯೊಟಾ ಕಾರ್ಮಿಕರ ಮುಷ್ಕರಕ್ಕೆ ಗುರುವಾರ ಜೆಸಿಟಿಯು, ಎಐಟಿಯುಸಿ, ಎಚ್ಎಂಕೆಪಿ, ಎಐಯುಟಿಯುಸಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ಕಾರ್ಮಿಕರ ಕುಟುಂಬಸ್ಥರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕಾರ್ಖಾನೆಯ ಆಡಳಿತ ಮಂಡಳಿಯ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ನೌಕರರ ಕುಟುಂಬದವರೂ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳು ಕೈಯಲ್ಲಿ ಭಿತ್ತಿಪತ್ರ ಹಿಡಿದು ತಮ್ಮ ಪೋಷಕರ ಪರವಾಗಿ ನಿಂತಿದ್ದು ಗಮನ ಸೆಳೆಯುವಂತೆ ಇತ್ತು.

‘ದೇಶದಲ್ಲಿಯೇ ಪ್ರತಿಷ್ಠಿತ ಮೋಟಾರ್‌ ತಯಾರಿಕಾ ಕಂಪನಿ ಎಂದು ಹೆಸರುವಾಸಿಯಾಗಿರುವ ಟೊಯೊಟಾ ಕಾರ್ಖಾನೆಯ ಆಡಳಿತ ಮಂಡಳಿಯ ಹಠಮಾರಿ ಧೋರಣೆಯಿಂದ ಸಾವಿರಾರು ಕಾರ್ಮಿಕರು ಹಾಗೂ ಅವರನ್ನೇ ನಂಬಿರುವ ಅವರ ಕುಟುಂಬ ಸದಸ್ಯರ ಬದುಕು ಬೀದಿಗೆ ಬಂದು ನಿಂತಿದೆ. ಇನ್ನಾದರೂ ಎಚ್ಚೆತ್ತುಕೊಂಡು ತನ್ನ ಅವೈಜ್ಞಾನಿಕ ನೀತಿ-ನಿಮಮಗಳನ್ನು ಬದಿಗಿಟ್ಟು ಕಾರ್ಮಿಕರು ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಇದೇ ಜನವರಿ 26 ರಂದು ಬೆಂಗಳೂರು ಹಾಗೂ ಅಕ್ಕ-ಪಕ್ಕ ಹೊಂದಿಕೊಂಡಿರುವ ಜಿಲ್ಲೆಗಳ ಕಾರ್ಮಿಕರ ಮುಖಂಡರುಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ಎಲ್ಲಾ ಕಾರ್ಖಾನೆಗಳನ್ನು ಮುಚ್ಚಿ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ನಡೆಸಲಾಗುವುದು’ ಎಂದು ಕಾರ್ಮಿಕ ಮುಖಂಡ ಮೈಕಲ್
ಫರ್ನಾಂಡಿಸ್ ತಿಳಿಸಿದರು.

ADVERTISEMENT

‘ಕಾರ್ಮಿಕರ ಸಂಘಟನೆಗಳ ಶಕ್ತಿ ಮತ್ತು ಹೋರಾಟ ಏನು ಎಂಬುದನ್ನು ತೋರಿಸಿ ಕೊಡಬೇಕಾಗುತ್ತದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಎಚ್ಚರಿಸಿದರು.

ಎಐಟಿಯುಸಿ ರಾಜ್ಯ ಅಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ವಿಜಯ್‌ ಭಾಸ್ಕರ್, ಉಪಾಧ್ಯಕ್ಷ ಷಣ್ಮುಗಂ, ಎಚ್‌ಎಂಕೆಪಿ ಪ್ರಧಾನ ಕಾರ್ಯದರ್ಶಿ ಕಾಳಪ್ಪ ಮೊದಲಾದ ಕಾರ್ಮಿಕ ಮುಖಂಡರು ಪ್ರತಿಭಟನೆಗೆ ಸಾಥ್‌ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.