ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ಮತ್ತು ಮನುಷ್ಯರ ನಡುವಿನ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಇರುವ ಸಮಸ್ಯೆಗೆ ಅರಣ್ಯ ಇಲಾಖೆಯು ಶಾಶ್ವತ ಪರಿಹಾರ ಕಂಡುಕೊಳ್ಳದೆ, ತೇಪೆ ಹಾಕುವ ಕೆಲಸ ಮಾಡಿಕೊಂಡೇ ಬಂದಿದೆ. ಅದರ ಪರಿಣಾಮವಾಗಿ, ಒಂದೆಡೆ ಕಾಡಾನೆಗಳ ಸಂತತಿ ಹೆಚ್ಚಾಗಿದ್ಡು, ನಾಡಿಗೆ ನುಗ್ಗಿ ಜೀವಹಾನಿ ಮತ್ತು ಬೆಳೆ ಹಾನಿ ಮಾಡುವುದು ಮಾಮೂಲಿಯಾಗಿದೆ. ಒಂದೆರಡು ದಶಕದ ಹಿಂದೆ ಇರದ ಸಮಸ್ಯೆ ಇದೀಗ, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅರಣ್ಯದಂಚಿನ ಜನರ ಜಮೀನು ನೆಚ್ಚಿಕೊಂಡು ಬದುಕಲಾರದ ಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕಿನ ಸ್ಥಿತಿಗತಿಯ ಅವಲೋಕನ.
ಕನಕಪುರ: ನೇಪಥ್ಯಕ್ಕೆ ಸರಿದ 2023ನೇ ವರ್ಷದಲ್ಲಿ ತಾಲ್ಲೂಕಿನ ವಿವಿಧೆಡೆ ನಡೆದ ಕಾಡಾನೆ ದಾಳಿಯಲ್ಲಿ ಬರೋಬ್ಬರಿ 8 ಮಂದಿ ಜೀವ ಅಮಾಯಕರು ಕಳೆದುಕೊಂಡಿದ್ದಾರೆ. ಪ್ರತಿಯಾಗಿ, ಆನೆ ದಾಳಿಯಿಂದ ರಕ್ಷಣೆ ಪಡೆಯಲು ಮನುಷ್ಯ ರೂಪಿಸಿದ ಸುರಕ್ಷಾ ಕಾರ್ಯತಂತ್ರದಿಂದ ಎರಡು ಕಾಡಾನೆಗಳು ಮೃತಪಟ್ಟಿವೆ.
ಕಾಡಾನೆ ಮತ್ತು ಮಾನವನ ನಡುವಣ ಈ ಸಂಘರ್ಷ ತಾಲ್ಲೂಕಿನಲ್ಲಿ ಮಾಮೂಲಿಯಾಗಿದೆ. ಕಾಡಂಚಿನಲ್ಲಿದ್ದರೂ ಹಿಂದೆ ಜನ ತಮ್ಮ ಪಾಡಿಗೆ ತಾವು ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಕಾಡಿನಲ್ಲಿರುವ ಆನೆಗಳು ಕಾಡಂಚಿಗೆ ಬಂದು ಹೋದರೂ ಗುಲ್ಲಾಗುತ್ತಿರಲಿಲ್ಲ. ಅದೊಂದು ರೀತಿಯಲ್ಲಿ ಸ್ವಾಭಾವಿಕವೇ ಎಂಬಂತಾಗಿತ್ತು.
ಕೆಲ ವರ್ಷಗಳಿಂದ ಶುರುವಾದ ಆಧುನಿಕ ಅಭಿವೃದ್ಧಿಯ ಪರ್ವವು, ಇಬ್ಬರೂ ಪರಸ್ಪರ ಎದುರುಗೊಳ್ಳುವಂತೆ ಮಾಡಿದೆ. ಮನುಷ್ಯ ಕಾಡಿನತ್ತ ಹೋದಷ್ಟೂ, ವನ್ಯಜೀವಿಗಳು ನಾಡಿನತ್ತ ಬರುತ್ತಿವೆ. ಈ ಸಮಸ್ಯೆಗೆ ಪ್ರಕೃತಿದತ್ತವಾಗಿ ಪರಿಹಾರ ರೂಪುಗೊಳ್ಳದಿರುವುದು, ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.
ಅರಣ್ಯ ಪ್ರದೇಶದ ಗಡಿ: ಕನಕಪುರ ತಾಲ್ಲೂಕಿನ ಮುಕ್ಕಾಲು ಭಾಗ ಅರಣ್ಯ ಪ್ರದೇಶದ ಗಡಿ ಹೊಂದಿದೆ. ಸಾತನೂರು ಹೋಬಳಿ, ಉಯ್ಯಂಬಳ್ಳಿ ಹೋಬಳಿ ಹಾಗೂ ಕೋಡಿಹಳ್ಳಿ ಹೋಬಳಿ ಭಾಗವು ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿದೆ. ಒಂದು ಕಡೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವ, ಮತ್ತೊಂಡೆಡೆ ಕಾವೇರಿ ವನ್ಯಜೀವಿ ಧಾಮ ಸುತ್ತುವರಿದಿದೆ.
ವನ್ಯಜೀವಿಗಳು ಹೆಚ್ಚಾಗಿರುವ ಅರಣ್ಯ ಪ್ರದೇಶದಿಂದ ಕಾಡಾನೆಗಳು ನಿರಂತರವಾಗಿ ರೈತರ ಜಮೀನುಗಳಿಗೆ ನುಗ್ಗತ್ತಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನು ನಾಶಪಡಿಸುತ್ತಲೇ ಇವೆ. ಕಾಡಾನೆಗಳ ಮುಂದೆ ಅಸಹಾಯಕರಾಗಿರುವ ರೈತರಿಗೆ, ತಮ್ಮ ಬೆಳೆ ಕೈ ಸೇರುತ್ತದೆಂಬ ಭರವಸೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿ, ತಮ್ಮ ಜಮೀನಿನನ್ನು ಪಾಳು ಬಿಟ್ಟು ಬದುಕಿಗೆ ಬೇರೆ ಕೆಲಸ ನೋಡಿಕೊಂಡಿದ್ದಾರೆ.
ಇದರ ನಡುವೆಯೂ ಕೆಲ ರೈತರು ಸೌರವಿದ್ಯುತ್ ಬೇಲಿ ಸೇರಿದಂತೆ ವಿವಿಧ ಕಾರ್ಯತಂತ್ರಗಳನ್ನು ಅನುಸರಿಸಿ ಬೆಳೆ ಬೆಳೆಯುತ್ತಿದ್ದಾರೆ. ಹಗಲು–ರಾತ್ರಿ ಕಾದು ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಆದರೂ, ಕಾಡಾನೆಗಳ ದಾಳಿಯ ಆತಂಕ ಅವರನ್ನು ಬಿಟ್ಟಿಲ್ಲ. ಇತ್ತೀಚೆಗೆ ಕಾಡಾನೆ ಜೊತೆಗೆ ಕಾಡುಹಂದಿ, ನವಿಲು, ಕೃಷ್ಣಮೃಗ, ಕಾಡೆಮ್ಮೆಗಳು ಸಹ ಜಮೀನಿನತ್ತ ಮುಖ ಮಾಡಿ ಬೆಳೆ ಹಾನಿ ಮಾಡುತ್ತಿವೆ.
ವಾಪಸ್ ಗ್ಯಾರಂಟಿ ಇಲ್ಲ: ‘ಕೆಲಸ–ಕಾರ್ಯಕ್ಕಾಗಿ ಜಮೀನಿಗೆ ಹೋದವರು ವಾಪಸ್ ಬರುತ್ತಾರೆಂಬ ಗ್ಯಾರಂಟಿ ಇಲ್ಲದೆ ಬದುಕಬೇಕಾದ ಸ್ಥಿತಿ ಕಾಡಂಚಿನ ಜನರದ್ದು. ಬೆಳಿಗ್ಗೆ ಬಿಸಿಲು ಬಿದ್ದ ಬಳಿಕ, ಸಂಜೆ ಸೂರ್ಯಾಸ್ತದೊಳಗೆ ಊರು ಸೇರಿಕೊಳ್ಳಬೇಕು. ಹೊರಗೆ ಹೋದವರು ವಾಪಸ್ ಬರುವ ಗ್ಯಾರಂಟಿ ಇಲ್ಲವಾಗಿದೆ’ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಕನಕಪುರದ ಎಚ್.ಕೆ. ರವಿ ‘ಪ್ರಜಾವಾಣಿ’ಯೊಂದಿಗೆ ಕಾಡಂಚಿನ ಜನರ ಬದುಕನ್ನು ಹಂಚಿಕೊಂಡರು.
‘ಜಮೀನಿಗೆ ಹೋದವರು, ದನ ಕಾಯುವವರು, ತೋಟದ ಕಾವಲು ಕಾಯುವವರು, ಕಾಡಿನ ದಾರಿಯಲ್ಲಿ ನಡೆದುಕೊಂಡು ಬರುವವರ ಮೇಲೆ ಯಾವಾಗ ಕಾಡಾನೆ ದಾಳಿ ನಡೆಯುತ್ತದೊ ತಿಳಿಯದು. ಇದುವರೆಗೆ ಆನೆ ದಾಳಿಗೆ ಬಲಿಯಾದವರೆಲ್ಲರೂ ಹೀಗೆ ಒಂದಲ್ಲ ಒಂದು ಕೆಲಸದಲ್ಲಿದ್ದಾಗ ಮೃತಪಟ್ಟವರೇ. ಜೀವಹಾನಿಗೆ ಪರಿಹಾರ ಕೊಡಲು ತೋರುವ ಉತ್ಸುಕತೆಯನ್ನು ಸರ್ಕಾರ ಸಮಸ್ಯೆಗೆ ಪರಿಹಾರ ರೂಪಿಸುವಲ್ಲಿ ತೋರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮದಲ್ಲದ ತಪ್ಪಿಗೆ ಜೈಲು: ಜಮೀನಿಗೆ ಬರುವ ಕಾಡುಪ್ರಾಣಿಗಳನ್ನು ತಡೆಯಲು ರೈತರು ಸೌರವಿದ್ಯುತ್ ಬೇಲಿಯ ಮೊರೆ ಹೋಗಿದ್ದಾರೆ. ಇನ್ನು ಕೆಲವರು ನೇರವಾಗಿ ವಿದ್ಯುತ್ ಸಂಪರ್ಕವನ್ನು ಬೇಲಿಗೆ ಕೊಟ್ಟಿದ್ದಾರೆ. ಈ ಬೇಲಿಗೆ ಸಿಲುಕಿ ಈಗಾಗಲೇ ಎರಡು ಕಾಡಾನೆಗಳು ಜೀವ ತೆತ್ತಿವೆ. ಕಾಡಾನೆಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಮಾಡಿದ ಈ ತಂತ್ರವು, ಅವರನ್ನು ಜೈಲುಪಾಲು ಮಾಡಿದೆ. ಅವರ ಕುಟುಂಬಗಳು ಕಣ್ಣೀರಿನಲ್ಲಿವೆ.
‘ರೈತರು ಉದ್ದೇಶಪೂರ್ವಕವಾಗಿ ಮಾಡದ ಕೆಲ ತಪ್ಪುಗಳಿಂದಾಗಿ ವನ್ಯಜೀವಿಗಳು ಸತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಭುತ್ವ ರೈತರ ಬಗ್ಗೆ ಕರುಣೆ ತೋರಿಸಬೇಕು. ಅದುಬಿಟ್ಟು ಬೇಕಾಬಿಟ್ಟಿ ಪ್ರಕರಣ ಜಡಿದು ಜೈಲಿಗೆ ಹಾಕಿದರೆ ಹೇಗೆ? ವನ್ಯಜೀವಿಗಳ ಹಾವಳಿಯನ್ನು ಅರಣ್ಯ ಇಲಾಖೆಯವರು ತಡೆದಿದ್ದರೆ, ಜೈಲಿಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಇಲ್ಲದಿದ್ದರೆ, ನಮ್ಮ ಜಮೀನುಗಳನ್ನು ಅರಣ್ಯ ಇಲಾಖೆಯವರೇ ಭೋಗ್ಯಕ್ಕೆ ಪಡೆದು ವರ್ಷಕ್ಕೆ ಇಷ್ಟು ಎಂದು ನಮಗೆ ಹಣ ಪಾವತಿಸಲಿ. ಹಾಗಾದರೂ, ಬದುಕಿಕೊಳ್ಳುತ್ತೇವೆ’ ಎಂದು ರೈತ ತಿಮ್ಮೇಗೌಡ ಹೇಳಿದರು.
ವರದಿ – ಎಚ್.ಎಂ. ರಮೇಶ್
ಚನ್ನಪಟ್ಟಣ: ಬೊಂಬೆನಗರಿ ಖ್ಯಾತಿಯ ಚನ್ನಪಟ್ಟಣ ತಾಲ್ಲೂಕಿನ ಹೆಸರು ಇದೀಗ ವನ್ಯಜೀವಿಗಳ ಹಾವಳಿ ವಿಷಯದಲ್ಲೂ ಕೇಳಿ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಕಾಡಾನೆಗಳ ದಾಳಿಯು ಇಲ್ಲಿನ ರೈತರನ್ನು ನಿದ್ದೆಗೆಡಿಸಿದೆ. ತುಂಬಿದ ಕೆರೆ–ಕಟ್ಟೆಗಳು ಹಾಗೂ ನೀರಾವರಿ ಜಮೀನು ಕಾಡಾನೆಗಳಿಗೆ ಒಂದು ರೀತಿಯಲ್ಲಿ ಸ್ವರ್ಗವಾಗಿದೆ.
ಚನ್ನಪಟ್ಟಣ ಹಾಗೂ ಸಾತನೂರು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರುವ ವಿರುಪಾಕ್ಷಿಪುರ ಹೋಬಳಿಯ ತೆಂಗಿನಕಲ್ಲು, ಕಬ್ಬಾಳು, ಬಿ.ವಿ. ಹಳ್ಳಿ, ಅರಳಾಳುಸಂದ್ರ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಅಡ್ಡವಾಗಿದೆ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ಕಾಡಾನೆಗಳ ಸಂಖ್ಯೆ ಶೇ 50ರಿಂದ 60ರಷ್ಟು ಹೆಚ್ಚಾಗಿದೆ. ಯಾವುದೇ ದಿನಪತ್ರಿಕೆಗಳನ್ನು ತಿರುವು ಹಾಕಿದರೆ ಕಾಡಾನೆಗೆ ಸಂಬಂಧಿಸಿದ ಸುದ್ದಿ ಕಾಯಂ ಆಗಿರುತ್ತದೆ.
ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಸಂತತಿ ಹೆಚ್ಚುತ್ತಲೇ ಇದೆ. ಇವು ತೆಂಗಿನಕಲ್ಲು, ಕಬ್ಬಾಳು, ಬಿ.ವಿ.ಹಳ್ಳಿ, ಅರಳಾಳುಸಂದ್ರ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಈ ಭಾಗದ ರೈತರ ಬೆಳೆಗಳ ಮೇಲೆ ಸತತ ದಾಳಿ ನಡೆಸುತ್ತಿವೆ. ಬಿ.ವಿ. ಪಾಳ್ಯ, ಭೂಹಳ್ಳಿ, ಸಿಂಗರಾಜಿಪುರ, ಬೈರಶೆಟ್ಟಿಹಳ್ಳಿ, ಶ್ಯಾನುಭೋಗನಹಳ್ಳಿ, ಕೋಡಂಬಳ್ಳಿ, ಮಾದೇಗೌಡನದೊಡ್ಡಿ, ವಿಠಲೇನಹಳ್ಳಿ, ದೊಡ್ಡನಹಳ್ಳಿ, ತಗಚಗೆರೆ, ತಿಮ್ಮಸಂದ್ರ, ಬ್ರಹ್ಮಣೀಪುರ ಸೇರಿದಂತೆ ಹಲವು ಗ್ರಾಮಗಳ ರೈತರ ಬೆಳೆಗಳನ್ನು ಧ್ವಂಸ ಮಾಡುತ್ತಿವೆ. ಆನೆಗಳ ಹಾವಳಿಗೆ ರೈತರು ತತ್ತರಿಸಿದ್ದಾರೆ.
ನೀರು, ಮೇವಿನ ಸ್ವರ್ಗ: ‘ತಾಲ್ಲೂಕಿನ ಹಲವಾರು ಕೆರೆಗಳು ಕಣ್ವ ಏತ ನೀರಾವರಿ ಯೋಜನೆಯಿಂದ ತುಂಬಿವೆ. ಬೇಸಿಗೆಯಲ್ಲಿ ಕಾಡಿನಲ್ಲಿ ಕುಡಿಯುವ ನೀರು ಸಿಗದ ಕಾರಣ, ಕಾಡಾನೆಗಳು ನೀರು ಅರಸಿಕೊಂಡು ಬರುತ್ತವೆ. ಕೆರೆಯಲ್ಲಿ ನೀರು ಕುಡಿದು ನಂತರ, ಅಲ್ಲಿಯೇ ವಿರಮಿಸಿ ತೆರಳುವಾಗ ಅಕ್ಕಪಕ್ಕದ ಬೆಳೆಗಳನ್ನೂ ನಾಶ ಮಾಡುತ್ತವೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
‘ಕಾಡಾನೆ ದಾಳಿ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ದಾಳಿ ತಡೆಯಲು ಇಲಾಖೆಯವರು ಮುಂದಾಗುವುದಿಲ್ಲ. ಅವರು ಬರುವಷ್ಟರಲ್ಲಿ ಬೆಳೆ ನಾಶವಾಗಿರುತ್ತದೆ. ಕಾಡಾನೆಗಳ ವಿಷಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾಗಿದೆ’ ಎಂದು ಬಿ.ವಿ. ಹಳ್ಳಿ ಗ್ರಾಮದ ರೈತರಾದ ಗಂಗಣ್ಣ ಮತ್ತು ದೊಡ್ಡಣ್ಣ ದೂರಿದರು.
ರೈತ ಆತ್ಮಹತ್ಯೆ: ತಾಲ್ಲೂಕಿನಲ್ಲಿ ಈವರೆಗೆ ಕಾಡಾನೆಗಳು ದಾಳಿಗೆ ಒಬ್ಬ ರೈತ ಮಹಿಳೆ ಸೇರಿದಂತೆ ಇಬ್ಬರು ರೈತರು ಹಾಗೂ ಮಾವಿನತೋಟದ ಕಾವಲುಗಾರ ಬಲಿಯಾಗಿದ್ದಾರೆ. ಜೊತೆಗೆ, ಕಾಡಾನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತ ಶಿವಣ್ಣ (65)ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಜುಲೈ ತಿಂಗಳಿನಲ್ಲಿ ಸುಳ್ಳೇರಿಯ ತೋಟ ಮತ್ತು ಮಂಗಾಡಹಳ್ಳಿ ಬಳಿಯ ಮುಳ್ಳಿಕೆರೆಯಲ್ಲಿ ಐದು ಕಾಡಾನೆಗಳು ಬೀಡುಬಿಟ್ಟಿದ್ದವು. ಅಕ್ಕೂರು ಕೆರೆ, ಕೂಡ್ಲೂರು ಕೆರೆ, ಕೋಡಂಬಹಳ್ಳಿ ಕೆರೆ, ಬಿ.ವಿ. ಪಾಳ್ಯ ಕೆರೆ, ಹೊಂಗನೂರು ಕೆರೆ, ಮೊಗಳ್ಳಿ ಕೆರೆ ಸೇರಿದಂತೆ, ತಾಲ್ಲೂಕಿನ ಗಡಿಭಾಗದ ಕಬ್ಬಾಳು ಗ್ರಾಮದಲ್ಲಿ 12ಕ್ಕೂ ಹೆಚ್ಚು ಕಾಡಾನೆಗಳು ಗುಂಪಾಗಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿವೆ.
ನಗರದ ಸನಿಹ ಪ್ರತ್ಯಕ್ಷ: ಕಾಡಾನೆಗಳು ಕಾಡಂಚಿನ ಗ್ರಾಮಗಳಲ್ಲಷ್ಟೇ ಅಲ್ಲದೆ, ನಗರದ ಕೂಗಳತೆ ದೂರಕ್ಕೂ ಬಂದು ಆತಂಕ ಸೃಷ್ಟಿಸಿದ್ದವು. ಚನ್ನಪಟ್ಟಣದಿಂದ ಅನತಿ ದೂರದಲ್ಲಿರುವ ಲಾಳಾಘಟ್ಟ ಗ್ರಾಮ, ಮಂಗಳವಾರಪೇಟೆ ಬಳಿಯ ಮರಳುಹೊಲ, ಅಪ್ಪಗೆರೆ ಬಳಿಯ ಕಟ್ಟೆಯೊಂದರಲ್ಲಿ ಕಾಣಿಸಿಕೊಂಡಿದ್ದವು. ಈ ಜಾಗದಲ್ಲಿ ಸುತ್ತಮುತ್ತ ಖಾಲಿ ನಿವೇಶನಗಳು, ಪೊದೆಗಳು, ತೋಟಗಳು ಇದ್ದ ಕಾರಣ ಬೇರೆಡೆಗೆ ಹೋಗಲು ಯಾವುದೇ ಮಾರ್ಗವಿಲ್ಲದೆ ಅಲ್ಲೇ ಬೀಡುಬಿಟ್ಟಿದ್ದವು. ಸಂಜೆ ಹೊತ್ತಿಗೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ತೆಂಗಿನಕಲ್ಲು ಅರಣ್ಯ ಪ್ರದೇಶದ ಕಡೆಗೆ ಓಡಿಸುವಲ್ಲಿ ಸಫಲವಾಗಿದ್ದರು.
ನಾಲ್ಕು ಆನೆ ಸೆರೆ: ತೀವ್ರ ಉಪಟಳ ನೀಡುತ್ತಿದ್ದ ನಾಲ್ಕು ಆನೆಗಳನ್ನು ಕಳೆದ ಎರಡು ವರ್ಷಗಳಲ್ಲಿ ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದರು. 2022ರ ಆಗಸ್ಟ್ ತಿಂಗಳಿನಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ತಾಲ್ಲೂಕಿಗೆ ಬಂದಿದ್ದ 5 ಸಾಕಾನೆಗಳ ತಂಡ ಸಲಗ ಹರ್ಷ ನೇತೃತ್ವದಲ್ಲಿ ಬಿ.ವಿ. ಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂದು ಪುಂಡಾನೆ ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿದಿತ್ತು.
2023ರ ಜೂನ್ ತಿಂಗಳಿನಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಕರೆತಂದಿದ್ದ ಅಭಿಮನ್ಯು ನೇತೃತ್ವದ 5 ಸಾಕಾನೆಗಳ ತಂಡವು, ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಒಂದು ಪುಂಡಾನೆ ಹಾಗೂ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿದು ಮರಳಿ ಕಾಡಿಗಟ್ಟಿದ್ದವು.
ಕಾಡಿನಲ್ಲಿ ಮೇವು ನೀರಿದ್ದರೂ ಕೆಲ ಆನೆಗಳು ಜಮೀನುಗಳಿಗೆ ಬರುತ್ತಿವೆ. ಕಾಡಾನೆ ದಾಳಿಯಿಂದಾಗುವ ಬೆಳೆನಷ್ಟದ ಪರಿಹಾರವನ್ನು ಹೊಸ ಮಾರ್ಗಸೂಚಿ ಪ್ರಕಾರ ಕೊಡುತ್ತಿದ್ದೇವೆ– ಎ.ಎಲ್.ದಾಳೇಶ್ ಆರ್‌ಎಫ್‌ಒ ಪ್ರಾದೇಶಿಕ ವಲಯ ಅರಣ್ಯ ಕನಕಪುರ
ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಬೇಕಾಗುವಷ್ಟು ನೀರು ಮತ್ತು ಮೇವಿನ ವ್ಯವಸ್ಥೆ ಮಾಡಿದರೆ ಅವು ನಾಡಿಗೆ ಬರುವುದು ತಗ್ಗುತ್ತದೆ. ಇದರಲ್ಲಿ ಅರಣ್ಯ ಇಲಾಖೆಯ ವೈಫಲ್ಯವೂ ಇದೆ. ಬೆಳೆನಷ್ಟ ಪರಿಹಾರ ಸಹ ಸರಿಯಾಗಿ ಸಿಗುತ್ತಿಲ್ಲ– ಎಚ್.ಕೆ.ರವಿ ಜಿಲ್ಲಾ ದಿಶಾ ಕಮಿಟಿ ಸದಸ್ಯ ಕನಕಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.