ADVERTISEMENT

ಕುರುಬರಹಳ್ಳಿ ಗ್ರಾಮ: ಚರಂಡಿ ದುರ್ನಾತ, ಜನರಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2018, 12:17 IST
Last Updated 25 ಸೆಪ್ಟೆಂಬರ್ 2018, 12:17 IST
ಕುರುಬರಹಳ್ಳಿ ಜನತಾ ಕಾಲೊನಿಯ ಚರಂಡಿಯಲ್ಲಿ ನೀರು ನಿಂತಿರುವುದು
ಕುರುಬರಹಳ್ಳಿ ಜನತಾ ಕಾಲೊನಿಯ ಚರಂಡಿಯಲ್ಲಿ ನೀರು ನಿಂತಿರುವುದು   

ರಾಮನಗರ: ತಾಲ್ಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದ ಜನತಾ ಕಾಲೊನಿಯಲ್ಲಿ ಚರಂಡಿ ಗಬ್ಬೆದ್ದು ನಾರುತ್ತಿದ್ದು, ಜನರು ಸಂಕಟ ಅನುಭವಿಸುವಂತೆ ಆಗಿದೆ.

ಕಾಲೊನಿಯಲ್ಲಿನ ಮೂರು ಬೀದಿಗಳಲ್ಲಿಯೂ ಚರಂಡಿಗಳು ಕಟ್ಟಿಕೊಂಡಿದ್ದು, ಸರಾಗವಾಗಿ ನೀರು ಹರಿಯುತ್ತಿಲ್ಲ. ಅಲ್ಲಲ್ಲಿ ನೀರು ನಿಂತಿರುವ ಕಾರಣ ದುರ್ವಾಸನೆ ಜೊತೆಗೆ ಸೊಳ್ಳೆಗಳ ಕಾಟವು ವಿಪರೀತವಾಗಿದೆ. ಇದರಿಂದಾಗಿ ರಾತ್ರಿ ಹೊತ್ತು ಜನರು ನಿದ್ದೆ ಮಾಡದಂತೆ ಆಗಿದೆ.

ನರೇಗಾ ಅಡಿ ಕಳೆದ ವರ್ಷವಷ್ಟೇ ಇಲ್ಲಿ ಹೊಸತಾಗಿ ಚರಂಡಿ ಕಾಮಗಾರಿ ಮಾಡಲಾಗಿದ್ದು, ಇದಕ್ಕಾಗಿ ₹ 3 ಲಕ್ಷ ವ್ಯಯಿಸಲಾಗಿದೆ. ಆದರೆ ಏರಿಳಿತದ ಕಾರಣ ನೀರು ಸರಾಗವಾಗಿ ಹರಿಯದೇ ಯೋಜನೆಯ ಉದ್ದೇಶ ಈಡೇರದಾಗಿದೆ ಎನ್ನುವುದು ಇಲ್ಲಿನ ಗ್ರಾಮಸ್ಥರ ದೂರು.

ADVERTISEMENT

‘ಕಾಲೊನಿಯಲ್ಲಿ ಚರಂಡಿ ಸಮಸ್ಯೆಯಿಂದಾಗಿ ಜನರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾಗ ಈ ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಗಿತ್ತು. ಅಧಿಕಾರಿಗಳಿಗೂ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರಾದ ಮಧು ದೂರುತ್ತಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಎಚ್ಚೆತ್ತು ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.