ಚನ್ನಪಟ್ಟಣ (ರಾಮನಗರ): ‘ಒಕ್ಕಲಿಗರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಾಯಕತ್ವವನ್ನು ಬಿಡಬೇಕು. ಒಕ್ಕಲಿಗರ ಶಕ್ತಿಯನ್ನು ಅವರು ಸ್ವಂತಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಈಗಲಾದರೂ ರಾಜಕೀಯದಿಂದ ನಿವೃತ್ತಿಯಾಗಿ ಬೇರೆಯವರಿಗೆ ಅವಕಾಶ ಕೊಡಬೇಕು. ಯೋಗ ಮತ್ತು ಯೋಗ್ಯತೆ ಇರುವವರು ಸಮುದಾಯದ ನಾಯಕತ್ವ ವಹಿಸಿಕೊಳ್ಳಲಿ’ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೌಡರ ಕುಟುಂಬದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಎಂಬುದನ್ನು ಸಮುದಾಯದವರು ಗಮನಿಸಬೇಕು. ಸಾರ್ವಜನಿಕ ಜೀವನದಲ್ಲಿ ಅವರ ರಾಜಕಾರಣವು ಸ್ವಂತ ಹಾಗೂ ಸ್ವಾರ್ಥದಿಂದ ಕೂಡಿದೆ. ಸಮುದಾಯ ಈಗಲಾದರೂ ಅವರ ಕುಟುಂಬವನ್ನು ಬಿಟ್ಟು ಪರ್ಯಾಯ ಒಕ್ಕಲಿಗ ನಾಯಕತ್ವದ ಕುರಿತು ಯೋಚಿಸಬೇಕು’ ಎಂದರು.
‘ಉಪ ಚುನಾವಣೆಯಲ್ಲಿ ತಮ್ಮ ಮೊಮ್ಮಗನನ್ನು ಪಣಕ್ಕಿಟ್ಟ ದೇವೇಗೌಡರನ್ನು ಜನ ತಿರಸ್ಕರಿಸಿದ್ದಾರೆ. ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಅವರು, ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ದೇವೇಗೌಡರನ್ನು ಹಳೆ ಮೈಸೂರು ಭಾಗದ ಜನ ಒಪ್ಪುತ್ತಿಲ್ಲ ಎಂಬುದು ಉಪ ಚುನಾವಣೆಯಲ್ಲಿ ಸಾಬೀತಾಗಿದೆ’ ಎಂದರು.
‘ಮಗನನ್ನು ಯುದ್ದ ಭೂಮಿಗೆ ಕಳಿಸಿದ ನೀನು, ರಣಹೇಡಿ ಆಗಿಬಿಟ್ಟೆ ಎಂದು ಬಬ್ರುವಾಹನ ಅರ್ಜುನನಿಗೆ ಹೇಳುತ್ತಾನೆ. ಉಪ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಆಗಿದೆ. ತನ್ನ ಮಗನನ್ನೇ ಗೆಲ್ಲಿಸಿಕೊಳ್ಳಲಾಗದ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು ಏನು ಪ್ರಯೋಜನ? ಅವರದ್ದು ಭಂಡತನ. ಇದ್ರೆ ಈ ಊರು, ಬಿಟ್ಟರೆ ಇನ್ನೊಂದು ಊರು ಎಂಬಂತಾಗಿದೆ’ ಎಂದು ವ್ಯಂಗ್ಯವಾಡಿದರು.
ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಬಿಜೆಪಿಯಿಂದ ಹೊರಬಂದೆ. ನಾನು ಪಕ್ಕಾ ಕಾಂಗ್ರೆಸ್ಸಿಗ. ಪಕ್ಷ ಬಿಡಲ್ಲ.–ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.