ADVERTISEMENT

ಒಕ್ಕಲಿಗರ ನಾಯಕತ್ವ ಯಾರ ಸ್ವತ್ತೂ ಅಲ್ಲ: ಎಚ್‌ಡಿಕೆಗೆ ಸುರೇಶ್ ತಿರುಗೇಟು

ಸ್ವಾಭಿಮಾನಿ ಒಕ್ಕಲಿಗರಿಗೆ ಯಾರನ್ನು ಏನು ಮಾಡಬೇಕೆಂಬುದು ಗೊತ್ತಿದೆ: ಎಚ್‌ಡಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 11:46 IST
Last Updated 12 ಏಪ್ರಿಲ್ 2024, 11:46 IST
<div class="paragraphs"><p>ಸುರೇಶ್</p></div>

ಸುರೇಶ್

   

ರಾಮನಗರ: ‘ಒಕ್ಕಲಿಗರ ನಾಯಕತ್ವ ಯಾರ ಸ್ವತ್ತೂ ಅಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾನು ಮಾತ್ರ ಒಕ್ಕಲಿಗರ ನಾಯಕ ಎಂಬ ಭಾವನೆಯನ್ನು ಇಟ್ಟುಕೊಂಡಿಲ್ಲ. ಸಮುದಾಯದವರು ಸ್ವಾಭಿಮಾನಿಗಳು. ಯಾರನ್ನು, ಯಾವಾಗ, ಏನು ಮಾಡಬೇಕೆಂಬುದು ಅವರಿಗೆ ಚನ್ನಾಗಿ ಗೊತ್ತಿದೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಒಕ್ಕಲಿಗ ನಾಯಕತ್ವ ಕುರಿತ ಹೇಳಿಕೆಗೆ ತಿರುಗೇಟು ನೀಡಿದರು.

ADVERTISEMENT

‘ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸುವ ಸಂದರ್ಭದಲ್ಲಿ ಯಾರು ಅದರ ನೇತೃತ್ವ ವಹಿಸಿದ್ದರೋ, ಅವರನ್ನೇ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಮಠಕ್ಕೆ ಕರೆದುಕೊಂಡು ಹೋಗಿರುವ ವಿಚಾರವನ್ನು ಮಾತ್ರ ಶಿವಕುಮಾರ್ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಶಿವಕುಮಾರ್ ಅವರ ಮೇಲೆ ಸಮುದಾಯವನ್ನು ಒಗ್ಗಟ್ಟಿನಿಂದ ಮುಂದೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಸಮುದಾಯವೂ ಅವರ ಬೆಂಬಲಕ್ಕಿದೆ’ ಎಂದು ಹೇಳಿದರು.

‘ಒಕ್ಕಲಿಗರು ಈ ಬಾರಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂಬ ಎಚ್‌ಡಿಕೆ ಹೇಳಿಕೆ ಕುರಿತ ಪ್ರಶ್ನೆಗೆ, ‘ರಾಜಕೀಯವಾಗಿ ಅವರು ಈ ರೀತಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಅವರು ಹೇಳುವುದೆಲ್ಲಾ ಸತ್ಯವೇ? ಪ್ರತಿ ಹಂತದಲ್ಲೂ ಅವರು ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ದೇವೇಗೌಡರ ಕುಟುಂಬ ಹಿಂದಿನಿಂದಲೂ ಶಿವಕುಮಾರ್ ಅವರ ಮೇಲೆ ಹಗೆತನ ಸಾಧಿಸುತ್ತಿದೆ’ ಎಂದರು.

‘ನಮಗೆ ಅವರಂತೆ ದ್ವೇಷದ ಭಾವನೆ ಇಲ್ಲ. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನಾವು ಅವರಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಅವರು ಬೇರೆ ರೀತಿ ವ್ಯಾಖ್ಯಾನ ಮಾಡಿದರೆ ನಾನು ಅದಕ್ಕೆ ಉತ್ತರ ನೀಡಲಾರೆ. ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಅವರು ಚುನಾವಣೆ ನಂತರ ಚರ್ಚೆಗೆ ಕರೆಯಲಿ. ಆಗ ನಾನು ಚರ್ಚಿಸಲು ಸಿದ್ಧ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.