ಕನಕಪುರ: ‘ಬಿಜೆಪಿ–ಜೆಡಿಎಸ್ ಬೆಂಬಲ ನೀಡದೆ ಇದ್ದಿದ್ದರೆ ನಾವು ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿತ್ತೇ? ಅವರ ಸಹಕಾರವೂ ಗೆಲುವಿಗೆ ಕಾರಣ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
‘ಜನ ಬಯಸಿದರೆ ಕಾಂಗ್ರೆಸ್ ಸೇರುವೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ ಕನಕಪುರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಇದು ಜಿಟಿಡಿ ಅವರೊಬ್ಬರ ಅಭಿಪ್ರಾಯ ಅಲ್ಲ. ಬಹಳಷ್ಟು ಬಿಜೆಪಿಯವರು ಇದೇ ಅಭಿಪ್ರಾಯ ಹೊಂದಿದ್ದಾರೆ’ ಎಂದರು.
ಉಪ ಚುನಾವಣೆ ಗೆಲುವಿನ ನಂತರ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಕೂಗಿನ ಬಗ್ಗೆ ಪ್ರಶ್ನಿಸಿದಾಗ, ‘ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದೆಲ್ಲ ಗೌಣ. ನಮಗೆ ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಚನ್ನಪಟ್ಟಣ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇವೆ’ ಎಂದರು.
ಅಶ್ವತ್ಥ ನಾರಾಯಣ ದಡ್ಡರೇ?: ‘ನನಗೆ ಮೊದಲೇ ತಿಳಿದಿತ್ತು. ಯೋಗೇಶ್ವರ್ ಗೆಲ್ಲುತ್ತಾರೆ ಎಂದು ಬಿಜೆಪಿ ನಾಯಕ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು, ಈ ರೀತಿ ಹೇಳಲು ದಡ್ಡರೇ? ಅವರಿಗೆ ಜನರ ನಾಡಿಮಿಡಿತ ಗೊತ್ತಿತ್ತು’ ಎಂದರು.
ಸಿ.ಎಂ.ಕೇಳಿ ನೋಡಿ: ಸಂಪುಟ ಪುನರ್‌ರಚನೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದೆಲ್ಲ ಸುಳ್ಳು. ಯಾವ ಒತ್ತಾಯವೂ ಇಲ್ಲ. ಏನಿದ್ದರೂ ಮುಖ್ಯಮಂತ್ರಿಯನ್ನು ಕೇಳಿ’ ಎಂದು ಹೇಳಿದರು.
‘ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ನನ್ನ ಮಗನ ವಿರುದ್ಧ ಷಡ್ಯಂತ್ರ ಮಾಡಿ ಚುನಾವಣೆಯಲ್ಲಿ ಸೋಲಿಸಿದರು ಎಂದು ಹೇಳುತ್ತಿದ್ದ ಕುಮಾರಸ್ವಾಮಿ, ಈ ಚುನಾವಣೆಯಲ್ಲಿ ಹಣಬಲದ ಬಗ್ಗೆ ಮಾತನಾಡುತ್ತಿದ್ದಾರೆ ಎಂದಾಗ, ‘ಹಾಗಾದರೆ ಡಿ.ಕೆ.ಸುರೇಶ್ ಅವರ ಸೋಲನ್ನು ಏನೆಂದು ಕರೆಯುವುದು? ಇದೇ ಯೋಗೇಶ್ವರ್ ಆಗ ಬಿಜೆಪಿಯಲ್ಲಿದ್ದರು. ಕುಮಾರಸ್ವಾಮಿ ತಮ್ಮ ಬಾಮೈದುನನ್ನು ಬಿಜೆಪಿಯಿಂದ ನಿಲ್ಲಿಸಿ ಗೆಲ್ಲಿಸಿದರು. ಇದಕ್ಕೆ ಯಾವ ಪದ ಜೋಡಣೆ ಮಾಡುತ್ತೀರಿ?’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.