ADVERTISEMENT

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿರ್ಬಂಧ; ಸವಾರರಿಗೆ ದಂಡದ ಬಿಸಿ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬೈಕ್‌, ಆಟೊ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 14:34 IST
Last Updated 1 ಆಗಸ್ಟ್ 2023, 14:34 IST
ರಾಮನಗರ ಹೊರವಲಯದ ಸಂಗಬಸವನ ದೊಡ್ಡಿ ಬಳಿ ನಿಯಮ ಉಲ್ಲಂಘಿಸಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬಂದ ಬೈಕ್‌ ಸವಾರರನ್ನು ಸಂಚಾರ ಪೊಲೀಸರು ತಡೆದರು – ಪ್ರಜಾವಾಣಿ ಚಿತ್ರ
ರಾಮನಗರ ಹೊರವಲಯದ ಸಂಗಬಸವನ ದೊಡ್ಡಿ ಬಳಿ ನಿಯಮ ಉಲ್ಲಂಘಿಸಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬಂದ ಬೈಕ್‌ ಸವಾರರನ್ನು ಸಂಚಾರ ಪೊಲೀಸರು ತಡೆದರು – ಪ್ರಜಾವಾಣಿ ಚಿತ್ರ   

ರಾಮನಗರ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (ರಾಷ್ಟ್ರೀಯ ಹೆದ್ದಾರಿ–75) ಬೈಕ್‌, ಆಟೊ, ಟ್ರ್ಯಾಕ್ಟರ್‌ ಹಾಗೂ ಕೃಷಿ ಬಳಕೆ ವಾಹನ ಸಂಚಾರ ನಿರ್ಬಂಧ ಮಂಗಳವಾರದಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಯಾಯಿತು. ನಿಯಮ ಮೀರಿ ಹೆದ್ದಾರಿ ಪ್ರವೇಶಿಸಿದವರಿಗೆ ಪೊಲೀಸರು ₹500 ದಂಡದ ಬಿಸಿ ಮುಟ್ಟಿಸಿದರು.

ಬೆಳಿಗ್ಗೆ 8 ಗಂಟೆಯಿಂದಲೇ ಹೆದ್ದಾರಿಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ನಿರ್ಬಂಧಿತ ವಾಹನಗಳು ಎಕ್ಸ್‌ಪ್ರೆಸ್ ವೇ ಪ್ರವೇಶಿಸದಂತೆ ನೋಡಿಕೊಂಡರು. ಸವಾರರಿಗೆ ಮಾಹಿತಿ ನೀಡಲು ಹೆದ್ದಾರಿಯ ಅಲ್ಲಲ್ಲಿ ಪ್ರವೇಶ ನಿರ್ಬಂಧ ಪೋಸ್ಟರ್‌ ಹಾಕಲಾಗಿತ್ತು.

‘ಪ್ರವೇಶ ನಿರ್ಬಂಧ ಕುರಿತು ಕೆಲವರಿಗೆ ಮಾಹಿತಿ ಕೊರತೆ ಇದೆ. ಹಾಗಾಗಿ, ಮೊದಲ ದಿನ ಹೆದ್ದಾರಿ ಪ್ರವೇಶಿಸಲು ಮುಂದಾದವರಿಗೆ ಪ್ರವೇಶ ಸ್ಥಳದ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಎಚ್ಚರಿಕೆ ನೀಡಿ‌, ಸರ್ವೀಸ್ ರಸ್ತೆಯಲ್ಲಿ ಕಳಿಸಿದರು. ಅದನ್ನು ಮೀರಿಯೂ ಹೆದ್ದಾರಿ ಪ್ರವೇಶಿಸಿದವರಿಗೆ ನಿರ್ಗಮನ ಸ್ಥಳಗಳಲ್ಲಿ ₹500 ದಂಡ ಹಾಕಲಾಯಿತು’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಎಸ್‌ಪಿ ಟಿ.ವಿ. ಸುರೇಶ್, ಡಿವೈಎಸ್‌ಪಿ ದಿನಕರ ಶೆಟ್ಟಿ, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಅವರು ಹೆದ್ದಾರಿಗೆ ಭೇಟಿ ನೀಡಿ, ಮೊದಲ ದಿನ ವಾಹನ ಸವಾರರ ಪ್ರತಿಕ್ರಿಯೆ ಗಮನಿಸಿದರು.

ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲೇ, ಪ್ರಾಧಿಕಾರವು ದ್ವಿಚಕ್ರ, ತ್ರಿಚಕ್ರ ಹಾಗೂ ಕೃಷಿ ಬಳಕೆಯ ವಾಹನಗಳಿಗೆ ನಿರ್ಬಂಧ ಹೇರುವ ತೀರ್ಮಾನ ಕೈಗೊಂಡಿತ್ತು. ಆಗಸ್ಟ್ 1ರಿಂದ ನಿಯಮ ಜಾರಿಗೆ ಬರುವಂತೆ ಸರ್ಕಾರ ಇದೇ ಜುಲೈ 12ರಂದು ಅಧಿಸೂಚನೆ ಹೊರಡಿಸಿತ್ತು.

ರಾಮನಗರ ಹೊರವಲಯದ ಸಂಗಬಸವನ ದೊಡ್ಡಿ ಬಳಿ ನಿಯಮ ಉಲ್ಲಂಘಿಸಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ  ಬಂದ ಬೈಕ್‌ ಸವಾರರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದರು – ಪ್ರಜಾವಾಣಿ ಚಿತ್ರ
ರಾಮನಗರ ಹೊರವಲಯದ ಸಂಗಬಸವನ ದೊಡ್ಡಿ ಬಳಿ ನಿಯಮ ಉಲ್ಲಂಘಿಸಿ ಎಕ್ಸ್‌ಪ್ರೆಸ್ ಹೆದ್ದಾರಿ ಪ್ರವೇಶಿಸುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಡೆಯಲು ಪೊಲೀಸರು ಹಾಗೂ ಹೆದ್ದಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು – ಪ್ರಜಾವಾಣಿ ಚಿತ್ರ
ರಾಮನಗರ ಹೊರವಲಯದ ಸಂಗಬಸವನ ದೊಡ್ಡಿ ಬಳಿ ನಿಯಮ ಉಲ್ಲಂಘಿಸಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ  ಬಂದ ಬೈಕ್‌ ಸವಾರರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದರು – ಪ್ರಜಾವಾಣಿ ಚಿತ್ರ

ಪೊಲೀಸರೊಂದಿಗೆ ಸವಾರರ ವಾಗ್ವಾದ

ಹೆದ್ದಾರಿ ಪ್ರವೇಶಿಸಿ ಬೆಂಗಳೂರು ಕಡೆಯಿಂದ ಬಂದ ಬೈಕ್ ಸವಾರರಿಬ್ಬರನ್ನು ಸಂಗಬಸವನ ದೊಡ್ಡಿ ಬಳಿ ಇರುವ ಹೆದ್ದಾರಿ ನಿರ್ಗಮನ ಸ್ಥಳದಲ್ಲಿ ಪೊಲೀಸರು ತಡೆದರು. ‘ನಿಯಮ ಮೀರಿ ಪ್ರವೇಶಿಸಿದ್ದಕ್ಕಾಗಿ ದಂಡ ಪಾವತಿಸಿ’ ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸವಾರರು ‘ನಾವೂ ರಸ್ತೆ ತೆರಿಗೆ ಪಾವತಿಸುತ್ತೇವೆ. ನಮಗೂ ಬೇಗನೇ ಹೋಗಬೇಕಿರುತ್ತದೆ. ಹೀಗಿರುವಾಗ ನಿರ್ಬಂಧ ಹೇರುವುದು ಎಷ್ಟು ಸರಿ?’ ಎಂದು ವಾಗ್ವಾದ ನಡೆಸಿದರು. ಅದಕ್ಕೆ ಪೊಲೀಸರು ‘ಎಕ್ಸ್‌ಪ್ರೆಸ್‌ ವೇನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಎಲ್ಲಿಯೂ ಪ್ರವೇಶವಿಲ್ಲ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಹೆದ್ದಾರಿಯಲ್ಲಿ ಈ ಬಗ್ಗೆ ಪೋಸ್ಟರ್ ಮತ್ತು ಫ್ಲೆಕ್ಸ್ ಕೂಡ ಹಾಕಲಾಗಿದೆ. ಅದನ್ನು ಗಮನಿಸದೆ ನಿಯಮ ಉಲ್ಲಂಘಿಸಿದ್ದೀರಿ. ಹಾಗಾಗಿ ದಂಡ ಪಾವತಿಸಲೇಬೇಕು’ ಎಂದರು. ನಿರ್ಬಂಧಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಲೇ ₹500 ದಂಡ ಪಾವತಿಸಿದ ಸವಾರರು ನಂತರ ಸರ್ವಿಸ್ ರಸ್ತೆಯಲ್ಲಿ ಮೈಸೂರು ಕಡೆಗೆ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.