ADVERTISEMENT

ಚನ್ನಪಟ್ಟಣ-ರಾಮನಗರ ನಡುವೆ ಬೃಹತ್ ಕೈಗಾರಿಕೆ ಸ್ಥಾಪನೆಗೆ ಕ್ರಮ: ಎಚ್‌ಡಿಕೆ ಭರವಸೆ

ಆನೆ ಹಾವಳಿಗೆ ಕಡಿವಾಣ; ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವರ ಜತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 12:26 IST
Last Updated 2 ನವೆಂಬರ್ 2024, 12:26 IST
<div class="paragraphs"><p>ಚನ್ನಪಟ್ಟಣದ ವಿರೂಪಸಂದ್ರ ಗ್ರಾಮದಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರ ನಡೆಸಿದರು</p></div>

ಚನ್ನಪಟ್ಟಣದ ವಿರೂಪಸಂದ್ರ ಗ್ರಾಮದಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರ ನಡೆಸಿದರು

   

ಚನ್ನಪಟ್ಟಣ: ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಅಭಿವೃದ್ಧಿ ಮಾಡಲಾಗುವುದು. ಮತ್ತೂ ಇವೆರಡೂ ಪಟ್ಟಣಗಳ ನಡುವೆ ಸುಮಾರು ಹತ್ತು ಸಾವಿರ ಜನರಿಗೆ ನೇರ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ವಿರೂಪಸಂದ್ರ ಗ್ರಾಮದಲ್ಲಿ ಪ್ರಚಾರ ಭಾಷಣ ಮಾಡಿದರು ಅವರು.

ADVERTISEMENT

ಚನ್ನಪಟ್ಟಣ ಹಾಗೂ ರಾಮನಗರಗಳ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುವುದು. ಈವರೆಗೂ ನಾನು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ. ತಾಲ್ಲೂಕಿನ ಜನರ ಔದಾರ್ಯ ಹಾಗೂ ಮಂಡ್ಯ ಜನರ ಆಶೀರ್ವಾದ, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ ನಂಬಿಕೆಯಿಂದ ಕೇಂದ್ರದಲ್ಲಿ ಮಂತ್ರಿಯಾಗಿದೇನೆ. ಸಿಕ್ಕಿರುವ ಈ ಅವಕಾಶ ಸದ್ಬಳಕೆ ಮಾಡಿಕೊಂಡು ಜಿಲ್ಲೆಗೆ ನನಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆಗೆ ಒಳ್ಳೆಯದು ಮಾಡಲು ಪ್ರಯತ್ನಿಸುತ್ತೇನೆ ಎಂದರು ಅವರು.

ಈ ಭಾಗದ ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶ ದೊರಕಿಸುವ ಕೆಲಸ ಮಾಡುತ್ತೇವೆ. ಅಲ್ಲದೆ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ. ಆರ್ಥಿಕತೆಗೆ ಶಕ್ತಿ ಬಂದು ಈ ಭಾಗದಲ್ಲಿ ಜನಜೀವನ ಸುಧಾರಿಸುತ್ತದೆ ಎಂದು ಸಚಿವರು ಹೇಳಿದರು.

2018ರಲ್ಲಿ ಕಾರ್ಯಕರ್ತರು ಒತ್ತಡ ಹಾಕಿ ನನ್ನನ್ನು ಚನ್ನಪಟ್ಟಣಕ್ಕೆ ಕರೆತಂದರು. ಬಳಿಕ ಎರಡು ಬಾರಿಯೂ ದೊಡ್ಡಮಟ್ಟದಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅನಿವಾರ್ಯವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ದೇವೇಗೌಡರು ನೀರಾವರಿ ಸಚಿವರಾಗಿದ್ದಾಗ ಇಗ್ಗಲೂರು ಬಳಿ ಜಲಾಶಯ ಕಟ್ಟಿಸಿದರು. ಹಲವು ಪಕ್ಷಗಳಿಗೆ ಹೋಗಿ ಈಗ ಕಾಂಗ್ರೆಸ್ ಸೇರಿರುವ ಕಾಂಗ್ರೆಸ್ ಅಭ್ಯರ್ಥಿ ತಾಲೂಕಿಗೆ ನೀರಾವರಿ ಕೊಟ್ಟಿದ್ದು ನಾನೇ ಎನ್ನುತ್ತಿದ್ದಾರೆ. ದೇವೇಗೌಡರು ಡ್ಯಾಂ ಕಟ್ಟಲಿಲ್ಲ ಅಂದರೆ ಇವರು ಕೆರೆಗಳಿಗೆ ನೀರು ಎಲ್ಲಿ ತುಂಬಿಸುತ್ತಿದ್ದರು ಎಂದು ಅವರು ಕಿಡಿಕಾರಿದರು.

ಸದಾನಂದಗೌಡರು ಸಿಎಂ ಆಗಿದ್ದಾಗ ನೀರಾವರಿ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಕ್ಕೆ ಹಣ ಬಿಡುಗಡೆ ಮಾಡಿದರು. ಅವರನ್ನು ಭಗೀರಥ ಎಂದು ಕರೆಯುವುದರಲ್ಲಿ ಅರ್ಥವಿದೆ. ಆದರೆ, ಇವರೇ ನಾನೇ ಭಗೀರಥ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ₹85 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ ಆಗುತ್ತಿದೆ. ಮಾವಿನ ಸಂರಕ್ಷಣೆಗೆ ನೂತನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಸಾಕಷ್ಟು ರಸ್ತೆಗಳು, ಶಾಲೆಗಳನ್ನು ಅನುದಾನ ತಂದು ನಿರ್ಮಾಣ ಮಾಡಿದ್ದೇವೆ. ಈಗ ಅನಿವಾರ್ಯವಾಗಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ನಿಮ್ಮ ಮನೆ ಮಗ ಅಂತ ತಿಳಿದು ಅವರಿಗೆ ಆಶೀರ್ವಾದ ಮಾಡಿ. ನಿಮ್ಮ ಕುಟುಂಬದ ಮಗ ಎಂದು ಬೆಂಬಲ ನೀಡಿ ನಿಖಿಲ್ ನನಗಿಂತಲೂ ಮೃದು ಸ್ವಭಾವದ ವ್ಯಕ್ತಿ ಅವನಿಗೆ ಈ ಬಾರಿ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.

ಆನೆ ಹಾವಳಿ ತಡೆಗೆ ಚರ್ಚೆ

ರಾಜ್ಯದ ಯಾವುದೇ ಭಾಗದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ತೆರಿಗೆ ಹಣ ಲೂಟಿ ಆಗುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಾಗಾಗಿ ಈ ಬಾರಿ ನಿಖಿಲ್ ಗೆಲ್ಲಿಸಿಕೊಡಿ. ನನಗೆ 6 ರಿಂದ 7 ತಿಂಗಳು ಸಮಯ ಕೊಡಿ. ಈ‌ ಭಾಗದ ಕಾಡಾನೆ ಹಾವಳಿಗೆ ಕಡಿವಾಣ ಹಾಕುತ್ತೇವೆ..ಕೇಂದ್ರ ರೈಲ್ವೆ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.