ADVERTISEMENT

ರಾಮನಗರ: ಸಾಮೂಹಿಕ ಯೋಗಾಭ್ಯಾಸಕ್ಕೆ ಸಾಕ್ಷಿಯಾದ ಯೋಗ ದಿನ

ವಿವಿಧೆಡೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಯೋಗ ಮಹತ್ವದ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 13:26 IST
Last Updated 21 ಜೂನ್ 2024, 13:26 IST
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸದಲ್ಲಿ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸದಲ್ಲಿ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು   

ರಾಮನಗರ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಶುಕ್ರವಾರ ಸರ್ಕಾರಿ ಇಲಾಖೆಗಳು, ಶಾಲಾ–ಕಾಲೇಜುಗಳು ಸೇರಿದಂತೆ ವಿವಿಧೆಡೆ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಸಾರ್ವಜನಿಕರು, ಶಾಲಾ–ಕಾಲೇಜು, ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯೋಗ ಮಾಡುವ ಮೂಲಕ ಗಮನ ಸೆಳೆದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಬೆಳಿಗ್ಗೆ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವು, ಸಾಮೂಹಿಕ ಯೋಗಾಭ್ಯಾಸಕ್ಕೂ ಸಾಕ್ಷಿಯಾಯಿತು. ಯೋಗ ಗುರು ಪತಂಜಲಿ ಯೋಗ ಟ್ರಸ್ಟ್ ನ ಸತೀಶ್ ನೇತೃತ್ವದಲ್ಲಿ ಯೋಗಾಭ್ಯಾಸ ಜರುಗಿತು.

ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್, ಡಿವೈಎಸ್ಪಿ ದಿನಕರ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು–ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಯೋಗಪ್ರೇಮಿಗಳು ಸಹ ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

ADVERTISEMENT

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ‘ದೇಹವು ಚಿಕ್ಕಂದಿನಲ್ಲಿ ಸುಲಭವಾಗಿ ಬಾಗುವ ಜೊತೆಗೆ ಸದೃಢವಾಗಿಯೂ ಇರುತ್ತದೆ. ವಯಸ್ಸಾದಂತೆ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ ಸದೃಢತೆ ಜೊತೆಗೆ ಬಾಗುವಿಕೆ ಸಹ ಕಷ್ಟವಾಗುತ್ತದೆ. ಆದರೆ, ಯೋಗಾಭ್ಯಾಸ ಮಾಡುವುದರಿಂದ ಕಡೆಯವರೆಗೆ ಎರಡನ್ನೂ ಕಾಯ್ದುಕೊಳ್ಳಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಪದ್ಮಜಾ ಎಂ.ಎಸ್, ‘ಯೋಗವು ಭಾರತದ ಪ್ರಾಚೀನ ವ್ಯಾಯಾಮ ಪದ್ಧತಿಯಾಗಿದೆ. ಹಲವರು ಯೋಗದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ, ದೇಶ–ವಿದೇಶಗಳಲ್ಲಿ ಗಮನ ಸೆಳೆದಿದ್ದಾರೆ. ಹೀಗೆಯೇ ನಿಧಾನವಾಗಿ ಯೋಗವು ಜಾಗತಿಕ ಮನ್ನಣೆ ಪಡೆಯಿತು. 2018ರಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಘೋಷಿಸಲಾಯಿತು. ಅಂದಿನಿಂದ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. ದಿನಾಚರಣೆ ಪ್ರಯುಕ್ತ ಜೂನ್ 10ರಿಂದ 20ರವರೆಗೆ ಯೋಗೋತ್ಸವ ಹಮ್ಮಿಕೊಳ್ಳಲಾಗಿತ್ತು’ ಎಂದು ಹೇಳಿದರು.

ಬಳಲಿದ ವಿದ್ಯಾರ್ಥಿಗಳು: ಕಾರ್ಯಕ್ರಮದ ಅಂಗವಾಗಿ ನಗರದ ವಿದ್ಯಾರ್ಥಿಗಳು ಬೆಳಿಗ್ಗೆ 7ರ ಸುಮಾರಿಗೆ ಮೈದಾನಕ್ಕೆ ಬಂದಿದ್ದರು. ಸಾಮೂಹಿಕ ಯೋಗಾಭ್ಯಾಸ ಮತ್ತು ವೇದಿಕೆ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಸಮಯ 8.30 ಆಗಿತ್ತು. ಅಷ್ಟೊತ್ತಿಗಾಗಲೇ ಬಿಸಿಲು ಶುರುವಾಗಿದ್ದರಿಂದ, ನೆಲದಲ್ಲಿ ಕುಳಿತಿದ್ದ ಮಕ್ಕಳು ಬಳಲಿದಂತೆ ಕಂಡುಬಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಉಪಾಹಾರ ವ್ಯವಸ್ಥೆಯನ್ನು ಜಿಲ್ಲಾ ಕ್ರೀಡಾಂಗಣದ ಮೇಲ್ಬಾಗದ ಬಯಲಿನಲ್ಲೇ ಮಾಡಲಾಗಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಎಲ್ಲರೂ ನಿಂತುಕೊಂಡೇ ಉಪಾಹಾರ ಸವಿದರು.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳುಇದ್ದರು. ಆಹ್ವಾನ ಪತ್ರಿಕೆಯಲ್ಲಿದ್ದ ಜನಪ್ರತಿನಿಧಿಗಳು ಗೈರಾಗಿದ್ದರು. ಆಯುಷ್ ಇಲಾಖೆಯ ಸತೀಶ್ ಸ್ವಾಗತಿಸಿದರು.

ರಾಮನಗರದ ನೇತಾಜಿ ಪಾಪ್ಯುಲರ್ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಯೋಗ ಗುರುಗಳಾದ ಚಾಮಶೆಟ್ಟಿ ಕೆ.ಪಿ. ಶಿವಪ್ಪ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದಾರೆ

ಸರೋವರದ ದಂಡೆಯಲ್ಲಿ ಯೋಗ

ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರದೊಡ್ಡಿ ಗ್ರಾಮದ ಕೃಷ್ಣಯ್ಯನ ಕಟ್ಟೆ ಅಮೃತ ಸರೋವರದ ದಡದ ಮೇಲೆ ಪಂಚಾಯಿತಿ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿದ್ದು ವಿಶೇಷವಾಗಿತ್ತು. ತಾಲ್ಲೂಕು ಪಂಚಾಯಿತಿ ಇಒ ಪ್ರದೀಪ್ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಜನಪ್ರತಿನಿಧಿಗಳು ಸರ್ಕಾರಿ ಶಾಲೆ ಮಕ್ಕಳು ಶಿಕ್ಷಕರು ಹಾಗೂ ಪಂಚಾಯಿತಿ ಸಿಬ್ಬಂದಿ ಸಹ ಕೆರೆ ದಂಡೆ ಮೇಲೆ ಯೋಗಾಭ್ಯಾಸ ಮಾಡಿ ಗಮನ ಸೆಳೆದರು. ‘ಆರೋಗ್ಯ ವೃದ್ಧಿಸುವ ಯೋಗ’ ರಾಮನಗರ: ‘ಯೋಗಾಭ್ಯಾಸವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ನಿತ್ಯ ಒಂದು ತಾಸು ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಯೋಗದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಜ್ಞಾಪಕ ಶಕ್ತಿ ವೃದ್ದಿಸುತ್ತದೆ’ ಎಂದು ಜಿಲ್ಲಾ ಆರೋಗ್ಯ ಭಾರತಿ ಜಿಲ್ಲಾಅಧ್ಯಕ್ಷ ಹಾಗೂ ಪಟೇಲ್ ಆಂಗ್ಲ ಶಾಳೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು ಅಭಿಪ್ರಾಯಪಟ್ಟರು. ನಗರದ ಮಾಗಡಿ ರಸ್ತೆಯಲ್ಲಿರುವ ಪಟೇಲ್ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಭಾರತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಘ ಪರಿವಾರದ ಕಾರ್ಯವಾಹಕ ಸತೀಶ್ ಜಿಲ್ಲಾ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಅರುಣ್ ಕುಮಾರ್ ಶಿವಸ್ವಾಮಿ ಮತ್ತು ಶಾಲೆಯ ಮುಖ್ಯ ಶಿಕ್ಷರಾದ ಜಿ.ಆರ್. ವಿನೋದ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.