ಕುದೂರು: ತಿಪ್ಪಸಂದ್ರ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರವಿ ಚಿಕ್ಕೇಗೌಡ, ಉಪಾಧ್ಯಕ್ಷರಾಗಿ ನಾಗರತ್ನ ಅವಿರೋಧವಾಗಿ ಆಯ್ಕೆಯಾದರು.
ತಿಪ್ಪಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಈಚೆಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರವಿ ಚಿಕ್ಕೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ ಹೊರತುಪಡಿಸಿ ಉಳಿದವರು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ರವಿ ಚಿಕ್ಕೇಗೌಡ, ಉಪಾಧ್ಯಕ್ಷರಾಗಿ ನಾಗರತ್ನ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ವೈ.ವೆಂಕಟೇಶ್ ಘೋಷಿಸಿದರು.
ನೂತನ ಅಧ್ಯಕ್ಷ ರವಿ ಚಿಕ್ಕೇಗೌಡ ಮಾತನಾಡಿ, ಉತ್ಪಾದಕರಿಗೆ ಪ್ರತಿವರ್ಷ ಬೋನಸ್ ಸೇರಿದಂತೆ ಬಮೂಲ್ ಮತ್ತು ಸರ್ಕಾರದ ಸವಲತ್ತು ಕಾಲ ಕಾಲಕ್ಕೆ ವಿತರಣೆ ಮಾಡಲಾಗುತ್ತಿದೆ. ಈಗಿರುವ ಡೇರಿ ಕಟ್ಟಡದ ಮೇಲೆ ಸುಂದರವಾದ ಸಭಾಂಗಣ ನಿರ್ಮಿಸಲು ಚಿಂತಿಸಲಾಗಿದೆ. ಶೀಘ್ರದಲ್ಲೇ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.
ಈಚೆಗೆ ರಾಸುಗಳಲ್ಲಿ ಗಂಟುರೋಗ ಕಾಣಿಸಿಕೊಳ್ಳುತ್ತಿದ್ದು, ಡೇರಿಯಿಂದ ಉಚಿತವಾಗಿ ರಾಸುಗಳಿಗೆ ಗಂಟು ರೋಗ ನಿವಾರಣಾ ಲಸಿಕೆ ಹಾಕಿಸಿ ರೋಗ ನಿರ್ಮೂಲನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಹಕಾರಿ ಒಕ್ಕೂಟ ಜಿಲ್ಲಾಧ್ಯಕ್ಷ ಎಂ.ಕೆ.ಧನಂಜಯ ಮಾತನಾಡಿ, ತಾಲ್ಲೂಕಿನಲ್ಲಿ 300 ಹೆಚ್ಚು ಡೇರಿಗಳಿವೆ. ಉತ್ಪಾದಕರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹೈನುಗಾರಿಕೆ ದೊಡ್ಡ ಉದ್ಯಮವಾಗಿ ನಡೆಯುತ್ತಿದೆ. ಆದರೆ, ಪಶು ಆಹಾರದ ಬೆಲೆ ದುಪ್ಪಟಾಗಿ ಹಾಲಿನ ಬೆಲೆ ಕಡಿಮೆಯಿಂದ ಉತ್ಪಾದಕರಿಗೆ ದೊಡ್ಡ ಪೆಟ್ಟಾಗಿದೆ. ಈ ಸಂಬಂಧ ಹಾಲಿನ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ತಾ.ಪಂ ಮಾಜಿ ಅಧ್ಯಕ್ಷ ಶಿವರಾಜು, ನಿರ್ದೇಶಕರಾದ ವೆಂಕಟರಂಗಯ್ಯ, ವೆಂಕಟೇಶ್, ಗೋಪಾಲ್ ಶೆಟ್ಟಿ, ಗಂಗಾಧರ್, ಶ್ರೀನಿವಾಸ್, ಸಿದ್ದಲಿಂಗಯ್ಯ, ನಾಗರಾಜು, ಗೌರಮ್ಮ, ಗಂಗಾಧರ್, ಮುಖಂಡರಾದ ಹೇಮಂತ್ ಕುಮಾರ್, ವೆಂಕಟೇಶ್, ಜೀವನ್, ಸತೀಶ್, ಹರೀಶ್, ಟಿಎಪಿಸಿಎಂಎಸ್ ರಮೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.