ADVERTISEMENT

ಅ. 21ರಿಂದ ಕಾಲುಬಾಯಿ ರೋಗ ಲಸಿಕೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 16:24 IST
Last Updated 18 ಅಕ್ಟೋಬರ್ 2024, 16:24 IST

ರಾಮನಗರ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ (ಎನ್.ಎ.ಡಿ.ಸಿ.ಪಿ) ಯೋಜನೆಯಡಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಜಿಲ್ಲೆಯಾದ್ಯಂತ ಆರನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಅ. 21ರಿಂದ ನ. 20ರವರೆಗೆ ಹಮ್ಮಿಕೊಂಡಿದೆ.

ಕಾಲುಬಾಯಿ ರೋಗವನ್ನು ತಡೆಗಟ್ಟಲು ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ. ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್) ಸಹಯೋಗದಲ್ಲಿ ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮವನ್ನು 30 ದಿನ ನಡೆಸಲಾಗುತ್ತಿದೆ.

ಜಿಲ್ಲೆಯಾದ್ಯಂತ ಒಟ್ಟು 3,07,146 (ದನಗಳು ಮತ್ತು ಎಮ್ಮೆಗಳು) ಜಾನುವಾರುಗಳಿಗೆ ಉಚಿತ ಲಸಿಕೆ ಹಾಕಲಾಗುತ್ತದೆ. ಅದಕ್ಕಾಗಿ, ಜಿಲ್ಲೆಯಲ್ಲಿ ಒಟ್ಟು 283 ಸಿಬ್ಬಂದಿಗಳಿದ್ದಾರೆ (ಇಲಾಖೆ ಮತ್ತು ಬಮೂಲ್ ಸೇರಿ). ಲಸಿಕೆದಾರರು ನಿಗದಿತ ದಿನಾಂಕಗಳಂದು ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಉಚಿತವಾಗಿ ಕಾಲುಬಾಯಿ ರೋಗದ ವಿರುದ್ಧ ರಾಸುಗಳಿಗೆ ಲಸಿಕೆ ಹಾಕಲಿದ್ದಾರೆ.

ADVERTISEMENT

ಈಗಾಗಲೇ ರೋಗ ಲಸಿಕಾ ಅಭಿಯಾನದ ಭಿತ್ತಿಪತ್ರಗಳು (ಪಾಂಪ್ಲೆಟ್ಸ್) ಹಾಗೂ ಕರಪತ್ರಗಳನ್ನು (ಪೋಸ್ಟರ್) ಹಂಚುವುದರ ಮೂಲಕ ಅಭಿಯಾನದ ಪ್ರಚಾರ ಕೈಗೊಳ್ಳಲಾಗಿದೆ. ಜಿಲ್ಲೆಯ ರೈತರು ಮತ್ತು ಹೈನುಗಾರರು ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.