ADVERTISEMENT

ಒಡೆದಾಳುವ ನೀತಿಗೆ ದಾರಿ ಮಾಡಿಕೊಟ್ಟ ಆಂಜನೇಯ ಎಡಬಿಡಂಗಿ: ಸಾಹಿತಿ ಶಿವನಂಜಯ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 13:17 IST
Last Updated 18 ಫೆಬ್ರುವರಿ 2024, 13:17 IST
<div class="paragraphs"><p>ರಾಮನಗರ ತಾಲ್ಲೂಕಿನ ಬಿಳಗುಂಬದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಅವರ ‘ಆನು ಒಲಿದಂತೆ ಬಾಳುವೆ’ ಆತ್ಮಕಥೆಯನ್ನು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಬಿಡುಗಡೆ ಮಾಡಿದರು.</p></div>

ರಾಮನಗರ ತಾಲ್ಲೂಕಿನ ಬಿಳಗುಂಬದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಅವರ ‘ಆನು ಒಲಿದಂತೆ ಬಾಳುವೆ’ ಆತ್ಮಕಥೆಯನ್ನು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಬಿಡುಗಡೆ ಮಾಡಿದರು.

   

ರಾಮನಗರ: ‘ಆಂಜನೇಯ ಎಡಬಿಡಂಗಿ. ಆತನನ್ನು ನಾನು ಒಪ್ಪುವುದಿಲ್ಲ. ನಮ್ಮನ್ನು ತುಳಿದ ಬಿಳಿಯರಿಗೆ ದಾರಿ ಮಾಡಿಕೊಟ್ಟ ಆತ, ಒಡೆದಾಳುವ ನೀತಿಗೆ ಅವಕಾಶ ಕೊಟ್ಟ. ಚೂಪು ಮೂಗಿನ ‘ಎ’ ಆಕೃತಿಯ ಬಿಳಿಯರೇ ‘ಒ’ ಆಕೃತಿಯ ನಮ್ಮನ್ನು ಸದಾ ತುಳಿಯುತ್ತಾ ಬಂದಿದ್ದಾರೆ’ ಎಂದು ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಹೇಳಿದರು.

ತಾಲ್ಲೂಕಿನ ಬಿಳಗುಂಬದಲ್ಲಿ ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಅಭಿಮಾನಿಗಳ ಬಳಗ ಭಾನುವಾರ ಹಮ್ಮಿಕೊಂಡಿದ್ದ ತಮ್ಮ ‘ಆನು ಒಲಿದಂತೆ ಬಾಳುವೆ’ ಆತ್ಮಕಥೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸುಗ್ರೀವ, ವಿಭೀಷಣ ಕೂಡ ಒಡೆದಾಳುವ ನೀತಿಯ ಸಾಲಿನವರೇ. ರಾವಣ, ಹಿರಣ್ಯಾಕ್ಷ, ಹಿರಣ್ಯಕಶಿಪು, ಬಲಿ ನಮ್ಮವರು. ಅದರಲ್ಲೂ ರಾವಣ ಅತ್ಯಂತ ದೊಡ್ಡ ವ್ಯಕ್ತಿತ್ವದವನಾಗಿದ್ದ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರಾವಣ ನನಗೆ ರಕ್ಷಣೆ ಕೊಟ್ಟ. ಆದರೆ, ರಾಮ ಏನೂ ಕೊಡಲಿಲ್ಲ ಎಂದು ಚಿತ್ರಪಟ ರಾಮಾಯಣದಲ್ಲಿ ರಾವಣನ ವ್ಯಕ್ತಿತ್ವ ಕುರಿತು ಸೀತೆ ಹೇಳುತ್ತಾಳೆ. ಚರಿತ್ರೆಯಲ್ಲಿ ಹುದುಗಿರುವ ಇಂತಹ ಬೌದ್ಧಿಕ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ನಾವು ಚರಿತ್ರೆ, ಮಾನವಶಾಸ್ತ್ರವನ್ನು ಆಳವಾಗಿ ಓದಬೇಕು. ಸತ್ಯ ವಿಚಾರವನ್ನು ಹೇಳುವ ಭಗವಾನ್ ಅವರನ್ನು ಇಂತಹ ಸಮಾರಂಭಕ್ಕೆ ಕರೆಸಲು ಧೈರ್ಯ ಬೇಕು’ ಎಂದರು.

‘ನಮ್ಮೆಲ್ಲಾ ಸ್ವಾಮೀಜಿಗಳು ಮನುವಾದಕ್ಕೆ ಗಂಟು ಹಾಕಿಕೊಂಡಿದ್ದಾರೆ. ಆದರೆ, ನಾಗಾನಂದನಾಥ ಸ್ವಾಮೀಜಿ ಸೇರಿದಂತೆ ಕೆಲವರಷ್ಟೇ ಅದಕ್ಕೆ ವ್ಯತಿರಿಕ್ತವಾಗಿದ್ದಾರೆ. ಪುರೋಹಿತರನ್ನು ಕರೆಸದೆ, ಶಾಸ್ತ್ರ–ಪುರಾಣ ನೋಡದೆ ಆಷಾಢದ ರಾಹುಕಾಲದಲ್ಲಿ ತಾಳಿ‌ ಕಟ್ಟಿದ ನನಗೆ ಮಕ್ಕಳಾಗುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಇಬ್ಬರು ಮಕ್ಕಳಾದರು. ನಾವು ಪುರೋಹಿತಶಾಹಿ ಮನಸ್ಥಿತಿಯಿಂದ ಹೊರಬರಬೇಕು’ ಎಂದು ತಿಳಿಸಿದರು.

12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಸುಮಾರು 1.96 ಲಕ್ಷ ಶರಣರನ್ನು ಕಲ್ಯಾಣದ ಬೀದಿಗಳಲ್ಲಿ ಕಡಿದು ಹಾಕಿದರು. ಇದು ಬಸವಣ್ಣನವರ ಅಕ್ಷರ ಮತ್ತು ಅನ್ನ ದಾಸೋಹದ ವಿರುದ್ಧ ನಡೆದ ಹತ್ಯಾಕಾಂಡವಾಗಿತ್ತು.
– ಎಲ್‌.ಎನ್. ಮುಕುಂದರಾಜ್, ಸಾಹಿತಿ
ಜಾತಿ ವ್ಯವಸ್ಥೆ ಇರುವವರೆಗೆ ಮನುಷ್ಯನ ಮನಸ್ಸು ಕೊಳಕಾಗಿರುತ್ತದೆ. ಚಾತುರ್ವರ್ಣ ವ್ಯವಸ್ಥೆಗೆ ಪ್ರೋತ್ಸಾಹ ಕೊಡುವ ಯಾವುದೇ ಆಚರಣೆಗೆ ಬೆಂಬಲ ಕೊಡಬಾರದು. ಸಮಾನತೆ, ಸೌಹಾರ್ದ ಹಾಗೂ ಭ್ರಾತೃತ್ವ ನಮ್ಮ ಉಸಿರಾಗಬೇಕು.
– ಪ್ರೊ.ಕೆ.ಎಸ್. ಭಗವಾನ್, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.