ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕಬೆಟ್ಟಹಳ್ಳಿ ಬಳಿ ರಸ್ತೆಯಲ್ಲಿ ಸಂಚರಿಸಿತ್ತಿದ್ದ ಇಬ್ಬರು ಬೈಕ್ ಸವಾರರ ಮೇಲೆ ಆನೆ ದಾಳಿ ನಡೆಸಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.
ದೊಡ್ಡ ಬೆಟ್ಟಳ್ಳಿ ಮತ್ತು ಚಿಕ್ಕಬೆಟ್ಟಳ್ಳಿಯ ನಂಜುಂಡ ಮತ್ತು ವಿರೂಪಾಕ್ಷ ಗಾಯಗೊಂಡವರು.
ಇವರು ಕಂಬಿ ಕೆಲಸ ಮಾಡುತ್ತಿದ್ದು ಎಂದಿನಂತೆ ಮತ್ತಿಬ್ಬರು ಸ್ನೇಹಿತರಾದ ಸಂತೋಷ್ ಮತ್ತು ಕೀರ್ತಿ ಎಂಬುವರ ಜೊತೆ ಪ್ರತ್ಯೇಕವಾಗಿ ಬೈಕ್ ನಲ್ಲಿ ಕನಕಪುರಕ್ಕೆ ಹೋಗುತ್ತಿದ್ದರು.
ಚಿಕ್ಕಬೆಟ್ಟಹಳ್ಳಿ ಮುಂಭಾಗದ ಇಳಿಜಾರು ಪ್ರದೇಶದಲ್ಲಿ ಒಂಟಿ ಆನೆ ರಸ್ತೆಯನ್ನು ದಾಟಿಕೊಂಡು ಬಂದಿದೆ. ಈ ವೇಳೆ ಸಂತೋಷ ಮತ್ತು ಕೀರ್ತಿ ತಪ್ಪಿಸಿಕೊಂಡು ಮುಂದೆ ಹೋಗಿದ್ದಾರೆ. ಹಿಂಬದಿಯಲ್ಲಿ ಬರುತ್ತಿದ್ದ ನಂಜುಂಡ ಮತ್ತು ವಿರೂಪಾಕ್ಷ ಮೇಲೆ ದಾಳಿ ದಾಳಿ ನಡೆಸಿದೆ.
ಆನೆಯು ನಂಜುಂಡ ಮತ್ತು ವಿರೂಪಾಕ್ಷ ಇದ್ದಂತಹ ಬೈಕ್ ಅನ್ನು ಸೊಂಡಲಿನಿಂದ ಎತ್ತಿ ಬಿಸಾಡಿದೆ, ಆನೆ ಬಿಸಾಡಿದ ರಭಸಕ್ಕೆ ಬೈಕ್ ಸಮೇತ ಇಬ್ಬರು ರಸ್ತೆ ಬದಿಯಲ್ಲಿ ಬೇಲಿಗೆ ಬಿದ್ದಿದ್ದಾರೆ. ಆನೆಯು ಅಲ್ಲಿಂದ ಹೊರಟು ಹೋಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಗಾಯಗೊಂಡ ಇಬ್ಬರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಮತ್ತೆ ದಾಳಿ: ಎರಡು ದಿನಗಳ ಹಿಂದೆ ದೊಡ್ಡ ಬೆಟ್ಟಳ್ಳಿಯಲ್ಲಿ ಹೊಲ ಕಾಯುತ್ತಿದ್ದ ರೈತರನ ಮೇಲೆ ದಾಳಿ ನಡೆಸಿದ್ದ ಆನೆಯೇ ಶುಕ್ರವಾರ ಬೈಕ್ ಸವಾರರ ಮೇಲೆ ದಾಳಿ ನಡೆಸಿದೆ. ಈ ಆನೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.