ರಾಮನಗರ: ಹೈಕೋರ್ಟ್ ಚಾಟಿಯೇಟಿನ ತರುವಾಯ ನಗರ ಸ್ಥಳೀಯ ಸಂಸ್ಥೆಗಳು ರಸ್ತೆ ಅತಿಕ್ರಮಣ ಮತ್ತುಪಾದಚಾರಿ ಮಾರ್ಗದ ತೆರವಿಗೆ ಮುಂದಾಗಿದ್ದು, ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.
ಇದೇ ವರ್ಷ ಮಾರ್ಚ್‌ನಲ್ಲಿ ಒಂದೆರಡು ದಿನ ನಗರಸಭೆ ಆಯುಕ್ತ ನಂದಕುಮಾರ್ ನೇತೃತ್ವದಲ್ಲಿಪಾದಚಾರಿ ಮಾರ್ಗತೆರವು ಕಾರ್ಯಾಚರಣೆ ನಡೆದಿತ್ತು. ಆದರೆ ನಂತರದಲ್ಲಿ ಈ ಕಾರ್ಯಾಚರಣೆ ನಡೆದ ಸ್ಥಳದಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇದೀಗ ಮತ್ತೆ ಕಾರ್ಯಾಚರಣೆ ನಡೆಸುವುದಾಗಿ ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಎಲ್ಲೆಲ್ಲೂ ಒತ್ತುವರಿ: ನಗರದ ಒಳಗಿನ ಬಹುತೇಕ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ಬೀದಿ ಬದಿಯ ವರ್ತಕರು, ಅಂಗಡಿ ಮುಂಗಟ್ಟುಗಳವರು ಫುಟ್‌ಪಾತ್ ಅನ್ನು ತಮ್ಮ ಸ್ವಂತ ಜಾಗ ಎಂಬಂತೆ ಆಕ್ರಮಿಸಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಪಾದಚಾರಿ ಮಾರ್ಗವೇ ಕಾಣದಂತೆ ಅತಿಕ್ರಮಿಸಲಾಗಿದೆ.
ಐಜೂರು–ಸ್ಟೇಷನ್ ರಸ್ತೆಯ ಎರಡೂ ಬದಿಯಲ್ಲಿ ಫುಟ್‌ಪಾತ್ ಕಂಡೂ ಕಾಣದಂತೆ ಇದೆ. ಇವುಗಳ ಮೇಲೆಯೇ ಸಾಕಷ್ಟು ಬೀದಿ ಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ತರಕಾರಿ, ಹಣ್ಣು ಮಾರಾಟಗಾರರೂ ಅಂಗಡಿ ಹಾಕಿಕೊಂಡಿದ್ದಾರೆ. ಮುಂದುವರಿದಂತೆ ಅಲ್ಲಲ್ಲಿ ಅಂಗಡಿಗಳ ಮಾಲೀಕರು ತಮ್ಮಲ್ಲಿನ ಸಾಮಾನು ಸರಂಜಾಮುಗಳನ್ನು ಹೇರಿದ್ದಾರೆ. ಇದರಿಂದಾಗಿ ಫುಟ್‌ಪಾತ್ ಕಾಣದಂತೆ ಆಗಿದೆ.
‘ಸ್ಟೇಷನ್ ರಸ್ತೆಯು ಮೊದಲೇ ತೀರಾ ಇಕ್ಕಟ್ಟಾಗಿದೆ. ಇದರ ಜೊತೆಗೆ ಇರುವ ಜಾಗವನ್ನೂ ವರ್ತಕರು ಅತಿಕ್ರಮಿಸಿದ್ದಾರೆ. ಇದರಿಂದ ರಸ್ತೆಯಲ್ಲಿ ಓಡಾಡುವುದೇ ಕಷ್ಟ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ಕಾರಣ ಮಧ್ಯಭಾಗದಲ್ಲೇ ಪಾದಚಾರಿಗಳು ತೆರಳಬೇಕು. ಇದರಿಂದ ಆಗಾಗ್ಗೆ ಬೈಕ್‌ಗಳು ಜನರಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯವಾಗಿದೆ. ಫುಟ್‌ಪಾತ್ ಅನ್ನು ಜನರ ಓಡಾಟಕ್ಕೇ ಮೀಸಲಿಡುವ ನಿಯಮ ಬರಬೇಕು’ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಇನ್ನೂ ಒಳ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳ ಸ್ಥಿತಿ ಹೇಳುವಂತೆ ಇಲ್ಲ. ಹಳೆ ಬಸ್ ನಿಲ್ದಾಣ ವೃತ್ತದಿಂದ ಕೋರ್ಟ್ ಆವರಣದವರೆಗೆ ಫುಟ್‌ಪಾತ್ ಅನ್ನು ಪೂರ್ತಿ ಪಾರ್ಕಿಂಗ್‌ಗೆ ಬಳಸಿಕೊಳ್ಳಲಾಗುತ್ತಿದೆ. ಐಜೂರು ವೃತ್ತದಿಂದ ಕೆಂಪೇಗೌಡ ವೃತ್ತದವರೆಗೆ ಎಲ್ಲಿಯೂ ಪಾದಚಾರಿ ಮಾರ್ಗವೇ ಇಲ್ಲ. ಜನರು ವಾಹನ ಸಂದಣಿಯ ನಡುವೆಯೇ ತೂರಿಕೊಂಡು ನಡೆಯಬೇಕಾದ ಪರಿಸ್ಥಿತಿ ಇದೆ. ಎಂ.ಜಿ. ರಸ್ತೆ, ಛದ್ರದ ಬೀದಿ, ಕಾಮಣ್ಣನ ಗುಡಿ ವೃತ್ತ, ಬಾಲಗೇರಿ... ಹೀಗೆ ಜನನಿಬಿಡ ಪ್ರದೇಶಗಳಲ್ಲಿ ಎಲ್ಲಿಯೂ ಜನರ ಓಡಾಟಕ್ಕೆ ಅನುಕೂಲವಾಗುವಂತಹ ಮಾರ್ಗಗಳಿಲ್ಲ.
ಸ್ಟೇಷನ್ ರಸ್ತೆಯಲ್ಲಿ ಫುಟ್‌ಪಾತ್‌ಗೆ ಪ್ರತ್ಯೇಕ ಜಾಗ ಇರದ ಕಾರಣ ಚರಂಡಿ ಮಾರ್ಗವನ್ನೇ ಪಾದಚಾರಿ ಮಾರ್ಗವನ್ನಾಗಿ ಬಳಕೆ ಮಾಡಲಾಗುತ್ತಿದೆ. ಅಲ್ಲಲ್ಲಿ ಸ್ಲ್ಯಾಬ್‌ಗಳು ಚರಂಡಿಗೆ ಬಿದ್ದು ಕಂದಕ ಉಂಟಾಗಿದೆ. ಜನರು ಇದರ ಮೇಲೆಯೇ ನಡೆದಾಡತೊಡಗಿದ್ದಾರೆ. ಇದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ.
ತಳ್ಳುಗಾಡಿಗಳ ಹಾವಳಿ ಉಲ್ಬಣ
ಪಿಡಬ್ಲ್ಯುಡಿ ವೃತ್ತದಿಂದ ರೈಲು ನಿಲ್ದಾಣದ ರಸ್ತೆಯವರೆಗಿನ ಸ್ಥಿತಿ ಸಹ ಇದಕ್ಕಿಂತ ಭಿನ್ನ ಏನಿಲ್ಲ. ಇಲ್ಲಿ ವಿಸ್ತಾರವಾದ ಪಾದಚಾರಿ ಮಾರ್ಗ ಇದೆಯಾದರೂ ವರ್ತಕರು ಅತಿಕ್ರಮಿಸಿಕೊಂಡ ಕಾರಣ ಜನರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಜೂನಿಯರ್ ಕಾಲೇಜು ಮೈದಾನಕ್ಕೆ ಹೊಂದಿಕೊಂಡಂತೆ ಇರುವ ಪಾದಚಾರಿ ಮಾರ್ಗದಲ್ಲಿ ನಿತ್ಯ ಸಂಜೆಯಾದರೆ ಜನರು ಸೇರುತ್ತಾರೆ. ಬೀದಿ ಬದಿಯ ತಳ್ಳುಗಾಡಿಗಳು ಇದೇ ಫುಟ್‌ಪಾತ್ ಮೇಲೆಯೇ ವ್ಯಾಪಾರ ಆರಂಭಿಸುತ್ತವೆ.
ವಾಟರ್ ಟ್ಯಾಂಕ್ ವೃತ್ತದಲ್ಲಿ ಫುಟ್‌ಪಾತ್ ಮೇಲೆಯೇ ಹಣ್ಣಿನ ಅಂಗಡಿ ಹಾಕಲಾಗಿದೆ. ಅಲ್ಲಿಂದ ಮುಂದೆ ಫುಟ್‌ಪಾತ್‌ನ ಒಂದು ಬದಿಯಲ್ಲಿ ವಾಹನಗಳು ನಿಲುಗಡೆ ಆಗುತ್ತಿದ್ದರೆ, ಮತ್ತೊಂದು ಕಡೆ ಗ್ಯಾರೇಜ್, ಆಟೊಮೊಬೈಲ್ಸ್ ಮೊದಲಾದ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.