ADVERTISEMENT

ವಕ್ಫ್ ವಿವಾದ | ಸಿಎಂ, ಡಿಸಿಎಂ ಮನೆಗೆ ರೈತರು ನುಗ್ಗುವ ದಿನ ದೂರವಿಲ್ಲ: HDK

ಜನರ ಕ್ಷಮೆ ಕೇಳಿ ಸರಿ ಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಎಚ್‌ಡಿಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 12:46 IST
Last Updated 4 ನವೆಂಬರ್ 2024, 12:46 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

(ಸಂಗ್ರಹ ಚಿತ್ರ)

ಚನ್ನಪಟ್ಟಣ: ‘ರಾಜ್ಯ ಸರ್ಕಾರ ವಕ್ಫ್ ವಿವಾದವನ್ನು ಬೇಗ ಸರಿ ಮಾಡದಿದ್ದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳಿಗೆ ರೈತರು ನುಗ್ಗುವ ದಿನಗಳು ದೂರವಿಲ್ಲ. ಎಷ್ಟು ದಿನ ಹೀಗೆ ಮೋಸ ಮಾಡುತ್ತೀರಾ? ಒಂದು ಸಮುದಾಯವನ್ನು ಚಿವುಟಿ, ಮತ್ತೊಂದು ಸಮುದಾಯದ ತೊಟ್ಟಿಲು ತೂಗುತ್ತೀರಿ? ಜನರಲ್ಲಿ ಕ್ಷಮೆ ಕೇಳಿ ಸರಿ ಮಾಡಿಕೊಳ್ಳಿ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ADVERTISEMENT

ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಸಂದರ್ಭದಲ್ಲಿ ವಕ್ಫ್ ವಿವಾದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ಬಾಂಗ್ಲಾದೇಶದ ಪ್ರಧಾನಿ ಮನೆಗೆ ಜನ ನುಗ್ಗಿದಂತೆ ರಾಜ್ಯಪಾಲರ ಮನೆಗೂ ಜನ ನುಗ್ಗುತ್ತಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ಎಂಎಲ್‌ಸಿ ಒಬ್ಬರು ಹೇಳಿದ್ದರು. ಅದೇ ಪರಿಸ್ಥಿತಿ ನಿಮಗೂ ಬಂದರೂ ಅಚ್ಚರಿ ಇಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ’ ಎಂದರು.

‘ವಿನಾಕಾರಣ ನನ್ನನ್ನು ವಿವಾದದಲ್ಲಿ ಎಳೆದು ತಂದರೆ ಎದುರಿಸಲು ಸಿದ್ಧನಿದ್ದೇನೆ. ಪಲಾಯನ ಮಾಡುವುದಿಲ್ಲ. ಮುಖ್ಯಮಂತ್ರಿಯಾದವರು ಸುಳ್ಳು ಹೇಳಬಾರದು. ಸತ್ಯ ಹರಿಶ್ಚಂದ್ರನಂತೆ ಸತ್ಯಮೇವ ಜಯತೇ ಜಪ ಮಾಡುತ್ತಲೇ ದಿನವೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಕಾಂಗ್ರೆಸ್ ಜನರನ್ನು ಧರ್ಮ ಮತ್ತು ಜಾತಿ ಹೆಸರಿನಲ್ಲಿ ಒಡೆದಾಳುತ್ತಿದೆ. ಇದು ಕಾಂಗ್ರೆಸ್ ಸರ್ವನಾಶದ ಕಾಲ. ಅದನ್ನು ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ. ಇವರ ನಡವಳಿಕೆಯಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತಪ್ಪಿದ್ದರೆ ಜನರ ಮುಂದಿಡಿ’

‘ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲೂ ವಕ್ಫ್ ತೀರ್ಮಾನ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಬೇಜವಾಬ್ದಾರಿತನದ್ದು. ನಾನು ಸಿ.ಎಂ ಆಗಿದ್ದಾಗ ನನ್ನ ಮುಂದೆ ಯಾವುದೇ ವಕ್ಫ್ ಕಡತ ಬಂದಿರಲಿಲ್ಲ. ರೈತರ ಭೂಮಿ‌ಯಾಗಲಿ, ಹಿಂದೂ ಮಠದ ಭೂಮಿಯಾಗಲಿ, ರಾಮನಗರದ ಗುಡ್ಡಬೆಟ್ಟವನ್ನು ವಕ್ಫ್‌ಗೆ ನೀಡಲು ಯಾವುದೇ ಕಡತ ನನ್ನ ಬಳಿ ಬಂದಿರಲಿಲ್ಲ. ಯಾವ ದೃಷ್ಟಿಯಿಂದ ಸಿದ್ದರಾಮಯ್ಯ ಹೇಳಿದ್ದಾರೋ ಗೊತ್ತಿಲ್ಲ. ಮಾಡಿರುವ ತಪ್ಪನ್ನು ಬೇರೆಯವರ ಮೇಲೆ ಹೊರಿಸಬೇಡಿ. ಒಂದು ವೇಳೆ ನಮ್ಮ ತಪ್ಪಿದ್ದರೆ ಜನರ ಮುಂದೆ ಇಡಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

‘ಒಂದು ವೇಳೆ ನನ್ನ ಕಾಲದಲ್ಲಿ ವಕ್ಫ್ ವಿಚಾರಕ್ಕೆ ಸಂಬಂಧಿಸಿ ಏನಾದರೂ ಆಗಿದ್ದರೆ, ಅದಕ್ಕೂ ಕಾಂಗ್ರೆಸ್ ಪಕ್ಷವೇ ಕಾರಣ. ಆಗ ಕಂದಾಯ ಸಚಿವರಾಗಿದ್ದವರು ಕೃಷ್ಣ ಭೈರೇಗೌಡ, ವಕ್ಫ್ ಮಂತ್ರಿ ಆಗಿದ್ದವರು ಈಗಿನ ವಕ್ಫ್ ಸಚಿವರೇ. ನನ್ನ ಗಮನಕ್ಕೆ ಬಾರದೆ ಅವರು ಮಾಡಿದ್ದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾನು ಯಾವುದೇ ಕಾನೂನುಬಾಹಿರ ಕೃತ್ಯಕ್ಕೆ ಅವಕಾಶ ಕೊಟ್ಟಿಲ್ಲ. ಇಂತಹ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.