ADVERTISEMENT

ಕುದೂರು | ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು: ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 5:21 IST
Last Updated 19 ನವೆಂಬರ್ 2024, 5:21 IST
ಕುದೂರು ಹೋಬಳಿಯ ಸೂರಪ್ಪನಹಳ್ಳಿ ಬಳಿ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಖಂಡಿಸಿ, ಗ್ರಾಮಸ್ಥರು ಬೆಸ್ಕಾಂ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು
ಕುದೂರು ಹೋಬಳಿಯ ಸೂರಪ್ಪನಹಳ್ಳಿ ಬಳಿ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಖಂಡಿಸಿ, ಗ್ರಾಮಸ್ಥರು ಬೆಸ್ಕಾಂ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು   

ಕುದೂರು: ಇಲ್ಲಿನ ಸೂರಪ್ಪನಹಳ್ಳಿ ಬಳಿ ವಿದ್ಯುತ್ ತಂತಿ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕರಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಕುದೂರು ಹೋಬಳಿಯ ನಾರಸಂದ್ರ ನಿವಾಸಿ ಸಿದ್ದಲಿಂಗ (ಪುಟ್ಟರಾಜು) (35) ಮೃತರು.

ಸಿದ್ದಲಿಂಗ ಅವರು ಎಲೆಕ್ಟ್ರಿಕಲ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಹೋಬಳಿಯ ಸೂರಪ್ಪನಹಳ್ಳಿ ಗ್ರಾಮದ ಬಳಿ ವಿದ್ಯುತ್ ಜಂಪ್ ಕಟ್ಟಾಗಿದ್ದನ್ನು ದುರಸ್ತಿಪಡಿಸಲು ಭಾನುವಾರ ಗುತ್ತಿಗೆದಾರರ ಜೊತೆ ತೆರಳಿದ್ದರು. ಕಂಬ ಏರಿ ದುರಸ್ತಿ ಕೆಲಸ ಮಾಡುತ್ತಿದ್ದ ಅವರಿಗೆ ವಿದ್ಯುತ್ ಪ್ರವಹಿಸಿದ್ದರಿಂದ ಕೆಳಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕುಣಿಗಲ್ ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಕಚೇರಿ ಮುಂದೆ ಪ್ರತಿಭಟನೆ: ಘಟನೆ ಖಂಡಿಸಿ ಸಿದ್ದಲಿಂಗ ಕುಟುಂಬಸ್ಥರು ಶವವನ್ನು ಕುದೂರು ಬೆಸ್ಕಾಂ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ನಟರಾಜ್, ಎಇಇ ಶಿವರಾಜು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ADVERTISEMENT

‘ತಾಲ್ಲೂಕಿನಲ್ಲಿ ಆಗಾಗ ವಿದ್ಯುತ್ ಅವಘಡಗಳು ನಡೆಯುತ್ತಿದ್ದರೂ, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ವಿದ್ಯುತ್ ಗುತ್ತಿಗೆದಾರರ ಬಳಿ ಕೆಲಸ ಮಾಡುವ ಕೂಲಿ ಕಾರ್ಮಿಕ ಜೀವ ಕಳೆದುಕೊಳ್ಳುವಂತಾಗಿದೆ’ ಎಂದು ತಾಲ್ಲೂಕು ಬೆಸ್ಕಾಂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ಧರಾಜು ದೂರಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಜಯರಾಮು, ಬಾಬಣ್ಣ ಸೇರಿದಂತೆ ನೂರಾರು ಸಾರ್ವಜನಿಕರು ಇದ್ದರು.

ಸಿದ್ಧಲಿಂಗ ಮೃತ ಕಾರ್ಮಿಕ
ದುರಸ್ತಿ ಕಾರ್ಯ ಮಾಡುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು
ನಟರಾಜು ಬೆಸ್ಕಾಂ ಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.