ADVERTISEMENT

ಕನಕಪುರ | ಕಾಡಾನೆ ದಾಳಿ: ವಾರದಲ್ಲೇ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 17:19 IST
Last Updated 10 ಜುಲೈ 2024, 17:19 IST
   

ಕನಕಪುರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ತಾಲ್ಲೂಕಿನ ಗಟ್ಟಿಗುಂದ ಗ್ರಾಮದಲ್ಲಿ ಬುಧವಾರ ರೈತರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಸುರೇಶ್ (45) ಮೃತ ರೈತ.

ಸಂಜೆ 6.30ರ ಸುಮಾರಿಗೆ ಸುರೆಶ್ ಅವರು ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕುವುದಕ್ಕಾಗಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೋಟಕ್ಕೆ ಹೋಗಿದ್ದರು. ಮಾರ್ಗ ಮಧ್ಯೆ ಒಂಟಿ ಸಲಗವು ಅವರ ಮೇಲೆ ದಾಳಿ ನಡೆಸಿದೆ. ಹಠಾತ್ ದಾಳಿಯಿಂದಾಗಿ ತಪ್ಪಿಸಿಕೊಳ್ಳಲಾಗದ ಸುರೆಶ್ ಅವರು, ಆನೆಯ ದಾಳಿಯಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಸುರೇಶ್ ಅವರಿಗೆ ವಯಸ್ಸಾದ ತಂದೆ–ತಾಯಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಕಾಡಾನೆಗಳನ್ನು ತಡೆಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕಾಡಾನೆಗಳಿಂದಾಗಿ ರೈತರು ತೋಟಗಳನ್ನು ಹಾಳು ಬಿಡಬೇಕಾದ ಸ್ಥಿತಿ ಬಂದಿದೆ. ಸಂಜೆಯಾದರೆ ಹೊರಗಡೆ ಹೋಗಲು ಭಯವಾಗುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶವವನ್ನು ದಯಾನಂದ ಸಾಗರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಶವ ಹಸ್ತಾಂತರಿಸಲಾಗುವುದು. ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಘಟನೆ ಕುರಿತು ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.