ADVERTISEMENT

ಹಾರೋಹಳ್ಳಿ | ಅನಧಿಕೃತ ಪೇಯಿಂಗ್ ಗೆಸ್ಟ್‌ಗಿಲ್ಲ ಕಡಿವಾಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 3:28 IST
Last Updated 23 ನವೆಂಬರ್ 2023, 3:28 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹಾರೋಹಳ್ಳಿ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಅನಧಿಕೃತವಾಗಿ ಪೇಯಿಂಗ್ ಗೆಸ್ಟ್‌ಗಳು (ಪಿ.ಜಿ) ತಲೆ ಎತ್ತಿವೆ. ಹಾಸ್ಟೆಲ್‌ ವ್ಯವಸ್ಥೆ ಇಲ್ಲದ ಕಾರಣಕ್ಕಾಗಿ ಆಶ್ರಯಕ್ಕಾಗಿ ಹಾತೊರೆಯುತ್ತಿರುವ ವಿದ್ಯಾರ್ಥಿಗಳಿಂದ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಾ, ಸುಲಿಗೆ ಮಾಡುತ್ತಿವೆ. ವಿದ್ಯಾರ್ಥಿಗಳು ಸಹ ಅನಿವಾರ್ಯವಾಗಿ ಇಂತಹ ಪಿ.ಜಿ.ಗಳನ್ನು ಅವಲಂಬಿಸಬೇಕಾದ ಸ್ಥಿತಿ ಇದೆ.

ರಾಜಧಾನಿಗೆ ಕೂಗಳತೆ ದೂರದಲ್ಲಿರುವ ತಾಲ್ಲೂಕು ಇದೆ. ಬೆಂಗಳೂರು–ಕನಕಪುರ ರಸ್ತೆಯು ಪಟ್ಟಣವನ್ನು ಹಾದು ಹೋಗಿದೆ. ಹೀಗಾಗಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಲೇಜು ತೆರೆದಿವೆ. ಹಾಗಾಗಿ, ಇಲ್ಲಿ ಕೆಲವರು ಅನಿಧಿಕೃತವಾಗಿ ಪಿ.ಜಿ ಕೇಂದ್ರಗಳನ್ನು ತೆರೆದು ಹಣ ಮಾಡುವ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ADVERTISEMENT

ಪ್ರತಿಷ್ಠಿತ ಕಾಲೇಜುಗಳಿಂದಾಗಿ ಬೇಡಿಕೆ

ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಿಯುಸಿ ಕಾಲೇಜು, ಮಹಾತ್ಮ ಗಾಂಧಿ ಪದವಿಪೂರ್ವ ಕಾಲೇಜು, ಐಟಿಐ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿವೆ. ಪಟ್ಟಣದಿಂದ 5 ಕಿ.ಮೀ. ದೂರದಲ್ಲಿರುವ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಸಂದ್ರದಲ್ಲಿ ಖಾಸಗಿ ಜೈನ್ ಎಂಜಿನಿಯರಿಂಗ್ ಕಾಲೇಜು ಹಾಗೂ ಪಕ್ಕದ ದೇವರ ಕಗ್ಗಲಹಳ್ಳಿಯಲ್ಲಿ ದಯಾನಂದ ಸಾಗರ್ ವೈದ್ಯಕೀಯ ಕಾಲೇಜು ಇದೆ. ಇದರಿಂದಾಗಿ ಪಿ.ಜಿ.ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಈ ಎರಡೂ ಕಾಲೇಜುಗಳಿಗೆ ಸಮೀಪವಿರುವ ಹಾರೋಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಹಾಗೂ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಸಂದ್ರ, ದೇವರ ಕಗ್ಗಲಹಳ್ಳಿ, ಯಡವನಹಳ್ಳಿ, ಬನ್ನಿಕುಪ್ಪೆ ಸೇರಿದ್ದಂತೆ ಕೆಲ ಗ್ರಾಮಗಳಲ್ಲಿ ಅಕ್ರಮವಾಗಿ ಅನಧಿಕೃತ ಪಿ.ಜಿ.ಗಳು ತಲೆ ಎತ್ತಿವೆ. ಹೊತ್ತಿಲ್ಲದ ಹೊತ್ತಿನಲ್ಲಿ ಓಡಾಡುವ ಮದ್ಯಪಾನ, ಧೂಮಪಾನ ಮಾಡಿ ಹರಟುವ ವಿದ್ಯಾರ್ಥಿಗಳಿಗೆ ಕಡಿವಾಣ ಇಲ್ಲವಾಗಿದೆ.

ಅನುಮತಿ ಪಡೆದಿಲ್ಲ

ಜೈನ್ ಮತ್ತು ದಯಾನಂದ ಸಾಗರ್ ಕಾಲೇಜಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ದರೂ, ಅಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದವರು ಹೊರಗೆ ತಲೆ ಎತ್ತಿರುವ ಪಿ.ಜಿ.ಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿ ಉಳಿದುಕೊಂಡಿರುವವಗೆ ₹8 ಸಾವಿರದಿಂದ ₹10 ಸಾವಿರದವರೆಗೆ ವಸೂಲಿ ಮಾಡುತ್ತಿದ್ದಾರೆ. ಹಾಸ್ಟೆಲ್ ಮಾದರಿಯ ಸೌಲಭ್ಯ ಒದಗಿಸುವ ಈ ಪಿ.ಜಿ.ಗಳು ಸಂಬಂಧಿಸಿದ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯಿಂದಲೂ ಯಾವುದೇ ಅನುಮತಿ ಪಡೆದಿಲ್ಲ. ಎಗ್ಗಿಲ್ಲದೆ ನಡೆಯುತ್ತಿರುವ ಪಿ.ಜಿ.ಗಳ ದಂಧೆಯ ಕುರಿತು ಪಂಚಾಯಿತಿಯವರು ಸಹ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. 

ಪಾಲನೆಯಾಗದ ನಿಯಮ

ಪಿ.ಜಿ ತೆರೆಯಬೇಕಾದರೆ ಕಟ್ಟಡದ ಮಾಲೀ ಕರು ಸಂಬಂಧಿಸಿದ ಸ್ಥಳೀಯ ಸಂಸ್ಥೆ ಯಲ್ಲಿ ವಾಣಿಜ್ಯ ಪರವಾನಗಿ ಪಡೆ ಯ ಬೇಕು. ಹಾಸ್ಟೆಲ್‌ಗಳ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷತೆ ಒದಗಿಸಬೇಕು. ಮೂಲಸೌಕರ್ಯ, ಅಕ್ರಮ ಚಟು ವಟಿಕೆಗಳು ನಡೆಯದಂತೆ ನಿಗಾ ಸೇರಿದಂತೆ ವಿವಿಧ ನಿಯಮಗಳನ್ನು ಪಾಲಿಸಬೇಕು.

‘ತಾಲ್ಲೂಕಿನಲ್ಲಿರುವ ಬಹುತೇಕ ಪಿ.ಜಿ.ಗಳಲ್ಲಿ ಈ ನಿಯಮಗಳು ಪಾಲನೆಯಾಗುತ್ತಿಲ್ಲ. ನೀರು, ವಿದ್ಯುತ್ ಸೇರಿದಂತೆ ಇತರ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡರೂ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ರೀತಿಯ ತೆರಿಗೆ ಪಾವತಿಸುತ್ತಿಲ್ಲ. ಕೆಲ ಪಿ.ಜಿ.ಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಮಾಡುವ ಅನುಮಾನವಿದೆ. ಹಾಗಾಗಿ, ಪಿ.ಜಿ.ಗಳ ಮೇಲೆ ನಿಗಾ ವಹಿಸಬೇಕು’ ಎಂದು ಸ್ಥಳೀಯರಾದ ವಿಶ್ವನಾಥ್ ಒತ್ತಾಯಿಸಿದರು.

‘ಸರ್ಕಾರಿ ಹಾಸ್ಟೆಲ್ ತೆರೆಯಿರಿ’

ಹಾರೋಹಳ್ಳಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯವಿದೆ. ಕಾಲೇಜು ವಿದ್ಯಾರ್ಥಿಗಳಿಗಿರುವ ಏಕೈಕ ಹಾಸ್ಟೆಲ್ ಇದು. ಕಾಲೇಜು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆಯೇ ಇಲ್ಲ! ಬೆಂಗಳೂರಿಗೆ ಸನಿಹವಿರುವ ಹಾರೋಹಳ್ಳಿ ತಾಲ್ಲೂಕಿನತ್ತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕಾಲೇಜುಗಳನ್ನು ಆರಂಭಿಸಿರುವುದರಿಂದ, ಇಲ್ಲಿ ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಇನ್ನಿಲ್ಲದ ಬೇಡಿಕೆ ಇದೆ. ಸದ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪಿ.ಜಿ ಸೇರುವುದು ಅನಿವಾರ್ಯವಾಗಿದೆ.

‘ದಯಾನಂದ ಸಾಗರ್ ಕಾಲೇಜಿನಲ್ಲಿ ಸೀಟು ಆಯ್ಕೆ ಮಾಡಿಕೊಂಡು ಎಂಜಿನಿಯರಿಂಗ್ ಓದಲು ಯಾದಗಿರಿ ಜಿಲ್ಲೆಯಿಂದ ಇಲ್ಲಿಗೆ ಬಂದಿದ್ದೇನೆ. ಆದರೆ, ಇಲ್ಲಿ ಸರ್ಕಾರಿ ಹಾಸ್ಟೆಲ್ ವ್ಯವಸ್ಥೆಯೇ ಇಲ್ಲ. ನಮ್ಮಂತೆ ದೂರದ ಊರುಗಳಿಂದ ಬರುವವರ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರವು ಹಾಸ್ಟೆಲ್‌ಗಳನ್ನು ತೆರೆದರೆ, ವಿದ್ಯಾರ್ಥಿಗಳು ತುಂಬಾ ಅನುಕೂಲವಾಗುತ್ತದೆ. ಈ ಪಿ.ಜಿ.ಗಳಿಗೆ ದುಬಾರಿ ಹಣ ಕಟ್ಟಲು ನಮ್ಮಂತಹ ಬಡವರಿಗೆ ಕಷ್ಟವಾಗುತ್ತಿದೆ’ ಎಂದು ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನಾಗಶ್ರೀ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.