ADVERTISEMENT

Karnataka Budget 2023: ರಾಮನಗರ ಅಭಿವೃದ್ದಿಗೆ ಸಿಗುವುದೇ ವೇಗ?

‘ಮೇಕದಾಟು’ ಸಾಕಾರ ನಿರೀಕ್ಷೆ; ಕಾಡಾನೆ ಹಾವಳಿಗೆ ಬೇಕು ಶಾಶ್ವತ ಪರಿಹಾರ; ಕೈಗಾರಿಕಾಭಿವೃದ್ದಿಗೆ ಸಿಗುವುದೇ ಒತ್ತು

ಓದೇಶ ಸಕಲೇಶಪುರ
Published 6 ಜುಲೈ 2023, 5:50 IST
Last Updated 6 ಜುಲೈ 2023, 5:50 IST
ಮೇಕೆದಾಟು ಪ್ರದೇಶ (ಸಾಂದರ್ಭಿಕ ಚಿತ್ರ)
ಮೇಕೆದಾಟು ಪ್ರದೇಶ (ಸಾಂದರ್ಭಿಕ ಚಿತ್ರ)   

ರಾಮನಗರ: ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದ ಸಾರಥಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡಿಸಲಿರುವ ಬಜೆಟ್‌ನಲ್ಲಿ ರಾಮನಗರ ಜಿಲ್ಲೆಗೆ ಏನೇನು ಸಿಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಜಿಲ್ಲೆಯವರಾಗಿರುವುದರಿಂದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪಕ್ಕದ ಬೆಂಗಳೂರಿನವರೇ ಆಗಿರುವುದರಿಂದ ಅಭಿವೃದ್ಧಿಯ ನಿರೀಕ್ಷೆಯ ಭಾರ ಹೆಚ್ಚಾಗಿದೆ.

ಈಗಾಗಲೇ ಘೋಷಣೆಯಾಗಿ ಪೇಪರ್‌ನಲ್ಲಿ ಮಾತ್ರವೇ ಉಳಿದಿರುವ ಅಭಿವೃದ್ಧಿ ಯೋಜನೆಗಳಿಗೆ ಮರುಜೀವ ಕೊಡುವರೇ? ತೆವಳುತ್ತಿರುವ ಯೋಜನೆಗಳಿಗೆ ತ್ವರಿತಗತಿಯ ಬೂಸ್ಟ್ ಸಿಗುವುದೇ? ರಾಜಧಾನಿ ಪಕ್ಕದಲ್ಲಿರುವ ಜಿಲ್ಲೆಗೆ ಹೊಸ ಯೋಜನೆಗಳನ್ನು ಘೋಷಿಸಿ, ಅಭಿವೃದ್ಧಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದೇ... ಹೀಗೆ ಹಲವು ಲೆಕ್ಕಾಚಾರಗಳು ಜಿಲ್ಲೆಯ ಜನರ ತಲೆಯಲ್ಲಿ ಹರಿದಾಡುತ್ತಿವೆ.

ADVERTISEMENT

ಮೇಕೆದಾಟು ಸಾಕಾರವಾಗಲಿ: ‘ಡಿಸಿಎಂ ಅವರೇ ಹೆಚ್ಚು ಆಸ್ಥೆ ವಹಿಸಿದ್ದ ಮೇಕೆದಾಟು ಅಣೆಕಟ್ಟೆ ಯೋಜನೆ ಅವರ ಸರ್ಕಾರದ ಅವಧಿಯಲ್ಲೇ ಸಾಕಾರವಾಗಬೇಕು ಎಂಬುದು ಜನರ ಬಯಕೆ. ಅದಕ್ಕೆ, ಬಜೆಟ್‌ನಲ್ಲಿ ಮತ್ತಷ್ಟು ಮೊತ್ತ ತೆಗೆದಿರಿಸಿ ಯೋಜನೆಗೆ ಚಾಲನೆ ನೀಡುವ ಕೆಲಸವಾಗಬೇಕು’ ಎಂದು ರೈತರ ಕೆಂಚೇಗೌಡ ಅಭಿಪ್ರಾಯಪಟ್ಟರು.

ಬೇಕು ಸುಸಜ್ಜಿತ ಬಸ್ ನಿಲ್ದಾಣ: ‘ಜಿಲ್ಲಾ ಕೇಂದ್ರವಾದರೂ ರಾಮನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲ. ಏಳೆಂಟು ಬಸ್‌ಗಳು ಸಹ ನಿಲ್ಲುವಷ್ಟು ಜಾಗವಿಲ್ಲ. ಬೆಂಗಳೂರು ಕಡೆಯಿಂದ ಬರುವ ಬಸ್‌ಗಳು ನಿಲ್ದಾಣ ಪ್ರವೇಶಿಸುವುದೇ ಇಲ್ಲ. ವಿವಿಧ ಊರುಗಳಿಗೆ ಇಲ್ಲಿಂದ ನೇರ ಬಸ್‌ಗಳಿಲ್ಲ. ಹಾಗಾಗಿ, ಬಸ್ ನಿಲ್ದಾಣದ ಸಂಕೀರ್ಣ ನಿರ್ಮಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಲೋಕೇಶ್ ಆಗ್ರಹಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿ: ‘ಜಿಲ್ಲೆಯಲ್ಲಿ ವಾಸೋದ್ಯಮಕ್ಕೂ ಉತ್ತೇಜನ ಕೊಡಬೇಕು. ಜಿಲ್ಲಾ ಕ್ರೀಡಾಂಗಣ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆರಂಭ, ಅರ್ಕಾವತಿ ನದಿಯನ್ನು ಪುನರುಜ್ಜೀವನಗೊಳಿಸಿ ಅಭಿವೃದ್ಧಿಪಡಿಸುವುದು, ಬಿಎಂಟಿಸಿ ಬಸ್ ಸೇವೆಯನ್ನು ಜಿಲ್ಲೆಗೆ ವಿಸ್ತರಣೆ, ಮಾಗಡಿಯ ಕೆಂಪೇಗೌಡರ ಕೋಟೆ ಅಭಿವೃದ್ಧಿ, ಮೈಸೂರು ದಸರಾ ಮಾದರಿಯಲ್ಲಿ ರಾಮನಗರದ ಚಾಮುಂಡೇಶ್ವರಿ ಕರಗವನ್ನು ಜಿಲ್ಲಾಡಳಿತವೇ ಅದ್ಧೂರಿಯಾಗಿ ಆಚರಿಸಬೇಕು. ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು’ ಎಂದು ಹರೀಶ್‌ಕುಮಾರ್ ಮತ್ತು ನಾಗರಾಜ್ ಅಭಿಪ್ರಾಯಪಟ್ಟರು.

ರಾಮನಗರದ ರೇಷ್ಮೆಗೂಡು ಮಾರುಕಟ್ಟೆ

ನೀರಾವರಿಗೆ ಉತ್ತೇಜನ ಬೇಕು: ‘ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಉತ್ತೇಜನ ನೀಡಬೇಕು, ಮಂಚನಬೆಲೆ ಎಡದಂತೆ ಮತ್ತು ಬಲದಂಡೆ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ’ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಪಿ. ನಾಗರಾಜ್ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಉತ್ಪನ್ನಗಳಿಗೆ ಪೂರಕವಾದ ಸಂಸ್ಕರಣಾ ಘಟಕಗಳನ್ನು ಆರಂಭಿಸಬೇಕು. ಭೈರಾಪಟ್ಟಣದ ಮಾವು ಸಂಸ್ಕರಣಾ ಘಟಕ ಶೀಘ್ರ ಕಾರ್ಯಾರಂಭ ಮಾಡಬೇಕು. ಮಾರುಕಟ್ಟೆ ಹರಾಜು ಪದ್ಧತಿಯನ್ನು ತಡೆಯುವುದಕ್ಕಾಗಿ ಕನಿಷ್ಠ ಬೆಂಬಲ ಆಧಾರಿತ (ಎಂಎಸ್‌ಪಿ) ಮಾರುಕಟ್ಟೆ ಭದ್ರತೆ ಒದಗಿಸಬೇಕು. ಇದರಿಂದ ರೈತರ ಬೆಳೆಗೆ ತಕ್ಕ ಬೆಲೆ ಸಿಗಲಿದೆ.
–ಸಿ. ಪುಟ್ಟಸ್ವಾಮಿ, ರೈತ ಮುಖಂಡ
‘ನಿವೇಶನರಹಿತರಿಗೆ ಸೂರಿನ ಭಾಗ್ಯ ಸಿಗಲಿ’ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಸಾವಿರಾರು ಮಂದಿ ನಿವೇಶನರಹಿತ ಬಡವರಿದ್ದಾರೆ. ಅಂತಹವರಿಗೆ ನಿವೇಶನ ಹಂಚುವುದಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ 10 ಎಕರೆ ಜಾಗ ಗುರುತಿಸಬೇಕು. ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸ್ಮಶಾನದ ಕೊರತೆ ನೀಗಿಸುವ ಬಗ್ಗೆ ಬಜೆಟ್‌ನಲ್ಲೇ ಘೋಷಣೆಯಾಗಬೇಕು. ಅರಣ್ಯ ಭೂಮಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದವರಿಗೆ ಸಾಗುವಳಿ ಪತ್ರ ವಿತರಿಸಬೇಕು.
– ಶಿವಕುಮಾರ ಸ್ವಾಮಿ, ದಲಿತ ಮುಖಂಡ ರಾಮನಗರ
ರಾಮನಗರವು ಜಿಲ್ಲಾ ಕೇಂದ್ರವಾಗಿ 15 ವರ್ಷವಾದರೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಯಾವುದೇ ವೇದಿಕೆ ಇಲ್ಲ. ಸಾಹಿತ್ಯ ಸಂಸ್ಕೃತಿ ಹಾಗೂ ಕಲೆಗಳಿಗೆ ಪೂರಕವಾಗಿ ರಂಗಮಂದಿರವನ್ನೊಳಗೊಂಡ ಒಂದು ಸಾಂಸ್ಕೃತಿಕ ಸಮುಚ್ಚವಯವನ್ನು ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಬೇಕು. ಕಲೆಗಳ ಪ್ರೋತ್ಸಾಹಕ್ಕೆ ಆರ್ಥಿಕ ಸಬಲತೆ ನೀಡಬೇಕು. ಕಲೆಗಳ ಉಳಿವಿಗಾಗಿ ಮೂಲ ಕಲಾವಿದರನ್ನು ಗುರುತಿಸಿ ಅವರಿಗೆ ಮನ್ನಣೆ ನೀಡಬೇಕಿದೆ. ಶಾಲಾ–ಕಾಲೇಜುಗಳಿವೆ ರಂಗ ಶಿಕ್ಷಕರನ್ನು ನೇಮಿಸಬೇಕು.
– ಡಾ. ಎಂ. ಭೈರೇಗೌಡ ಜಾನಪದ ವಿದ್ವಾಂಸ
ಹಾಲಿನ ದರ ನಿಗದಿಯನ್ನು ಸರ್ಕಾರ ನಿಗದಿಪಡಿಸುವ ಬದಲು ಹಾಲು ಮಹಾಮಂಡಳಗಳ ವಿವೇಚನೆಗೆ ಬಿಡಬೇಕು. ಗುಜರಾತ್ ಮತ್ತು ಕೇರಳದಲ್ಲಿರುವ ಮಾದರಿಯನ್ನು ಇಲ್ಲೂ ಅನುಸರಿಸಬೇಕು. ಹಾಲಿನ ಪ್ರೋತ್ಸಾಹಧನವನ್ನು ₹5ರಿಂದ ₹7ಕ್ಕೆ ಏರಿಕೆ ಮಾಡಬೇಕು. ಮಾರಾಟ ದರವನ್ನು ₹5 ಹೆಚ್ಚಿಸಬೇಕು. ಹೈನೋದ್ಯಮಕ್ಕೆ ಪೂರಕವಾಗಿ ಪಶು ಆಹಾರ ಕಾರ್ಖಾನೆ ಸ್ಥಾಪಿಸಬೇಕು. ಇದರಿಂದ ಪಶುಗಳ ಆರೋಗ್ಯ ವೃದ್ಧಿಯಾಗಿ ಹೆಚ್ಚಿನ ಹಾಲು ಸಿಗುತ್ತದೆ.
– ಪಿ. ನಾಗರಾಜ್ ಕೆಎಂಎಫ್ ಮಾಜಿ ಅಧ್ಯಕ್ಷ ರಾಮನಗರ
ವಿದ್ಯುತ್ ದರ ಏರಿಕೆಯು ರೇಷ್ಮೆ ಉದ್ಯಮಕ್ಕೆ ಹೊಡೆತ ಕೊಡಲಿದ್ದು ನಮಗೆ ವಿನಾಯಿತಿ ಕೊಡಬೇಕು. ಕೆಎಸ್‌ಐಸಿ ರೇಷ್ಮೆಯನ್ನು ನಿಯಮಿತವಾಗಿ ‌ ಖರೀದಿಸಬೇಕು. ರಾಮನಗರದಲ್ಲಿರುವ ಏಷ್ಯಾದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರಿಸದೆ ಇಲ್ಲೇ ಉಳಿಸಬೇಕು. ರೇಷ್ಮೆ ಕೊಡುತ್ತಿದ್ದ ಸಬ್ಸಿಡಿ ಪುನರಾರಂಭಿಸಬೇಕು. ರೇಷ್ಮೆ ಇಳುವರಿ ಆಧರಿಸಿ ಬೆಲೆ ನಿಗದಿ ಮಾಡಲು ವೈಜ್ಞಾನಿಕ ಮಾನದಂಡಗಳನ್ನು ಘೋಷಿಸಬೇಕು.
– ಶ್ರೀನಿವಾಸ್ ವಿ, ಉಪಾಧ್ಯಕ್ಷ ‌ರೀಲರ್ಸ್ ಅಸೋಸಿಯೇಷನ್ ರಾಮನಗರ
ರೇಷ್ಮೆ ಉದ್ಯಮ ಸ್ಥಾಪನೆಗೆ ವಿಶೇಷ ಒತ್ತು ನೀಡಲು ಉದ್ಯಮಿಗಳಿಗೆ ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ ಒದಗಿಸಬೇಕು. ಸ್ವಯಂಚಾಲಿನ ರೀಲಿಂಗ್ ಯಂತ್ರಗಳ ಮೇಲೆ ವಿಧಿಸಿರುವ ಶೇ 18ರಷ್ಟು ಜಿಎಸ್‌ಟಿ ರದ್ದುಪಡಿಸಬೇಕು.  ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಬೇಕು. ಬೆಂಗಳೂರಿನ ಕೈಗಾರಿಕೆಗಳನ್ನು ರಾಮನಗರಕ್ಕೆ ಸ್ಥಳಾಂತರಿಸಿ ಅಲ್ಲಿನ ಒತ್ತಡ ತಗ್ಗಿಸಬೇಕು. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ರೇಷ್ಮೆ ರಫ್ತು ಉತ್ತೇಜನಕ್ಕೆ ಆದ್ಯತೆ ನೀಡಬೇಕು. ರೀಲರ್ಸ್ ಪಾರ್ಕ್ ನಿಮಿಸಬೇಕು.
– ಜನಾರ್ಧನ, ಕಾರ್ಯಾಧ್ಯಕ್ಷ ರಾಮನಗರ ಜಿಲ್ಲಾ ದಲಿತ ಉದ್ಯಮಿಗಳ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.